Advertisement

40 ಸಾವಿರ ಉಗ್ರರ ನೆಲೆಯಾಗಿದೆ ಪಾಕ್‌

01:41 AM Jul 25, 2019 | mahesh |

ವಾಷಿಂಗ್ಟನ್‌: ”ಪಾಕಿಸ್ತಾನದಲ್ಲಿ ಈಗಲೂ 30,000ದಿಂದ 40,000 ಉಗ್ರವಾದಿಗಳಿದ್ದು, ಅವರೆಲ್ಲರೂ ಅಫ್ಘಾನಿಸ್ತಾನ ಹಾಗೂ ಕಾಶ್ಮೀರದಲ್ಲಿ ಹೋರಾಡುವ ತರಬೇತಿ ಪಡೆದವರು” ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ.

Advertisement

ವಾಷಿಂಗ್ಟನ್‌ನಲ್ಲಿ, ಅಮೆರಿಕ ಸಂಸದರ ಚಿಂತಕರ ಚಾವಡಿ ‘ಯು.ಎಸ್‌. ಇನ್ಸ್ಟಿಟ್ಯೂಟ್ ಆಫ್ ಪೀಸ್‌’ನಲ್ಲಿ ಮಾತನಾಡುವಾಗ ಈ ವಿಚಾರವನ್ನು ಹೊರಹಾಕಿದ್ದಾರೆ. ”ಪಾಕ್‌ನ ಹಿಂದಿನ ಎಲ್ಲಾ ಸರ್ಕಾರಗಳೂ ಭಯೋತ್ಪಾದಕರ ಬಗ್ಗೆ ಅಮೆರಿಕಕ್ಕೆ ಸುಳ್ಳು ಮಾಹಿತಿಗಳನ್ನೇ ನೀಡುತ್ತಾ ಬಂದಿವೆ. ವಿಶೇಷವಾಗಿ ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನದಲ್ಲಿರುವ 40 ಉಗ್ರ ಸಂಘಟನೆಗಳ ಮಾಹಿತಿ ಅಡಗಿಸಿಡಲಾಗಿದೆ” ಎಂದು ಖಾನ್‌ ಆರೋಪಿಸಿದ್ದಾರೆ.

”ಕಳೆದ ಆಗಸ್ಟ್‌ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ, ಭಯೋತ್ಪಾದಕರಿಂದ ನಡೆಸಲ್ಪಡುತ್ತಿದ್ದ ಸಂಸ್ಥೆಗಳು, ಧರ್ಮಬೋಧನಾ ಕೇಂದ್ರಗಳನ್ನು ಜಪ್ತಿ ಮಾಡಲಾಗಿದೆ. ಉಗ್ರ ಚಟುವಟಿಕೆಗಳು ಚಿಗುರೊಡೆಯದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದಿದ್ದಾರೆ. ಇದೇ ವೇಳೆ, ಇರಾನ್‌ ಮೇಲೆ ಅಮೆರಿಕವು ದಾಳಿ ನಡೆಸಿದರೆ ಅತ್ಯಂತ ಘೋರ ಪರಿಣಾಮ ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.

ಇಮ್ರಾನ್‌ ಹೇಳಿಕೆಗೆ ತಿರುಗೇಟು
ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಸಹಾಯದಿಂದಲೇ ಅಮೆರಿಕಕ್ಕೆ ಉಗ್ರ ಒಸಾಮ ಬಿನ್‌ ಲಾಡೆನ್‌ನನ್ನು ಹತ್ಯೆಗೈಯ್ಯಲು ಸಾಧ್ಯವಾಗಿದ್ದು ಎಂದು ಇಮ್ರಾನ್‌ ಖಾನ್‌ ನೀಡಿದ್ದ ಹೇಳಿಕೆಗೆ ಅಮೆರಿಕದ ಗುಪ್ತಚರ ಇಲಾಖೆಯ (ಸಿಐಎ) ಮಾಜಿ ಮಹಾ ನಿರ್ದೇಶಕ ಡೇವಿಡ್‌ ಪೆಟ್ರಾಸ್‌ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲಿದ್ದಾನೆ ಎಂಬ ವಿಚಾರ ಐಎಸ್‌ಐಗೇ ತಿಳಿದಿರಲಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next