Advertisement

ರಷ್ಯಾ ಜತೆಗಿನ ಬಾಂಧವ್ಯಕ್ಕೆ ಧಕ್ಕೆ ಇಲ್ಲ: ಜೈಶಂಕರ್‌

01:28 AM Mar 25, 2022 | Team Udayavani |

ಹೊಸದಿಲ್ಲಿ/ಕೀವ್‌: ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿರುವುದನ್ನು ಮುಂದಿಟ್ಟು ಭಾರತವು ಆ ದೇಶದೊಂದಿಗೆ ಹೊಂದಿರುವ ಬಾಂಧವ್ಯ, ವ್ಯಾಪಾರ ವಹಿವಾಟಿಗೆ ಧಕ್ಕೆ ತರಲು ಬಯಸುತ್ತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಜತೆಗೆ ಭಾರತ ಕೂಡ ಹಾಲಿ ಬಿಕ್ಕಟ್ಟು ಶಾಂತಿಯುತವಾಗಿ ಇತ್ಯರ್ಥವಾಗಬೇಕೆಂದು ಬಯಸುತ್ತಿದೆ ಎಂದು ಹೇಳಿದೆ.

Advertisement

ರಾಜ್ಯಸಭೆಯಲ್ಲಿ ಗುರುವಾರ ಲಿಖಿತ ಉತ್ತರ ನೀಡಿದ  ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ದೇಶದ ಹಿತಾಸಕ್ತಿಯನ್ನು ಗಮನಿಸಿಯೇ ವಿದೇಶಾಂಗ ನೀತಿ ರಚಿಸಲಾಗಿದೆ. ಇತರ ರಾಷ್ಟ್ರಗಳ ಸಾರ್ವಭೌಮತೆಯನ್ನೂ ಗೌರವಿಸುತ್ತೇವೆ ಎಂದಿದ್ದಾರೆ.

ರಷ್ಯಾ ದಾಳಿಯನ್ನು ಖಂಡಿಸಲು ಭಾರತಕ್ಕೆ ಧೈರ್ಯ ಸಾಲದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಕೆಲವು ದಿನಗಳ ಹಿಂದೆ ಟೀಕಿಸಿದ್ದಕ್ಕೆ ಪ್ರತಿಯಾಗಿ ಸಚಿವರು ಅಧಿಕೃತವಾಗಿ ಸರಕಾರದ ನಿಲುವನ್ನು ಪ್ರಕಟಿಸಿದ್ದಾರೆ.

ನಮ್ಮ ಸಮಸ್ಯೆ ಅಲ್ಲ : 

ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದ್ದು ಭಾರತದ ಸಮಸ್ಯೆ ಅಲ್ಲ ಎಂದ ಜೈಶಂಕರ್‌, ಆ ಸಮಸ್ಯೆಯನ್ನು ಮುಂದಿಟ್ಟು ರಷ್ಯಾದ ಜತೆಗಿನ  ಬಾಂಧವ್ಯಕ್ಕೆ ಧಕ್ಕೆ ತರಲು ಬಯಸುವುದಿಲ್ಲ. ಜತೆಗೆ ಅಮೆರಿಕದೊಂದಿಗೆ ಭಾರತ ಹೊಂದಿರುವ ವಾಣಿಜ್ಯಿಕ ಬಾಂಧವ್ಯಕ್ಕೂ ಬಿಕ್ಕಟ್ಟನ್ನೂ ಥಳಕು ಹಾಕುವ ಅಗತ್ಯವಿಲ್ಲ ಎಂದು ಹೇಳಿದರು.

Advertisement

ಉಕ್ರೇನ್‌ ಮತ್ತು ರಷ್ಯಾ  ಜತೆಗೆ 6 ತತ್ವಗಳು :

ತತ್‌ಕ್ಷಣವೇ ಯುದ್ಧ ನಿಲ್ಲಬೇಕು ಮತ್ತು ಶಾಂತಿ ನೆಲೆಸಬೇಕು, ರಾಜತಾಂತ್ರಿಕ ಮತ್ತು ಮಾತುಕತೆ ಮೂಲಕವೇ ಬಿಕ್ಕಟ್ಟಿಗೆ ಪರಿಹಾರ, ಅಂತಾರಾಷ್ಟ್ರೀಯ ನಿಯಮಗಳಿಗೆ ಮತ್ತು ಸಾರ್ವಭೌಮತ್ವಕ್ಕೆ ಮನ್ನಣೆ, ಮಾನವೀಯತೆ ಆಧಾರದಲ್ಲಿ ಜನರ ಸ್ಥಳಾಂತರ, ಭಾರತದಿಂದಲೂ ಮಾನವೀಯ ನೆರವು ನೀಡಿಕೆ, ಬಿಕ್ಕಟ್ಟು ಪರಿಹರಿಸಲು ಉಕ್ರೇನ್‌ ಮತ್ತು ರಷ್ಯಾ  ಜತೆಗೆ ಸತತ ಸಂಪರ್ಕ ಎಂಬ ಆರು ತತ್ವಗಳನ್ನು ಕೇಂದ್ರ ಹೊಂದಿದೆ. ಅವುಗಳ ಆಧಾರದಲ್ಲಿ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ ಎಂದರು.

29ನೇ ದಿನಕ್ಕೆ ಯುದ್ಧ ಪ್ರವೇಶ :

ರಷ್ಯಾ-ಉಕ್ರೇನ್‌ ಕಾಳಗ ಆರಂಭವಾಗಿ ಗುರುವಾರಕ್ಕೆ 29  ದಿನಗಳಾಗಿವೆ. ರಷ್ಯಾ ಸೇನಾಪಡೆಗೆ ಸೇರಿದ ಯುದ್ಧನೌಕೆಯನ್ನು ಉಕ್ರೇನ್‌ನ ಬ್ರೆಡ್ಯಾನ್ಸ್ಕ್ ಬಂದರಿನಲ್ಲಿ ನಾಶಗೊಳಿಸಲಾಗಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ. ಮತ್ತೂಂದೆಡೆ, ಬ್ರುಸೆಲ್ಸ್‌ನಲ್ಲಿ ನಡೆದ ನ್ಯಾಟೋ ನಾಯಕರ ಸಭೆಯಲ್ಲಿ ಐರೋಪ್ಯ ಒಕ್ಕೂಟದ ಪೂರ್ವ ಭಾಗಕ್ಕೆ 40 ಸಾವಿರ ಯೋಧರನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಪುತಿನ್‌ ಪಡೆಯನ್ನು ಎದುರಿಸಲು ಮತ್ತಷ್ಟು ಶಸ್ತ್ರಾಸ್ತ್ರ ನೀಡುವಂತೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ನ್ಯಾಟೋವನ್ನು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next