“ನನಗೆ ಸಾಥ್ ಕೊಡಿ ಮುಂದಾಳತ್ವವನ್ನು ನಾನು ವಹಿಸಿಕೊಳ್ಳುತ್ತೇನೆ’ ಎಂದು ಗಟ್ಟಿ ದನಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರು ರೆಬೆಲ್ ಸ್ಟಾರ್ ಅಂಬರೀಷ್. ಅವರು ಹೀಗೆ ಹೇಳಲು ಕಾರಣ, ಪರಭಾಷೆ ಚಿತ್ರಗಳು ಕನ್ನಡ ಚಿತ್ರರಂಗವನ್ನು ಗದರಿಸುತ್ತಿವೆ ಎಂಬ ಮಾತಿಗೆ. ನಿರ್ದೇಶಕರ ಆದಿಯಾಗಿ ಪ್ರತಿಯೊಬ್ಬ ನಿರ್ಮಾಪಕರೂ ಪರಭಾಷೆ ಸಿನಿಮಾಗಳ ಕುರಿತು ಆಗ ಸಾಕಷ್ಟು ಹೇಳಿಕೊಂಡಿದ್ದರು.
ಪರಭಾಷೆ ಚಿತ್ರಗಳಿಗೆ ಹೇಗೆ ಕಡಿವಾಣ ಹಾಕಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಅಂಬರೀಷ್, “ಪರಭಾಷೆ ಹಾವಳಿ ಸಮಸ್ಯೆ ಎಲ್ಲರಿಗೂ ಗೊತ್ತಿರುವ ವಿಷಯ. ಇದು ಇಂದಿನ ಸಮಸ್ಯೆ ಅಲ್ಲ. ಇಲ್ಲಿಗೆ ಯಾರೂ ಬರಬೇಡಿ ಎಂಬುದನ್ನು ಹೇಳುತ್ತಿಲ್ಲ. ಆದರೆ, ಅದಕ್ಕೊಂದು ಮಿತಿ ಬೇಡವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದಕ್ಕೊಂದು ಸೆಲ್ಯೂಷನ್ ಕೊಡಬೇಕು. ನಾನು ಮಂಡಳಿಯಲ್ಲಿ ಈ ಬಗ್ಗೆ ಮಾತಾಡುತ್ತೇನೆ.
ಖಂಡಿತವಾಗಲೂ ಪರಭಾಷೆ ಚಿತ್ರಗಳಿಂದಾಗಿ ನಮ್ಮ ಚಿತ್ರರಂಗ ನಲುಗುತ್ತಿದೆ. ಈಗಲೇ ಹೀಗೆ. ಮುಂದೆ ಇನ್ಯಾಗೋ? ನಾವು ನಮ್ಮ ಭಾಷೆಯನ್ನು ಬಿಡಬಾರದು. “ಅ’ ಎಂಬ ಅಕ್ಷರ ಕಲಿತು ಇಲ್ಲಿನ ಮಣ್ಣಲ್ಲಿ ಆಡವಾಡಿ, ಎಲ್ಲವನ್ನೂ ಪಡೆದು ಈ ಮಟ್ಟಕ್ಕೆ ಬಂದು ನಿಂತಿದ್ದೇವೆ ಎಂದರೆ, ಅದಕ್ಕೆ ಕನ್ನಡನಾಡು ಮತ್ತು ಕನ್ನಡ ಚಿತ್ರರಂಗ ಕಾರಣ. ಇದನ್ನು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.
ಈ ಹಿಂದೆ ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಿದ್ದೂ ಇದೆ. ಈಗ ಮತ್ತೆ ಅಂತಹ ಕೆಲಸಕ್ಕೆ ಮುಂದಾಗಲೇಬೇಕು. ನನಗೆ ನಿರ್ದೇಶಕರು, ನಿರ್ಮಾಪಕರು, ಪ್ರದರ್ಶಕರು, ವಿತರಕರು ಸೇರಿದಂತೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬರೂ ಸಾಥ್ ಕೊಡುವುದಾದರೆ ಖಂಡಿತವಾಗಿಯೂ ನಾನು ಮುಂದಾಳತ್ವ ವಹಿಸಿಕೊಂಡು ಇದಕ್ಕೊಂದು ಒಳ್ಳೆಯ ಸೂತ್ರಕಂಡು ಹಿಡಿಯಲು ಪ್ರಯತ್ನಿಸುತ್ತೇನೆ.
ಇಂದು ಅಂಬರೀಷ್ ಅಂತ ಗೊತ್ತಾಗುವಂತೆ ಮಾಡಿದ್ದು ಈ ಕನ್ನಡಚಿತ್ರರಂಗ. ಕನ್ನಡಿಗರು. ಇದಕ್ಕೆ ಈಗ ಸಮಸ್ಯೆ ಎದುರಾಗಿದೆ ಅಂದಮೇಲೆ ನಾವು ಸುಮ್ಮನಿರೋದು ಸರಿಯಲ್ಲ. ಪರಭಾಷೆ ಹಾವಳಿ ಹೆಚ್ಚಾಗಿದೆ ಎಂಬುದು ನನಗೂ ಗೊತ್ತಿದೆ. ಈ ಸಮಸ್ಯೆಗೆ ನಾವೆಲ್ಲರೂ ಒಟ್ಟಾಗಿ ಸೇರಿ ಬಗೆಹರಿಸಲು ಮುಂದಾಗೋಣ’. ಎಂದು ತುಂಬಾ ಕೂಲ್ ಆಗಿ, ಅವರದೇ ಶೈಲಿಯ ಮಾತಿನಲ್ಲಿ ಎದುರಾಗಿರುವ ಸಮಸ್ಯೆ ನಿವಾರಣೆ ಬಗ್ಗೆ ಹೇಳಿಕೊಂಡಿದ್ದರು ಅಂಬರೀಷ್.