Advertisement

ಗೋ ರಕ್ಷಣೆಗೆ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳಬೇಕು:ರಾಘವೇಶ್ವರ ಶ್ರೀ

12:23 PM Jul 03, 2018 | |

ಮುಂಬಯಿ: ಭೂಸ್ವರ್ಗದ ಮೇಲೆ ಗೋಸ್ವರ್ಗವನ್ನು  ನಿರ್ಮಿಸಿ ದೇಸಿ ತಳಿಯ ಗೋವುಗಳನ್ನು ರಕ್ಷಿಸಿ ಬೆಳೆಸುವ ಕಾರ್ಯವು ನಮ್ಮಿಂದಾಗಬೇಕಾಗಿದೆ. ಗೋಮಾತೆ ನಮ್ಮೆಲ್ಲರ ಮಾತೆ. ಗೋವಿದ್ದರೆ ನಾವೆಲ್ಲರೂ ಸುಖವಾಗಿರಲು ಸಾಧ್ಯ. ಅಂತಹ ಪೂಜ್ಯನೀಯ ಗೋವು ತಳಿಗಳನ್ನು ರಕ್ಷಿಸಲು ನಾವು ನಮ್ಮನ್ನೇ ಸಮರ್ಪಿಸಿಕೊಳ್ಳಬೇಕು ಎಂದು ಹೊಸನಗರ ಶ್ರೀ ರಾಮಚಂದ್ರಾಪುರದ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಅಭಿಪ್ರಾಯಿಸಿದರು.

Advertisement

ಜು. 1 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ದೇಸಿ ಗೋವುಗಳ ಸಂವರ್ಧನ ಮಹಾಅಭಿಯಾನ ಕುರಿತ ಜಾಗೃತಿ ಗೋ-ಸ್ವರ್ಗ ಸಂವಾದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಪಶ್ಚಿಮದ ಘಟ್ಟದ ತಪ್ಪಲಲ್ಲಿ ನೂರಕ್ಕಿಂತಲೂ ಅಧಿಕ ಎಕರೆ ಭೂಮಿಯಲ್ಲಿ ಗೋಸ್ವರ್ಗವನ್ನು ಮಾಡಲಾಗಿದೆ. ದೇಸಿ ಗೋವುಗಳ ಸಂರಕ್ಷಣೆಯೊಂದಿಗೆ ಅವುಗಳಿಗೆ ಸ್ವತಂತ್ರವಾಗಿ ಬದುಕಲು ಇಲ್ಲಿ ಅವಕಾಶವನ್ನು ನೀಡಲಾಗುತ್ತದೆ. ಇಲ್ಲಿ ಎಲ್ಲಾ ರೀತಿಯ ಸೌಕರ್ಯಗಳೊಂದಿಗೆ ನೀರು, ಮೇವು ಮತ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿ, ನಶಿಸುತ್ತಿರುವ ಗೋವುಗಳ ವಿವಿಧ ತಳಿಗಳನ್ನು ಸಂರಕ್ಷಿಸಿ ಬೆಳೆಸುವ ಕಾರ್ಯಕ್ಕೆ ಈ ಯೋಜನೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈ ಯೋಜನೆಗೆ ಕೋಟ್ಯಾಂತರ ರೂ. ತಗುಲಲಿದೆ. ಏಳು ಕೋ. ನೂ. ಗಳಿಗಿಂತಲೂ ಅಧಿಕ ಹಣವನ್ನು ಈಗಾಗಲೇ ವ್ಯಯಿಸಲಾಗಿದೆ. ಇದು ದೇಶದಲ್ಲೆ ಒಂದು ರೀತಿಯ ವಿಶೇಷ ಮತ್ತು ಪ್ರಪ್ರಥಮ ಗೋಸಂರಕ್ಷಣ ಕೇಂದ್ರವಾಗಲಿದೆ. ಇಲ್ಲಿಗೆ ಭೇಟಿ ನೀಡುವ ಜನರಿಗೂ, ದೇಶದ ವಿವಿಧ ತಳಿಗಳ ಗೋವುಗಳನ್ನು ನೋಡಲು, ಗೋವುಗಳಿಂದ ಸಿಗುವ ಪ್ರಯೋಜನವನ್ನು ಪಡೆಯಲು ಎಲ್ಲರಿಗೂ ವ್ಯವಸ್ಥೆಯನ್ನು  ಮಾಡಲಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಇವರು ಮಾತನಾಡಿ, ಹಿಂದು ಧರ್ಮ ಹಾಗೂ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದೆ. ಇದೀಗ ದೇಸಿ ಗೋವುಗಳು ನಶಿಸುತ್ತಿರುವ ಸಂದರ್ಭದಲ್ಲಿ ಅದನ್ನು ಉಳಿಸಿ-ಬೆಳೆಸುವಲ್ಲಿ ಶ್ರೀಗಳು ಮಾಡುತ್ತಿರುವ ಪ್ರಯತ್ನ ಅಭಿನಂದನೀಯವಾಗಿದೆ. ಅವರಿ ಗೆ ನಾವೆಲ್ಲರೂ ಸಂಪೂರ್ಣ ಸಹಕಾರ ನೀಡಬೇ ಕಾಗಿದೆ ಎಂದು ಹೇಳಿದರು.

ಉದ್ಯಮಿ, ಬಜೆಪಿ ನೇತಾರ ಸುರೇಶ್‌ ಶೆಟ್ಟಿ ಗುರ್ಮೆ ಅವರು ಮಾತನಾಡಿ, ನಾವು ಹೆತ್ತತಾಯಿಗೆ ನೀಡುವ ಸ್ಥಾನವನ್ನು ಗೋಮಾ ತೆಗೂ ನೀಡಿದ್ದೇವೆ. ಅಂತಹ ಗೋವುಗಳ ರಕ್ಷಣೆ ಇಂದು ನಮ್ಮಿಂದಾಗಬೇಕು. ಅದಕ್ಕಾಗಿ ನಾವೆಲ್ಲರು ಪ್ರಯತ್ನಿಸಬೇಕು. ಗೋವುಗಳ ರಕ್ಷಣೆಯಲ್ಲಿ ತೊಡಗಿರುವ ಸಂತರಿಗೆ ಸದಾ ಸಹಕಾರ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಭಾರತೀಯತೆ ಎನ್ನುವುದು ಗೋವು ಮತ್ತು ಕೃಷಿ ಸಂಸ್ಕೃತಿಯಿಂದ ಕೂಡಿದೆ. ಇದರ ರಕ್ಷಣೆಯಾ ದಾಗ ಮಾತ್ರ ಭಾರತೀಯತೆ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯವಿದೆ ಎಂದು  ತಿಳಿಸಿದರು.

ಇನ್ನೋರ್ವ ಅತಿಥಿ ಉದ್ಯಮಿ ಸುರೇಶ್‌ ಭಂಡಾರಿ ಕಡಂದಲೆ ಇವರು ಮಾತನಾಡಿ, ಭಾರತೀಯ ಶ್ರೀಮಂತ ಸಂಸ್ಕೃತಿಯ ಚಿಹ್ನೆ ಗೋವಾಗಿದೆ. ಗೋವುಗಳ ರಕ್ಷಣೆ ದೇಸಿ ತಳಿಗಳ ನ್ನು ಉಳಿಸಿ-ಬೆಳೆಸುವಲ್ಲಿ ನಾವೆಲ್ಲರು ಒಟ್ಟಾಗಿ ಶ್ರಮಿಸೋಣ. ಮುಂಬಯಿಗರಿಗೆ ಇದು ಕಷ್ಟವಾದರೂ ಅದಕ್ಕೆ ಪ್ರಯತ್ನಿಸುವವರಿಗೆ ನಮ್ಮ ಆದಾಯದ ಒಂದು ಪಾಲನ್ನು ನೀಡಿ ಅವರ ಸೇವೆಯಲ್ಲಿ ಪಾಲು ಪಡೆಯೋಣ ಎಂದರು.

Advertisement

ಉದ್ಯಮಿ ಆನಂದ ಶೆಟ್ಟಿ ಇವರು ಮಾತನಾಡಿ, ಹೊಸ ನಗರ ಎಂಬುವುದು ಈಗ ಹಸು ನಗರವಾಗಿದ್ದು, ಶ್ರೀಗಳು ಗೋವುಗಳ ರಕ್ಷಣೆಗಾಗಿ ಗೋಸ್ವರ್ಗವನ್ನು ನಿರ್ಮಿಸುತ್ತಿದ್ದಾರೆ. ನಮ್ಮ ಜೀವನದಲ್ಲಿ ಗೋವುಗಳಿಗೆ ಬಹಳ ಪ್ರಾಮುಖ್ಯತೆಯಿದೆ. ಅದು ಧಾರ್ಮಿಕ, ವೈದ್ಯಕೀಯವಾಗಿ ಸಹಕಾರಿಯಾಗುತ್ತಿದೆ. ನಾವೆಲ್ಲರು ಸೇರಿ ಗೋಮಾತೆಯನ್ನು ರಕ್ಷಿಸೋಣ ಎಂದು ಹೇಳಿ ಶುಭಹಾರೈಸಿದರು.

ಶ್ರೀ ರಾಮಚಂದ್ರ ಮಠದ ಮುಂಬಯಿ ವಲಯದ ಅಧ್ಯಕ್ಷ ಕೃಷ್ಣ ಭಟ್‌ ಇವರು ಮಾತನಾಡಿ, ಗೋಸ್ವರ್ಗದಲ್ಲಿ ನಿರ್ಮಿಸುತ್ತಿರುವ ಸುಸಜ್ಜಿತ ಗೋ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಶ್ರೀ ಮಠದ ಮುಂಬಯಿ ವಲಯವು ವಹಿಸಲಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಇವರು ಮಾತನಾಡಿ, ಬಂಟರ ಸಂಘದಲ್ಲಿ ಇಂದು ಇಂತಹ ಪವಿತ್ರ ಕಾರ್ಯಕ್ರವೊಂದು ನಡೆದಿರುವುದು ಸಂತೋಷವಾಗಿದೆ. ನಾನು ಈ ಕಾರ್ಯಕ್ರಮದಲ್ಲಿ ಸಂಘದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದು, ಶ್ರೀಗಳು ನಿರ್ಮಿಸುತ್ತಿರುವ ಗೋಸ್ವರ್ಗಕ್ಕೆ ಯಾವ ರೀತಿಯಲ್ಲಿ ಸಹಕರಿಸಬೇಕು ಎಂಬುವುದರ ಬಗ್ಗೆ ಸಂಘದಲ್ಲಿ ಚರ್ಚಿಸುತ್ತೇವೆ. ಹಾಗೂ ನಮ್ಮಿಂದಾಗುವ ಸಂಪೂರ್ಣ ಸಹಕಾರವನ್ನು ಖಂಡಿತವಾಗಿಯೂ ಮಾಡಲಿದ್ದೇವೆ ಎಂದು ನುಡಿದರು.

ಪ್ರಾರಂಭದಲ್ಲಿ ಪ್ರಕಾಶ್‌ ಭಟ್‌ ಇವರು ಅತಿಥಿಗಳನ್ನು ಸ್ವಾಗತಿಸಿ ಶ್ರೀಗಳನ್ನು ಗೌರವಿಸಿದರು. ಬಂಟರ ಸಂಘದ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು. ಜ್ಯೋತಿ ಭಟ್‌ ಅವರು ಪ್ರಾರ್ಥನೆಗೈದರು. ಶ್ರೀಗಳು ಮತ್ತು ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪತ್ರಕರ್ತ ದಯಾಸಾಗರ್‌ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸಂಘ ಚಾಲಕ ಶಂಭು ಶೆಟ್ಟಿ, ಪೇಜಾವರ ಮಠ ಮುಂಬಯಿ ಪ್ರಬಂಧಕ ವೇದಮೂರ್ತಿ ರಾಮದಾಸ್‌ ಉಪಾಧ್ಯಾಯ, ಈಶ್ವರಿ ಭಟ್‌, ರವೀಂದ್ರನಾಥ ಭಂಡಾರಿ, ಬಾಲಕೃಷ್ಣ ಭಂಡಾರಿ, ಉಷಾ ಭಟ್‌, ಮನೋರಂಜನಿ ರಮಣ್‌ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಲಾ ಸೌರಭ ಮುಂಬಯಿ ಸಂಯೋಜನೆಯಲ್ಲಿ ಕರ್ನಾಟಕದ ಗಾಯಕ ಶಂಕರ ಶ್ಯಾನ್‌ಭಾಗ್‌ ಬಳಗದವರಿಂದ ಭಕ್ತಿ ಸಂಗೀತ ರಸಧಾರೆ ನಡೆಯಿತು.

ಭಾರತವು ಹಲವು ಸಾವಿರ ವರ್ಷಗಳ ಹಿಂದೆ ವಿಜ್ಞಾನವನ್ನು ಜಗತ್ತಿಗೆ ಸಾರಿದ ದೇಶ. ಇಲ್ಲಿಯ ಪ್ರತಿಯೊಂದು ಸಂಸ್ಕೃತಿಯೂ ಶ್ರೇಷ್ಠವಾಗಿದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಯ ವ್ಯಾಮೋಹದಿಂದ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಗೋವುಗಳನ್ನು ದೇವರು ಮತ್ತು ತಾಯಿಯ ಸ್ಥಾನವನ್ನು ನೀಡಿ ಪೂಜಿಸುತ್ತಿದ್ದೇವೆ. ಗೋವುಗಳು ನಮ್ಮ ದೇಶದ ಸಂಪತ್ತಾಗಿದೆ. ಒಂದು ಕಾಲದಲ್ಲಿ ಶ್ರೀಮಂತ ಎಂದರೆ ಅವರ ಬಳಿ ಗೋವುಗಳು ಎಷ್ಟಿವೆ ಎಂದು ಲೆಕ್ಕ ಹಾಕುತ್ತಿದ್ದರು. ನಮ್ಮ ರಾಷ್ಟ್ರೀಯ ಪ್ರಾಣಿಯಾಗಬೇಕಿದ್ದ ಗೋವುಗಳನ್ನು ಕೇವಲ ರಾಜಕೀಯ ಕಾರಣಗಳಿಂದಾಗಿ ಇಂದು ಉಳಿವಿಗೆ ಗಂಡಾಂತರ ಒದಗಿ ಬಂದಿದೆ. ಅದನ್ನು ಉಳಿಸಿ-ರಕ್ಷಿಸಿ-ಬೆಳೆಸುವ ಕಾರ್ಯ ನಮ್ಮದಾಗಬೇಕು. ಅದು ನಮ್ಮ ಸಂಸ್ಕೃತಿಯ ಅಂಗ ಎಂಬುವುದನ್ನು ನಾವು ಅರಿತುಕೊಳ್ಳಬೇಕು. ಅದಕ್ಕಾಗಿ ಶ್ರೀಗಳು ನಿರ್ಮಿಸುತ್ತಿರುವ ಗೋಸ್ವರ್ಗಕ್ಕೆ ಎಲ್ಲರು ಒಮ್ಮತದಿಂದ ಸಹಕಾರ ನೀಡಬೇಕಾದ ಅಗತ್ಯವಿದೆ
 ಡಾ| ಕಲ್ಲಡ್ಕ ಪ್ರಭಾಕರ ಭಟ್‌,
ಆರ್‌ಎಸ್‌ಎಸ್‌ ಮುಖಂಡ

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next