ಬೀರನೂರ (ಬಾಗಲಕೋಟೆ): ನನಗ್ ಈಗ ಮೂರಿಪ್ಪತ್ತು (60ಕ್ಕೂ ಹೆಚ್ಚು) ಮ್ಯಾಗ್ ವಯಸ್ಸ ಅದಾವ್ರಿ. ನನ್ನ ಜೀವನ್ದಾಗ ಇಂಥಾ ನೀರ್ ಎಂದೂ ನೋಡಿಲ್ರಿ. ಎಷ್ಟ ಮಳಿ ಬಂದ್ರೂ, ಹೊಳಿ ದಂಡಿಗಿ ಇರು ಮನಿಗಿ ಮಾತ್ರ ನೀರ್ ಬರ್ತಿತ್ರಿ. ಈ ಸಾರಿ ನಮ್ಮ ಮನ್ಯಾಗ್ ನೀರ್ ಕೊಕ್ಕಾವ್. ನಮ್ಮನಿಗೇನ್ ನೀರು ಬರ್ತಾವಂತ್ ಹಂಗೆ ಕುಂತಿದ್ದೇವ್ರಿ. ಒಮ್ಮೆಲೇ ನೀರ ಹೊಸ್ತಲಕ್ ಬಂದೂರಿ. ಜೀವ ಉಳಸ್ಗೊಳ್ಳಾಕ್ ಓಡೋಡಿ ಹೋದೇವ್ರಿ…
ಕರಳು ಕಿತ್ತು ಬರುವ ಸನ್ನಿವೇಶ: ಮಲ್ರಪಭಾ ನದಿ ಪ್ರವಾಹ ಇಳಿದಿದೆ. ಇಡೀ ಗ್ರಾಮದೊಳಗೆ ಹೊಕ್ಕು, ಹೊರ ಹೋದ ನೀರು, ಬೀರನೂರ ಗ್ರಾಮದ ಪ್ರತಿ ಮನೆಯ ಸಾಮಗ್ರಿ ಬೀದಿಗೆ ತಂದಿದೆ. ಇಲ್ಲಿ ಬಹುತೇಕ ಮಣ್ಣಿನಿಂದ ಕಟ್ಟಿದ ಮನೆಗಳಿದ್ದು, ಎಲ್ಲವೂ ಕುಸಿದು ಬಿದ್ದಿವೆ. ಊರಲ್ಲಿನ ಸುಮಾರು 180ಕ್ಕೂ ಹೆಚ್ಚು ಮನೆಗಳಲ್ಲಿ ಯಾವ ಮನೆಯೂ ಉಳಿದಿಲ್ಲ. ಕೆಲವು ಪೂರ್ಣ ಬಿದ್ದರೆ, ಇನ್ನೂ ಕೆಲ ಮನೆಗಳ ಗೋಡೆ ಕುಸಿದು ಬಿದ್ದಿವೆ. ಮನೆಯೊಳಗೆ ಕಾಲಿಡಲೂ ಆಗದಂತಹ ಪರಿಸ್ಥಿತಿಯಿದೆ. ಅಳಿದುಳಿದ ಸಾಮಾನು ಹುಡುಕಲು ಹೋಗುವ ಗ್ರಾಮಸ್ಥರೂ ಉದುರಿ ಬೀಳುತ್ತಿರುವ ಹಾಳ್ ಮಣ್ಣಿನ ಗೋಡೆಗೆ ಹೆದರಿ ಹಿಂದಿರುಗುತ್ತಿದ್ದಾರೆ. ಊರಿನ ಶಾಲೆ, ಅಜ್ಜ-ಮುತ್ತಜ್ಜನ ಕಾಲದ ಮನೆಗಳು, ಎತ್ತಿನ ಬಂಡಿಗಳು, ದೇವಸ್ಥಾನಗಳು ಯಾವುದೂ ಉಳಿದಿಲ್ಲ. ಎಲ್ಲವೂ ವಿಜಯಪುರದ ಬಾರಾಕಮಾನ್ ನೋಡಿದಂತಾಗುತ್ತಿವೆ.
ದ್ಯಾಮವ್ವನ ಗುಡಿಯಲ್ಲಿ ದುರ್ಗವ್ವನ ಮೂರ್ತಿ: ಬೀರನೂರಿನಲ್ಲಿ ಬಸವಣ್ಣ, ದುರ್ಗವ್ವ, ದ್ಯಾಮವ್ವ, ಲಕ್ಷ್ಮಿ, ಮಸೂತಿ (ಮುಸ್ಲಿಂರ ಪೂಜಾ ಸ್ಥಳ) ಇವೆ. ಎಲ್ಲ ದೇವಾಲಯಗಳಲ್ಲೂ ನೀರು ಹೊಕ್ಕಿದೆ. ಪಲ್ಲಕ್ಕಿ ಅನಾಥವಾಗಿದ್ದರೆ, ದೇವರ ಮೂರ್ತಿಗಳು, ಅದಲುಬದಲಾಗಿವೆ. ದುರ್ಗವ್ವನ ದೇವಸ್ಥಾನವಂತೂ ನೆಲಸಮಗೊಂಡಿದೆ. ದುರ್ಗವ್ವನ ಮೂರ್ತಿಯನ್ನು ಗ್ರಾಮಸ್ಥರೇ ಪಕ್ಕದಲ್ಲಿರುವ ದ್ಯಾಮವ್ವನ ಗುಡಿಯಲ್ಲಿಟ್ಟಿದ್ದಾರೆ.
ವಾಹನ ನೋಡ್ತಾರೆ; ಓಡಿ ಬರ್ತಾರೆ:
Advertisement
ಬಾದಾಮಿ ತಾಲೂಕು ಬೀರನೂರ ಗ್ರಾಮದ ನಿಂಗಪ್ಪ ಪುಂಡಪ್ಪ ಅಬನ್ನವರ ಹೀಗೆ ಹೇಳುತ್ತಿದ್ದಾಗ ಅವರ ಕೈ ನಡುಗುತ್ತಿದ್ದವು. ಮಲಪ್ರಭಾ ನದಿಯಿಂದ 1 ಕಿ.ಮೀ. ದೂರದಲ್ಲಿರುವ ಈ ಊರಿಗೆ ಊರೇ ಮುಳುಗಿದೆ. ಇಲ್ಲಿನ 109 (ಗ್ರಾಪಂ. ಖಾತೆ ನಂ.9ರ ಪ್ರಕಾರ ಇರುವ ಕುಟುಂಬಗಳು) ಕುಟುಂಬಗಳ 844 ಜನರೂ ಸಂಕಷ್ಟದಲ್ಲಿದ್ದಾರೆ. ಸರ್ಕಾರ 99 ಕುಟುಂಬಗಳ 495 ಜನರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕೊಟ್ಟಿದೆ. ಉಳಿದ ಜನರೆಲ್ಲ ತಮ್ಮ ಹೊಲ, ರಸ್ತೆಯ ಪಕ್ಕದಲ್ಲಿ ಜೋಪಡಿ ಹಾಕಿಕೊಂಡು ತಾತ್ಕಾಲಿಕ ಬದುಕು ನಡೆಸಿದ್ದಾರೆ.
Related Articles
Advertisement
ಪ್ರವಾಹದಿಂದ ಜಲಾವೃತಗೊಂಡ ಗ್ರಾಮಗಳಿಗಿಂತ ಬೀರನೂರಿನ ಸ್ಥಿತಿ ಭಿನ್ನವಾಗಿದೆ. ಗ್ರಾಮದ ಮೇಲೆಯೇ ನದಿ ಹಾದು ಹೋಗಿದೆ. ಪ್ರವಾಹ ಬಂದಾಗ, ನದಿ ಯಾವುದು, ಗ್ರಾಮ ಯಾವುದು ಎಂಬುದೂ ತಿಳಿಯದಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಈಗ ಪ್ರವಾಹ ಇಳಿದ ಮೇಲೆ ಒಬ್ಬೊಬ್ಬರಾಗಿ ಮನೆಗೆ ಹೋಗಿ ನೋಡಿದರೆ, ಅವುಗಳ ಸ್ಥಿತಿ ಕಂಡು ಮರಗುತ್ತಿದ್ದಾರೆ. ಮಣ್ಣಿನ ಮನೆಗಳೇ ಇರುವುದರಿಂದ ಯಾವಾಗ್ ಬೀಳುತ್ತವೆ ಎಂಬ ಭಯದಿಂದ ಪುನಃ ತಮ್ಮ ಜೋಪಡಿ, ಶೆಡ್‌ಗಳಿಗೆ ಹೋಗುತ್ತಿದ್ದಾರೆ.
ಇನ್ನು ಇಲ್ಲಿನ ಎಲ್ಲಾ ಕುಟುಂಬಗಳಿಗೆ ಶೆಡ್ ಕೊಟ್ಟಿಲ್ಲ. 2009ರ ಪ್ರವಾಹಕ್ಕೆ ಸಿಲುಕಿದ್ದವರಿಗೆ ಮಾತ್ರ ಆಸರೆ ಮನೆಗಳಿದ್ದು, ಅವರೆಲ್ಲ ಆ ಮನೆಗೆ ಹೋಗಿದ್ದಾರೆ. ಉಳಿದ ಜನರಿಗೆ ತಾತ್ಕಾಲಿಕ ಆಸರೆ ಕಲ್ಪಿಸಬೇಕೆಂದರೆ, ಊರಿನ ಶಾಲೆಯೇ ನೀರಿನಲ್ಲಿದೆ. ಹೀಗಾಗಿ ಬಹುತೇಕರು, ತಮ್ಮ ತಮ್ಮ ಹೊಲಗಳಲ್ಲಿ ತಾಡಪತ್ರಿಯ ಗೂಡು ಕಟ್ಟಿಕೊಂಡಿದ್ದಾರೆ.
ಬಹುತೇಕರು ಕುಳಗೇರಿ ಕ್ರಾಸ್‌ನಿಂದ ಬೀರನೂರಿಗೆ ಬರುವ ಮುಖ್ಯ ರಸ್ತೆಯಲ್ಲೇ ಗೂಡು ಹಾಕಿಕೊಂಡಿದ್ದಾರೆ. ಅವರೆಲ್ಲ ನಿದ್ರೆ ಕಂಡು 14 ದಿನಗಳಾಗಿವೆ. ಊರಿಗೆ ಯಾವುದೇ ವಾಹನ ಬರಲಿ, ಅದನ್ನು ನೋಡಿದ ತಕ್ಷಣ ಓಡಿ ಹೋಗ್ತಾರೆ. ತಿನ್ನಲು, ರಾತ್ರಿ ಬೆಚ್ಚನೆ ಹೊಚ್ಚಿಕೊಳ್ಳಲು ಏನಾದ್ರೂ ಕೊಡ್ತಾರಾ ಎಂದು ಕಾದು ನಿಲ್ತಾರೆ. ಇವರೆಲ್ಲ ಒಂದೊತ್ತಿನ ಊಟಕ್ಕೆ ಗತಿ ಇಲ್ಲದ ಬಡವರಲ್ಲ. ಸ್ವಂತ ಮನೆ ಇಲ್ಲದ ಅನಾಥರೂ ಅಲ್ಲ. ಆದರೆ, ಮಲಪ್ರಭಾ ನದಿ ಮಾತ್ರ ಇವರನ್ನು, ಇವರ ಬದುಕನ್ನು ಬಡವರನ್ನಾಗಿಸಿದೆ.
ಉಪಕಾರಿಗಳೇ ಈಗ ಅತಂತ್ರ!:
ಕಳೆದ 2009ರ ಪ್ರವಾಹದ ವೇಳೆ ಮನೆ ಹಾನಿಯಾಗಿದ್ದ ಜನರಿಗೆ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಸರ್ಕಾರ ನಿರ್ಮಿಸಿದ ಆಸರೆ ಮನೆಗಳಿಗೆ ತಳಕವಾಡ, ಬೀರನೂರಿನ ಕೆಲ ರೈತರು ಉದಾರ ಮನಸ್ಸಿನಿಂದ, ಅತ್ಯಂತ ಕಡಿಮೆ ಬೆಲೆಗೆ ಭೂಮಿ ಕೊಟ್ಟಿದ್ದಾರೆ. ಸಂಕಷ್ಟದಲ್ಲಿರುವ ನಮ್ಮೂರಿನ ಜನರಿಗೆ ಅನುಕೂಲವಾಗಲಿ ಎಂದು ಅವರೆಲ್ಲ ಫಲವತ್ತಾದ ಕೃಷಿ ಭೂಮಿ ಕೊಟ್ಟು ಉಪಕಾರಿಗಳಾಗಿದ್ದಾರೆ. ಅಂದು ಕಡಿಮೆ ಬೆಲೆಗೆ ಭೂಮಿ ಕೊಡುವ ವೇಳೆ, ಭೂಮಿ ಕೊಟ್ಟವರಿಗೂ ಒಂದು ಮನೆ ಕೊಡುವ ಭರವಸೆ, ಬಾದಾಮಿ ತಾಲೂಕು ಆಡಳಿತ ಕೊಟ್ಟಿತ್ತು. ಆದರೆ, ಅಂದು ಸಂತ್ರಸ್ತರ ಸಂಕಷ್ಟಕ್ಕೆ ಧ್ವನಿಯಾದವರೇ ಇಂದು, ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ತಮ್ಮೂರಿನ ಬಹುತೇಕರಿಗೆ ಆಸರೆ ಮನೆಗೆ ಜಾಗೆ ಕೊಟ್ಟರೂ ಇವರಿಗೆ ಮಾತ್ರ ಮನೆ ಇಲ್ಲ. ಇಂತಹ ಪರಿಸ್ಥಿತಿಯನ್ನು ಬೀರನೂರಿನ ಪುಂಡನಗೌಡ ಮುಷ್ಟಿಗೇರಿ (1 ಎಕರೆ ಭೂಮಿ ಕೊಟ್ಟಿದ್ದಾರೆ) ಹಾಗೂ ತಳಕವಾಡದ ಚಂದುಸಾಬ ಕರೀಮಸಾಬ ನದಾಫ (ಮೂವರು ಸಹೋದರರು ಕೂಡಿ 8 ಎಕರೆ ಕೊಟ್ಟಿದ್ದಾರೆ) ಅನುಭವಿಸುತ್ತಿದ್ದಾರೆ. ಈ ಪ್ರವಾಹದಲ್ಲಿ ಅವರ ಹಳೆಯ ಊರಿನ ಮನೆಗಳೂ ಮುಳುಗಿವೆ. ಈಗ ತಳಕವಾಡದ ಚಂದುಸಾಬ, ಬಾಡಿಗೆ ಮನೆಯಲ್ಲಿದ್ದರೆ, ಬೀರನೂರಿನ ಪುಂಡನಗೌಡ, ಹೊಲದಲ್ಲಿ ಜೋಪಡಿ ಹಾಕಿಕೊಂಡಿದ್ದಾರೆ.
ಮನ ಕಲಕುವ ಸನ್ನಿವೇಶಗಳು:
ಬೀರನೂರಿನಲ್ಲಿ ಸದ್ಯ ಎಲ್ಲೇ ಕಾಲಿಟ್ಟರೂ ಮನ ಕಲಕುವ ಸನ್ನಿವೇಶ ಕಾಣುತ್ತಿವೆ. ಊರಿಗೆ ಎಂಟ್ರಿ ಕೊಡುವ ವೇಳೆಯೇ ವಾಹನ ನೋಡಿ ಜನ ಓಡಿ ಬರುತ್ತಾರೆ. ಗ್ರಾಮದಲ್ಲಿ ಕುಸಿದು ಬಿದ್ದ ಮನೆಗಳಲ್ಲಿ ಸಾಮಾನು ಹುಡುಕುವ ಜನ ಕಂಡು ಕಣ್ಣೀರು ಬರುತ್ತವೆ. ಇನ್ನು ಶಾಲೆಗೆ ಹೋಗುವ ಮಕ್ಕಳ ಗೋಳಂತೂ ಹೇಳುವಂತಿಲ್ಲ. ನೀರು ಬಂದಾಗ, ಜೀವ ಉಳಿಸಿಕೊಳ್ಳಲು ಎಲ್ಲವೂ ಮನೆಯಲ್ಲಿ ಬಿಟ್ಟು ಹೋಗಿದ್ದವರು, ಈಗ ನೀರು ಇಳಿದ ಬಳಿಕ ತಮ್ಮ ಪುಸ್ತಕ, ಶಾಲೆಯ ಬ್ಯಾಗ್ ಹುಡುಕುತ್ತಿದ್ದಾರೆ. ನೀರಿನಲ್ಲಿ ನೆನೆದ ಪುಸ್ತಕಗಳನ್ನು ಬಿಸಿಲಿಗೆ ಇಡುತ್ತಿದ್ದಾರೆ. ಪುಟ್ಟ ಬಾಲಕಿಯೊಬ್ಬಳು, ತನ್ನ ಸಹೋದರಿಯ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಪರಿಹಾರ ಕೇಂದ್ರಕ್ಕೆ ಹೋಗಲು ಪ್ರಯತ್ನಿಸುತ್ತಿದ್ದ ದೃಶ್ಯ ಕರಳು ಕಿತ್ತು ಬರುವಂತಿತ್ತು.
ಆಸರೆಯಲ್ಲೂ ಭ್ರಷ್ಟಾಚಾರ:
2009ರ ಪ್ರವಾಹದ ವೇಳೆ ಕಟ್ಟಿದ ಆಸರೆ ಮನೆಗಳಲ್ಲೂ ಭ್ರಷ್ಟಾಚಾರ ನಡೆದಿರುವುದು ಈಗ ಬಹಿರಂಗಗೊಳ್ಳುತ್ತಿದೆ. ಮನೆ ಕಳೆದುಕೊಂಡವರಿಗೆ ಮನೆ ಕೊಡುವ ಬದಲು, ಗ್ರಾ.ಪಂ. ಸದಸ್ಯರು, ಅವರ ಸಂಬಂಧಿಕರು ಹಾಗೂ ಪ್ರಭಾವ ಬೀರಿದವರಿಗೆ ಮನೆ ಕೊಡಲಾಗಿದೆ. ನಿಜವಾದ ಸಂತ್ರಸ್ತರು ಇಂದಿಗೂ, ಪ್ರತಿಬಾರಿ ಪ್ರವಾಹದ ವೇಳೆ ಮುಳುಗುವ ಮನೆಯಲ್ಲೇ ಇದ್ದಾರೆ. ಅವರ ಬಾಯಿಗೆ ಪ್ರಭಾವ ಬೀರುವ ಧ್ವನಿ ಯಾರೂ ನೀಡಿಲ್ಲ. ಕಣ್ಣೀರು ಹಾಕಿ ಕೇಳಿದರೂ ಕರಗಿದ ಸ್ಥಳೀಯ ರಾಜಕಾರಣಿಗಳಿಲ್ಲ. ಹೀಗಾಗಿ ನಿಜವಾದ ಸಂತ್ರಸ್ತರು, ಇಂದಿಗೂ ನೀರಿನ ಸಮಸ್ಯೆ ಅನುಭವಿಸತ್ತಲೇ ಇದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ, ತಳಕವಾಡದ ಚನ್ನಯ್ಯ ಮೂಗನೂರಮಠ. ಇವರ ಮನೆ 2009ರಲ್ಲಿ ಮುಳುಗಿತ್ತು. ನೀರು ತಗ್ಗಿದ ಬಳಿಕ ಸಣ್ಣ-ಪುಟ್ಟ ದುರಸ್ತಿ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದಾರೆ.
ಆಗ ಇವರ ಮನೆಯ ಕಟ್ಟೆಯ ಮೇಲೆಯೇ ಕುಳಿತು, ಮನೆ ಕಳೆದುಕೊಂಡ ಸಂತ್ರಸ್ತರ ಪಟ್ಟಿ ತಯಾರಿಸಲಾಗಿತ್ತು. ಆದರೆ, ಮೂಗನೂರಮಠರ ಹೆಸರನ್ನೇ ಪಟ್ಟಿಯಲ್ಲಿ ಕಾಣದಂತೆ ಸ್ಥಳೀಯ ರಾಜಕಾರಣ ಮಾಡಿತ್ತು. ನಮ್ಮೂರು ಪ್ರತಿ ಬಾರಿ ಪ್ರವಾಹಕ್ಕೆ ಒಳಗಾಗುತ್ತಿದೆ. ನಮ್ಮೂರು ಶಾಶ್ವತ ಸ್ಥಳಾಂತ ರಿಸಬೇಕು. ಯುಕೆಪಿ ಮಾದರಿ ನಮ್ಮ ಮನೆ, ಜಾಗಕ್ಕೆ ಪರಿಹಾರ ನೀಡಿ, ಎತ್ತರದ ಪ್ರದೇಶದಲ್ಲಿ ನಿವೇಶನ ಕಲ್ಪಿಸಬೇಕು. ಆಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ.•ಅಶೋಕ ಬಡಿಗೇರ, ತಳಕವಾಡ ಸಂತ್ರಸ್ತ
ನಮ್ಮ ಕೈಯಲ್ಲಿ ಇಂತಹ ಮನೆ ಕಟ್ಟಲು ಆಗಲ್ಲ. ನಮ್ಮಪ್ಪ ಕಟ್ಟಿದ ಮನೆಯಿತು. 2014ರಲ್ಲಿ ಅಪ್ಪ ತೀರಿಕೊಂಡಿದ್ದ. ಅಪ್ಪನ ಫೋಟೋ ಮನೆಯಲ್ಲೇ ಇತ್ತು. ಒಮ್ಮೆಲೇ ನೀರು ಬಂದಾಗ ನಾವೆಲ್ಲ ಓಡೋಡಿ ಹೋಗಿದ್ದೇವು. ಅಪ್ಪ ಕಟ್ಟಿದ ಮನೆ, ಆತನ ಫೋಟೋ ಎಲ್ಲವೂ ಹೋಯ್ತು ಅನ್ಕೊಂಡಿದ್ದೆ. ಆದರೆ, ಅಪ್ಪನ ಮನೆಯಲ್ಲಿ ಅಪ್ಪನ ಫೋಟೋ ಜೋಪಾನವಾಗಿತ್ತು.•ನಿಂಗಪ್ಪ ಪುಂಡಪ್ಪ ಅಬನ್ನವರ, ಬೀರನೂರ ಸಂತ್ರಸ್ತ
ನಮ್ಮಕ್ಕ 10ನೇ ತರಗತಿ ಅದಾಳ್ರಿ. 3 ತಿಂಗಳಿಂದ ನೋಟ್ಸ ಬರೆದಿದದ್ದು. ಬುಕ್, ನೋಟಬುಕ್, ಬ್ಯಾಗ್ ಎಲ್ಲಾ ಮನ್ಯಾ ಗ್ ಇದ್ದುರೀ. ನೀರು ಬಂದು ಎಲ್ಲಾ ಹಸಿ ಆಗ್ಯಾವ್. ಬಿಸಿಲಿಗಿ ಒಣಗಿಸಿದ್ರ ಒಂದೂ ಅಕ್ಷರ ಕಾಣಾಂಗಿಲ್ಲಾಗ್ಯಾವ್. ಹೊಸ ಬುಕ್ ಹೆಂಗ್ ತಗೋಳುದ್ರಿ. ಶಾಲಿಗಿ ಹೋದ್ರ ನಮ್ಮ ಸರ್ ಬೈತಾರಂತ ಅಕ್ಕಾ ಅಳಾಕತ್ತಿಳ್ರಿ. ಸರ್‌ಗೆ ಹೇಳ್ತಿನಂತ ನಮ್ಮಪ್ಪಾ ಸಮಾಧಾನ ಮಾಡ್ಯಾನ್ರಿ.•ಸುರೇಖಾ ಪುಂಡನಗೌಡ ಮುಷ್ಟಿಗೇರಿ, 7ನೇ ತರಗತಿ ವಿದ್ಯಾರ್ಥಿನಿ, ಬೀರನೂರ
ಕಷ್ಟಪಟ್ಟು ಕೊಂಡಿದ್ದ ಚಿನ್ನವೇ ಹೋಯ್ತು !: ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಬೀರನೂರಿನ ಲಲಿತಾ ಚಂದ್ರಗೌಡ ದಾನಪ್ಪಗೌಡರ ಎಂಬ ಮಹಿಳೆ, ಕಷ್ಟಪಟ್ಟು ದುಡಿದ ಹಣದಲ್ಲಿ 2 ತೊಲೆ ನೆಕ್ಲೆಸ್, 2 ಸುತ್ತುಂಗುರ, 1 ತೊಲೆ ಚೈನ್ ಹಾಗೂ 40 ಸಾವಿರ ರೂಪಾಯಿ ಹಣ ಇರುವ ಬ್ಯಾಗ್ ಮನೆಯಲ್ಲೇ ಬಿಟ್ಟು ಓಡಿ ಬಂದಿದ್ದರು. ನೀರಿನಿಂದ ತಪ್ಪಿಸಿಕೊಳ್ಳಲು ಊರ ಹೊರಗೆ ಓಡಿ ಬಂದ ಬಳಿಕ, ಚಿನ್ನ, ಹಣದ ವ್ಯಾನಿಟಿ ಬ್ಯಾಗ್ ಬಿಟ್ಟು ಬಂದಿದ್ದು ನೆನಪಾಗಿತ್ತು. ಅಷ್ಟೊತ್ತಿಗೆ ಮನೆ ಮುಂದೆ ಎದೆಮಟ ನೀರು ಹರಿಯುತ್ತಿತ್ತು. ಜೀವ ಉಳಿಸ್ಕೋರಿ. ಬಂಗಾರ, ರೊಕ್ಕಾ ಗಳಿಸಬಹುದು ಎಂದು ಮನೆಯ ಹಿರಿಯರು ಹೇಳಿದರು. ಹೀಗಾಗಿ ಎದೆಮಟ ನೀರಲ್ಲಿ ಹೋಗಿ, ವ್ಯಾನಿಟಿ ಬ್ಯಾಗ್ ತರುವ ಧೈರ್ಯ ಮಾಡಲಿಲ್ಲ. ನೀರು ಇಳಿದ ಮೂರು ದಿನದ ಬಳಿಕ ಮನೆಗೆ ಹೋಗಿ ನೋಡಿದಾಗ, ಮನೆಯಲ್ಲಿ ಹಲವು ಸಾಮಾನ್ಯ, ಬ್ಯಾಗ್ ಎಲ್ಲವೂ ನೀರಲ್ಲಿ ಹರಿದು ಹೋಗಿದ್ದವು.
•ಶ್ರೀಶೈಲ ಕೆ. ಬಿರಾದಾರ