Advertisement
ಕೆಲವೊಮ್ಮೆಯಂತೂ ಮೂರ್ನಾಲ್ಕು ದಿನಗಳ ಮೊದಲೇ ಅಪಾಯಿಂಟ್‌ಮೆಂಟ್ ತಗೊಂಡು ಹೋಗಬೇಕು, ಅಷ್ಟು ರಶ್ ಇರುತ್ತದೆ. ಅವನ ಬಳಿ ಸಲಹೆ ಪಡೆಯಲು ದೊಡ್ಡ ದೊಡ್ಡ ಮನುಷ್ಯರೆಲ್ಲ ಬರ್ತಾರಂತೆ…’
***
ಶ್ರೀಧರ, ಗುರುತೇ ಸಿಗದಷ್ಟು ಬದಲಾಗಿಬಿಟ್ಟಿದ್ದ. ಥೇಟ್ ಸನ್ಯಾಸಿಯಂತೆ ಕಾಣುತ್ತಿದ್ದ. ಮಾತುಗಳಲ್ಲಿ ಪ್ರೌಢತೆ ಇತ್ತು. ಕಂಗಳಲ್ಲಿ ವಿಚಿತ್ರ ಹೊಳಪು. ಐವತ್ತು ವರ್ಷಕ್ಕೇ ಚರ್ಮ ಸುಕ್ಕುಗಟ್ಟಿ, 60 ವರ್ಷದವನಂತೆ ಕಾಣುತ್ತಿದ್ದ. ಅವನಿದ್ದ ಸ್ಥಳ ಏಕಕಾಲಕ್ಕೆ ಬಯಲು- ಆಲಯದಂತೆ ಕಾಣುತ್ತಿತ್ತು. ಅಂಗಳದಲ್ಲಿ ಹತ್ತಾರು ಮಂದಿ ಕೆಲಸ ಮಾಡುತ್ತಿದ್ದರು. ಉಭಯ ಕುಶಲೋಪರಿಯ ಅನಂತರ ಕೇಳಿಬಿಟ್ಟೆ: “ಇದೇನಿದು, ಇದ್ದಕ್ಕಿದ್ದಂತೆ ಇಷ್ಟೊಂದು ಬದಲಾವಣೆ? ಏನಾಯಿತು ನಿಮಗೆ? ಈ ಹೊಸ ವೇಷದಲ್ಲಿ ಬದುಕಲು ಮನೆಯವರು ಒಪ್ಪಿಗೆ ಕೊಟ್ಟರಾ?’
Related Articles
Advertisement
ಹೀಗಿದ್ದಾಗಲೇ ನನ್ನ ಹೆಂಡತಿ ಪದೇಪದೆ ಮಾತಾ ಡಲು ಕೂರುತ್ತಿದ್ದಳು. ನಮ್ಮ ಕುಟುಂಬ, ಆಗಾಗ ನಡೆಯುವ ಆಚರಣೆಗಳು, ನಿರ್ವಹಿಸಬೇಕಿರುವ ಜವಾಬ್ದಾರಿಗಳು… ಇಂಥವೇ ಮಾತುಗಳು. ಕೆಲಸದ ನೆಪ ಹೇಳಿ ಅವಳನ್ನು ಅವಾಯ್ಡ್ ಮಾಡಿದೆ. ನಿರ್ಲಕ್ಷಿಸಿದೆ. “ನಿನಗೆ ಇಷ್ಟ ಬಂದಂತೆ ಬದುಕು, ಸುಮ್ಮನೇ ನನ್ನ ತಲೆ ತಿನ್ನಬೇಡ’ ಎಂದು ರೇಗಿಬಿಟ್ಟೆ. ಅವಳ ಸ್ಥಿತಿ ಕಂಡು ಮಕ್ಕಳೂ ನಕ್ಕರು. ಅನಂತರದಲ್ಲಿ ಅವಳು ಸೈಲೆಂಟ್ ಆಗಿಬಿಟ್ಟಳು. ಅವಳಿಗೆ ಬಯ್ದು ಬುದ್ಧಿ ಕಲಿಸಿದೆ ಎಂಬ ಖುಷಿಯಲ್ಲಿ ನಾನಿದ್ದಾಗಲೇ ಅನಾಹುತ ಆಗಿಹೋಯಿತು. ನನ್ನ ಪತ್ನಿ, ಇದ್ದಕ್ಕಿದ್ದಂತೆ ಡಿಪ್ರಶನ್‌ಗೆ ಹೋಗಿಬಿಟ್ಟಳು. ಅದೆಲ್ಲಿತ್ತೋ; ಲೋ ಬಿಪಿ ಜತೆಯಾಯಿತು. ಅದೊಮ್ಮೆ, ನಾವೆಲ್ಲರೂ ಮನೆಯಲ್ಲಿ ದ್ದಾಗಲೇ ತಲೆ ಸುತ್ತುತ್ತಿದೆ ಎಂದು ಕುಸಿದು ಕೂತವಳು, ಹಾಗೇ ಕೋಮಾಕ್ಕೆ ಹೋಗಿಬಿಟ್ಟಳು! ನಾನು ಏನೂ ಮಾಡಲಾಗಲಿಲ್ಲ. ನನ್ನ ಕಣ್ಣೆದುರೇ ಆಕೆ ಕಣ್ಮುಚ್ಚಿದಳು.
ಇಂಥದೊಂದು ಸಂದರ್ಭ ಎದುರಾಗಬಹುದು ಎಂಬ ಕಲ್ಪನೆ ಕೂಡ ನನಗಿರಲಿಲ್ಲ. ಪರಿಚಿತರು, ಬಂಧುಗಳು, ನೆರೆಹೊರೆಯವರೆಲ್ಲ ಸಮಾಧಾನ ಹೇಳಿ ಹೋದರು. ಅಮ್ಮನಿಲ್ಲದ ಮನೆಯಲ್ಲಿ ಇರಲು ಕಷ್ಟ ಎಂದು ಮಕ್ಕಳು, ತಮ್ಮದೇ ದಾರಿ ಹಿಡಿದರು. ಎಲ್ಲವೂ ಇದ್ದು ಹೆಂಡತಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಅನ್ನಿಸಿದಾಗ ನಾಚಿಕೆಯೂ, ಸಂಕಟವೂ ಆಯಿತು. ಅವಳನ್ನು ವಿಪರೀತ ಬೈದಿದ್ದು ನೆನಪಾಗಿ ಪಾಪಪ್ರಜ್ಞೆ ಕಾಡಿತು. ಅವಳನ್ನು ಕ್ಷಣಕ್ಷಣವೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂದುಕೊಳ್ಳುವಾಗಲೇ ಆಕೆಯ ಡೈರಿ ಸಿಕ್ಕಿಬಿಟ್ಟಿತು. ಪಾಪ, ನನಗೆ ಹೇಳಬೇಕು ಅನ್ನಿಸಿದ ಮಾತುಗಳನ್ನೆಲ್ಲ ಅಲ್ಲಿ ಬರೆದಿದ್ದಳು, ದಿನಾಂಕದ ಸಹಿತ! ಅವಳ ಮಾತುಗಳಲ್ಲಿ ಬೇಡಿಕೆಯಿರಲಿಲ್ಲ. ಆದೇಶ ವಿರಲಿಲ್ಲ. ದೂರು ಇರಲಿಲ್ಲ. ಅಲ್ಲಿದ್ದುದು ಕೇವಲ ಕೌಟುಂಬಿಕ ಪ್ರೀತಿ, ಎಲ್ಲರನ್ನೂ ಕುರಿತ ಕಾಳಜಿ. ಅವೆಲ್ಲ ಆಕೆಯ ಮನಸಿನ ಮಾತುಗಳು. ಅವನ್ನು ಕೇಳುವವರು ಬೇಕಿತ್ತು, ಅಷ್ಟೇ! ಗಂಡ ಮತ್ತು ಮಕ್ಕಳಿಗೆ ತನ್ನ ಕುರಿತು ಕಾಳಜಿಯಿಲ್ಲ ಎಂಬ ಯೋಚನೆಯಲ್ಲೇ ಆಕೆ ಡಿಪ್ರಶನ್‌ಗೆ ಹೋಗಿಬಿಟ್ಟಿದ್ದಳು.
ನಾನು ವೈದ್ಯ. ಎಲ್ಲ ಕಾಯಿಲೆಯನ್ನೂ ಗೆಲ್ಲಬಲ್ಲೆ ಎಂಬ ಹಮ್ಮಿನಲ್ಲಿದ್ದ ನನಗೆ ಬದುಕು ದೊಡ್ಡ ಪಾಠ ಕಲಿಸಿತ್ತು. ಅವಳ ಡೈರಿ ಓದಿದ ಅನಂತರ, ನನ್ನ ಆಸೆ- ಆಕಾಂಕ್ಷೆ, ಕನಸು-ಕನವರಿಕೆಗಳಿಗೆ ಅರ್ಥವಿಲ್ಲ ಅನ್ನಿಸಿತು. ಹತ್ತಾರು ಜನರಿಗೆ ಸಹಾಯ ಮಾಡುವ ಮೂಲಕ ಪಾಪಪ್ರಜ್ಞೆಯಿಂದ ಮುಕ್ತನಾಗಬೇಕು ಅನ್ನಿಸ್ತು. ಕುಟುಂಬದ ಜನರಿಗೆ, ಮಕ್ಕಳಿಗೆ ಇದನ್ನೇ ಹೇಳಿದೆ. ಆಸ್ಪತ್ರೆಯನ್ನು ನಂಬಿಕಸ್ಥರಿಗೆ ವಹಿಸಿದೆ. ಎಲ್ಲ ಜವಾಬ್ದಾರಿಗಳಿಂದ ಮುಕ್ತನಾಗಿ ಎದ್ದು ಬಂದೆ. ಹೆಂಡತಿಯ ಸಾವೂ ಸಹಿತ ಹಲವು ಸಾವುಗಳನ್ನು ಕಂಡವ ನಾನು. ಹಾಗಾಗಿ ನನಗೆ ಇದ್ದಕ್ಕಿದ್ದಂತೆ ಏನಾದರೂ ಆಗಿಬಿಟ್ಟರೆ..? ಎಂಬ ಭಯ ಕಾಡಲಿಲ್ಲ.
ಇಲ್ಲಿಗೆ ತರಹೇವಾರಿಯ ಜನ ಬರ್ತಾರೆ. ಅಂಗಳ ದಲ್ಲಿ ಏನೇನೋ ಕೆಲಸ ಮಾಡುತ್ತಿದ್ದರಲ್ಲ; ಅವರೆಲ್ಲ ಕೌನ್ಸೆಲಿಂಗ್‌ಗೆ ಬಂದಿರುವವರೇ. ಹೆಚ್ಚಿನವರು ಡಿಪ್ರಶನ್‌ಗೆ ತುತ್ತಾದವರೇ! ಸಲಹೆ ಕೊಡುವುದಲ್ಲ; ಅವರ ಮಾತುಗಳಿಗೆ ಕಿವಿಯಾಗುವುದು, ನನ್ನ ಕೆಲಸ.
ಇಲ್ಲಿಗೆ ಬರುವವರೆಲ್ಲ ತಮ್ಮ ಮನಸಿನ ಮಾತು ಗಳನ್ನು ಹೇಳಿಕೊಳ್ತಾರೆ. ಎಲ್ಲ ಭಾವ-ಬಿಂಬಗಳೂ ಅಲ್ಲಿರುತ್ತವೆ. ಎಲ್ಲವನ್ನೂ ಮೌನವಾಗಿ ಕೇಳಿಸಿಕೊಂಡು, ಕಡೆಗೊಮ್ಮೆ ಅವರ ಹೆಗಲುತಟ್ಟಿ- “ಯಾವ ಸಂಕಟವೂ ಶಾಶ್ವತವಲ್ಲ. ದ್ವೇಷ ಸಾಧನೆಯಿಂದ ಯಾರಿಗೂ ಒಳಿತಾಗಿಲ್ಲ. ನಾಲ್ಕು ಜನಕ್ಕೆ ಸಹಾಯ ಮಾಡಿ, ಹತ್ತು ಜನ ಮೆಚ್ಚುವಂತೆ ಬದುಕಲು ತಯಾರಾಗಿ. ಮನಸ್ಸು ಹೇಳಿದಂತೆ ಮುಂದುವರಿಯಿರಿ. ನಿಮ್ಮ ಮಾತುಗಳನ್ನು ಆಲಿಸಲು ನಾನು ಸದಾ ರೆಡಿ ಇರುತ್ತೇನೆ. ನಿಮಗೆ ಬೇಸರ ಅನ್ನಿಸಿದಾಗೆಲ್ಲ ಇಲ್ಲಿಗೆ ಬಂದುಬಿಡಿ…’- ಅನ್ನುತ್ತೇನೆ! ಅಷ್ಟಕ್ಕೇ, ಜನ ಖುಷಿಯಾಗುತ್ತಾರೆ. ಮನಸ್ಸಿನ ಭಾರ ಇಳೀತು, ಅನ್ನುತ್ತಾರೆ. “ನನ್ನ ಸಂಕಟವನ್ನು ಕೇಳುವವರೇ ಇಲ್ಲ ಅಂತ ಸಾಯಲು ಹೊರಟಿದ್ದೆ. ನಿಮ್ಮ ಆಶ್ರಮಕ್ಕೆ ಬಂದು ಹೊಸ ಬದುಕು ಕಂಡೆ’ ಎಂದು ಕೈ ಮುಗಿಯುತ್ತಾರೆ.ಇದನ್ನೆಲ್ಲ ಕಂಡಾಗ ನನಗೆ ಅನಿಸಿದ್ದು: ಮನುಷ್ಯನ ಒಳಗೆ ಒತ್ತಡ ಅನ್ನುವುದು ತುಂಬಿಕೊಂಡಾಗ, ಅದನ್ನು ಹೊರಹಾಕಲು ಒಂದು ಚಾನೆಲ್ ಬೇಕಾಗುತ್ತದೆ. ಅಂದರೆ ಅವರಿಗೆ ಸಲಹೆ, ಉಪದೇಶ ಬೇಕಿರೋದಿಲ್ಲ. ತಮ್ಮ ಮಾತುಗಳನ್ನು ಸುಮ್ಮನೇ ಕೇಳಿಸಿಕೊಳ್ಳುವ ಜನ ಬೇಕಿರುತ್ತಾರೆ! ಅದು ಸಿಗದೇ ಹೋದಾಗ ಮನುಷ್ಯ ಹತಾಶನಾಗುತ್ತಾನೆ. ಮನಸಿನ ಮಾತುಗಳನ್ನು ಹೇಳಿ ಕೊಳ್ಳಲಾಗದೆ ಚಡಪಡಿಸುತ್ತಾನೆ. ನನಗೆ ಆಪ್ತರಿಲ್ಲ, ಹಿತೈಷಿಗಳಿಲ್ಲ. ಈ ಬದುಕಿಗೆ ಅರ್ಥವಿಲ್ಲ ಎಂದೆಲ್ಲ ಯೋಚಿಸಿ ಡಿಪ್ರಶನ್‌ಗೆ ಜಾರುತ್ತಾನೆ. ಕಾಯಿಲೆಗಳು, ಅನಾಹುತಗಳು ಜತೆಯಾಗುವುದೇ ಇಂಥ ಸಂದರ್ಭದಲ್ಲಿ. ಇಲ್ಲಿಗೆ ಬರುವವರಲ್ಲಿ ಹೆಚ್ಚಿನವರಿಗೆ, ನಾವೇ ನತದೃಷ್ಟರು ಎಂಬ ಭಾವವಿರುತ್ತದೆ. ನಮ್ಮಿಂದ ಯಾರಿಗೂ ಉಪಯೋಗವಿಲ್ಲ ಕೀಳರಿಮೆ ಇರುತ್ತದೆ. ಅಂಥವರನ್ನು ಕೂರಿಸಿಕೊಂಡು ನನ್ನ ಕಥೆ ಹೇಳುತ್ತೇನೆ! ನಾನು ಡಾಕ್ಟರ್ ಆಗಿದ್ದವನು, ಆದರೂ ಹೆಂಡತಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂಬ ಸತ್ಯ ಹೇಳುತ್ತೇನೆ. ಆಕೆಯ ಮಾತು ಕೇಳಿಸಿಕೊಳ್ಳಲಿಲ್ಲ ಎನ್ನುತ್ತಲೇ, ಎದುರು ಕೂತವರ ಮಾತುಗಳನ್ನು ಕೇಳಿಸಿಕೊಳ್ಳುತ್ತೇನೆ! ಬದುಕಿನಲ್ಲಿ, ಪಶ್ಚಾತ್ತಾಪದ ಭಾವ ಜತೆಯಾದ ತತ್‌ಕ್ಷಣ ಬದಲಾಗುವ ಮನಸ್ಸೂ ಬರುತ್ತದೆ. ನಮಗಿಂತ ನೊಂದವರು ಇನ್ನೊಬ್ಬರಿದ್ದಾರೆ ಎಂದು ತಿಳಿದಾಕ್ಷಣ, ಎದುರು ಕೂತವರ ನೋವು ಅರ್ಧ ಮಾಯವಾಗುತ್ತದೆ. ಇಷ್ಟಾಗುತ್ತಿದ್ದಂತೆಯೇ, ನನಗೆ ಪರಿಚಯವಿರುವ ಬಡವರು/ ರೋಗಿಗಳ ಬಗ್ಗೆ ಹೇಳಿ-“ಅವರಿಗೆ ನೆರವಾಗಿ, ನಿಮ್ಮ ಕೈಲಾದಷ್ಟು ದಾನ ಮಾಡಿ’ ಎಂದು ಕೋರುತ್ತೇನೆ! ನನ್ನಿಂದ ಒಂದು ಕುಟುಂಬ ಉಳಿಯುತ್ತದೆ ಎಂದು ಗೊತ್ತಾದರೆ ಸಾಕು, ಜನ ಉಬ್ಬಿಹೋಗುತ್ತಾರೆ. ಸಂತೃಪ್ತ ಭಾವದೊಂದಿಗೆ ಮನೆಗೆ ಹೋಗುತ್ತಾರೆ. ಇದನ್ನು ಕಂಡಾಗೆಲ್ಲ ಹೆಂಡತಿ ನೆನಪಾಗಿ ಬಿಡುತ್ತಾಳೆ! ಅವಳ ಮಾತುಗಳನ್ನೂ ಹೀಗೆ ಕೇಳಿಸಿಕೊಂಡಿದ್ದರೆ… ಅಂದುಕೊಳ್ಳುವಾಗಲೇ, “ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ. ಹೀಗೇ ಮುಂದುವರಿಸಿಕೊಂಡು ಹೋಗಿ ಎಂದು ಹೆಂಡತಿ ಪಿಸುಗುಟ್ಟಿದಂತೆ ಭಾಸವಾಗುತ್ತದೆ. ದಿನಗಳು ಹೀಗೇ ಉರುಳುತ್ತಿವೆ, ಅವಳ ನೆನಪಿನಲ್ಲಿ, ಅವಳ ಸ್ಮರಣೆಯಲ್ಲಿ…
ಹೇಳಬೇಕಿರುವುದೆಲ್ಲ ಮುಗಿಯಿತು ಅನ್ನುವಂತೆ, ಶ್ರೀಧರ ಮಾತು ನಿಲ್ಲಿಸಿದ… – ಎ.ಆರ್.ಮಣಿಕಾಂತ್