Advertisement

ಬೇಕು ನಮಗೊಬ್ಬ ವಿಪಕ್ಷ ನಾಯಕ

11:24 PM Jun 23, 2019 | Sriram |

ಪ್ರಜಾಪ್ರಭುತ್ವದಲ್ಲಿ ವಿಪಕ್ಷಕ್ಕೆ ಹಾಗೂ ವಿಪಕ್ಷ ನಾಯಕನಿಗೆ ಬಹಳ ಮಹತ್ವವಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕನನ್ನು ಸರಕಾರದ ಅವಿಭಾಜ್ಯ ಅಂಗವೆಂದೇ ಪರಿಗಣಿಸಲಾಗುತ್ತದೆ. ಪ್ರಜಾತಂತ್ರದ ಉಳಿವಿಗೆ ಮತ್ತು ಸಫ‌ಲತೆಗೆ ಸಮರ್ಥ ಪ್ರತಿಪಕ್ಷ ಅಗತ್ಯ. ಆದರೆ ಪ್ರಸ್ತುತ ಸತತ ಎರಡನೇ ಅವಧಿಯಲ್ಲೂ ನಮ್ಮ ದೇಶದಲ್ಲಿ ಪ್ರತಿಪಕ್ಷವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ದರೂ ಅದು ನಾಮ್‌ ಕೇ ವಾಸ್ತೆ ಎಂಬಂತಾಗಿದೆ. ಲೋಕಸಭೆಯಲ್ಲಿ ಅಧಿಕೃತವಾಗಿ ಪ್ರತಿಪಕ್ಷ ನಾಯಕನ ಸ್ಥಾನ ಅಲಂಕರಿಸುವಷ್ಟು ಸಂಖ್ಯಾ ಬಲ ಯಾವ ಪಕ್ಷಕ್ಕೂ ಇಲ್ಲದೇ ಹೋಗಿರುವುದು ವಿಪಕ್ಷಗಳ ದಯನೀಯ ಸ್ಥಿತಿಯನ್ನು ಸೂಚಿಸುತ್ತದೆ.

Advertisement

ಅಧಿಕೃತ ವಿಪಕ್ಷವಾಗಲು ಲೋಕಸಭೆಯ ಒಟ್ಟು ಸದಸ್ಯ ಬಲದ ಶೇ. 10 ಸದಸ್ಯರನ್ನು ಹೊಂದಿರಬೇಕು ಎಂಬ ನೆಲೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ಗೆ ಸರಕಾರ ವಿಪಕ್ಷ ನಾಯಕನ ಸ್ಥಾನವನ್ನು ನಿರಾಕರಿಸಿದೆ.ಅಧಿಕೃತ ವಿಪಕ್ಷವಾಗಲು ಶೇ. 10 ಸ್ಥಾನ ಬಲ ಬೇಕು ಎನ್ನುವುದು ಒಂದು ನಿಯಮವಲ್ಲ, ಬದಲಾಗಿ ಪಾಲಿಸಿಕೊಂಡು ಬರಲಾಗಿರುವ ಪದ್ಧತಿಯಷ್ಟೆ. ಸಂಸತ್ತಿನ ವಿಪಕ್ಷ ನಾಯಕನನ್ನು ವ್ಯಾಖ್ಯಾನಿಸುವುದು 1977ರಲ್ಲಿ ಜಾರಿಗೆ ಬಂದಿರುವ ಸಂಸತ್ತಿನ ಪ್ರತಿಪಕ್ಷ ನಾಯಕನ ವೇತನ ಮತ್ತು ಭತ್ಯೆ ಕಾಯಿದೆ. ಈ ಕಾಯಿದೆ ಸದನದಲ್ಲಿ ಪ್ರತಿಪಕ್ಷಗಳಲ್ಲಿ ಅತಿ ಹೆಚ್ಚಿನ ಸ್ಥಾನ ಹೊಂದಿರುವ ಪಕ್ಷದ ಮತ್ತು ಸ್ಪೀಕರ್‌ ಮಾನ್ಯ ಮಾಡಿದ ವ್ಯಕ್ತಿ ಎಂದು ಹೇಳುತ್ತದೆ. ಪ್ರತಿಪಕ್ಷ ನಾಯಕನನ್ನು ಮಾನ್ಯ ಮಾಡುವ ಅಧಿಕಾರ ಇರುವುದು ಸ್ಪೀಕರ್‌ಗೆ ಎನ್ನುವುದು ಈ ವ್ಯಾಖ್ಯಾನದ ಸ್ಥೂಲ ಅರ್ಥ. ಆದರೆ 1984ರಿಂದೀಚೆಗೆ ಪ್ರತಿಪಕ್ಷ ನಾಯಕನಾಗಲು ಶೇ. 10 ಸಂಖ್ಯಾಬಲ ಇರಬೇಕೆಂದು ನಂಬಿಸಿಕೊಂಡು ಬರಲಾಗಿದೆ.

2014ರಲ್ಲಿ ಕಾಂಗ್ರೆಸ್‌ ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ಅಂಗಲಾಚಿದರೂ ಸರಕಾರ ಅದನ್ನು ನೀಡುವ ಔದಾರ್ಯ ತೋರಿಸಲಿಲ್ಲ. ಐದು ವರ್ಷ ಪ್ರತಿಪಕ್ಷ ನಾಯಕನಿಲ್ಲದೆಯೇ ಸರಕಾರವನ್ನು ನಡೆಸಿಕೊಂಡು ಬರಲಾಗಿದೆ. ಆದರೆ ಆಗ ಕನಿಷ್ಠ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಪಕ್ಷದ ನಾಯಕನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಈ ಸಲ ಸರಕಾರವನ್ನು ಸಮರ್ಥವಾಗಿ ಎದುರಿಸುವ ಛಾತಿ ಇರುವ ಖರ್ಗೆ, ಮುಲಾಯಂ ಸಿಂಗ್‌ ಯಾದವ್‌, ದೇವೇಗೌಡ ಅವರಂಥ ಹಿರಿಯರು ಸಂಸತ್ತಿನಲ್ಲಿ ಇಲ್ಲ. ಇರುವ ಎರಡನೇ ತಲೆಮಾರಿನ ನಾಯಕರಲ್ಲಿ ಈ ಪಾತ್ರವನ್ನು ನಿಭಾಯಿಸುವ ಛಾತಿಯಾಗಲಿ, ಸಾಮರ್ಥ್ಯವಾಗಲಿ ಕಾಣುತ್ತಿಲ್ಲ. ಹಾಗೆಂದು ಈ ವಿಚಾರದಲ್ಲಿ ಕಾಂಗ್ರೆಸ್‌ ಅನುಕಂಪಕ್ಕೇನೂ ಅರ್ಹವಾಗಿಲ್ಲ. 1984ರಲ್ಲಿ ಅಭೂತಪೂರ್ವ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಪ್ರತಿಪಕ್ಷ ನಾಯಕನ ಸ್ಥಾನವನ್ನು ಎರಡನೇ ಅತಿ ದೊಡ್ಡ ಪಕ್ಷಕ್ಕೆ ಕೊಟ್ಟಿರಲಿಲ್ಲ.ಹಾಗೆಂದು ಹಾಲಿ ಸರಕಾರ ಇದನ್ನು ಮೇಲ್ಪಂಕ್ತಿಯಾಗಿಟ್ಟುಕೊಳ್ಳುವುದು ಮಾತ್ರ ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದ ಸಮರ್ಪಕವಾದ ನಡೆಯಲ್ಲ.ಪ್ರತಿಪಕ್ಷಗಳು ವಿಪಕ್ಷ ನಾಯಕನ ಸ್ಥಾನಕ್ಕೆ ಒತ್ತಾಯಿಸುವುದಿರಲಿ, ಮೊದಲಾಗಿ ಚುನಾವಣೆ ಫ‌ಲಿತಾಂಶದ ಆಘಾತದಿಂದಲೇ ಚೇತರಿಸಿಕೊಳ್ಳಲು ಅವುಗಳಿಗೆ ಸಾಧ್ಯವಾಗಿಲ್ಲ.

ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಇನ್ನೂ ನಾಯಕತ್ವದ ಬಿಕ್ಕಟ್ಟೇ ಬಗೆಹರಿದಿಲ್ಲ. ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪಕ್ಷ ರಾಜೀನಾಮೆಯನ್ನು ಅಂಗೀಕರಿಸದೆ ಅತಂತ್ರ ಸ್ಥಿತಿಯಲ್ಲಿಟ್ಟಿದೆ. ರಾಹುಲ್‌ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದರೂ ಪಕ್ಷಕ್ಕೆ ಪರ್ಯಾಯ ವ್ಯವಸ್ಥೆ ಕಾಣುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಹೇಗೆ ವಿಪಕ್ಷವಾಗಿ ತನ್ನ ಪಾತ್ರವನ್ನು ನಿಭಾಯಿಸೀತು ಎನ್ನುವ ಗೊಂದಲ ಪಕ್ಷದ ನಾಯಕರಿಗೆ ಮಾತ್ರವಲ್ಲ ದೇಶದ ಜನತೆಗೂ ಇದೆ.

ಸರಕಾರವನ್ನು ರಚನಾತ್ಮಕವಾಗಿ ವಿರೋಧಿಸಲು ಪ್ರತಿಪಕ್ಷ ಇರಲೇ ಬೇಕು. ಅಲ್ಲದೆ ಲೋಕಪಾಲ, ವಿಜಿಲೆನ್ಸ್‌ ಮುಖ್ಯಸ್ಥರಂಥ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಮಾಡುವ ವ್ಯವಸ್ಥೆಯಲ್ಲಿ ಪ್ರತಿಪಕ್ಷ ನಾಯಕನಿಗೆ ಮುಖ್ಯವಾದ ಪಾತ್ರವಿದೆ. ಎರಡನೇ ಅತಿ ದೊಡ್ಡ ಪಕ್ಷಕ್ಕೆ ವಿಪಕ್ಷದ ಸ್ಥಾನಮಾನವನ್ನು ನಿರಾಕರಿಸುವುದೆಂದರೆ ಏಕಚಕ್ರಾಧಿಪತ್ಯ ಮಾದರಿಯ ಆಡಳಿತ ವ್ಯವಸ್ಥೆಯನ್ನು ಅನುಸರಿಸುವುದಕ್ಕೆ ಸಮವಾಗುತ್ತದೆ. ಇಂಥ ಸಂಘರ್ಷದ ಹಾದಿಯನ್ನು ಅನುಸರಿಸುವುದು ಪ್ರಜಾತಂತ್ರದ ವ್ಯವಸ್ಥೆಗೆ ಮಾರಕವಾಗುವ ನಡೆ. ಸರಕಾರ ಬಲಿಷ್ಠವಾದಷ್ಟೂ ಅಷ್ಟೇ ಬಲಿಷ್ಠವಾದ ಪ್ರತಿಪಕ್ಷ ಇರುವುದು ಅಗತ್ಯ. ಹೀಗಾಗಿ ನಮಗೊಬ್ಬರು ಪ್ರತಿಪಕ್ಷ ನಾಯಕನ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next