ಶಾಲೆಬಿಟ್ಟು ಮನೆಯತ್ತ ದಾಪುಗಾಲು ಹಾಕುತ್ತಿದ್ದರು ಹಿತ ಮತ್ತು ಅಹಾನ್. ಮಳೆ ಜೋರಾಗಿ ಸುರಿಯುತ್ತಿದ್ದರೂ ಅದನ್ನೆ ಲೆಕ್ಕಿಸದೆ ಮನೆಗೆ ಓಡುತ್ತಿದ್ದರು. ಹೊಟ್ಟೆ ಚುರುಗುಟುತ್ತಿದ್ದ ಕಾರಣ ಅಮ್ಮ ಮಾಡಿದ ತಿಂಡಿಗೆ ಮನಸ್ಸು ಹಾತೊರೆಯುತ್ತಿತ್ತು. ಇನ್ನೇನು ಮನೆ ಸ್ವಲ್ಪ ದೂರವಿದೆ ಎನ್ನುವಷ್ಟರಲ್ಲಿ ಹಿಂದಿನಿಂದ ಬಂದ ಹುಡುಗನೊಬ್ಬ ಅಹಾನ್‌ನ್ನು ಕೆಸರಿನ ಹೊಂಡಕ್ಕೆ ತಳ್ಳಿ ಹಾಕುತ್ತಾನೆ. ಅವನು ಕಿರಣ್. ಅವರದೇ ಶಾಲೆಯ ಹುಡುಗ. ಸ್ವಲ್ಪ ದೊಡ್ಡವ. ಬಿದ್ದ ಅಹಾನ್‌ನ್ನು ನೋಡಿ ಕಿರಣ್ ಮತ್ತು ಅವನ ಗೆಳೆಯರು ಕುಚೋದ್ಯ ಮಾಡಿ ನಗುತ್ತಾರೆ. ಹಿತ ಅವನನ್ನು ಎಬ್ಬಿಸಿ ಮನೆಗೆ ಕರೆದುಕೊಂಡು ಹೋಗುತ್ತಾಳೆ.
ಮನೆಗೆ ಬಂದ ಹಿತ ಮತ್ತು ಅಹಾನ್ ಅಮ್ಮನಲ್ಲಿ ನಡೆದ ವಿಷಯವನ್ನೆಲ್ಲ ತಿಳಿಸಿ, ನಾಳೆ ಅವನಿಗೆ ಸರಿಯಾದ ಪಾಠ ಕಲಿಸುತ್ತೇವೆಂದು ಹೇಳುತ್ತಾರೆ. ಆದರೆ ಅಮ್ಮ ಆ ಮಾತಿಗೆ ಒಪ್ಪುವುದಿಲ್ಲ. ಒಬ್ಬರು ಮಾಡಿದ ತಪ್ಪನ್ನು ನಾವು ಕೂಡಾ ಮಾಡಬಾರದು. ಇದರಿಂದ ನಮ್ಮ ವ್ಯಕ್ತಿತ್ವವೂ ಅವರಷ್ಟೇ ಕೆಳಮಟ್ಟಕ್ಕೆ ಇಳಿದು ಹೋಗುತ್ತದೆಂದು ಹೇಳಿದರು ಹಾಗೂ ಕಿರಣ್ ಮಾಡಿದ ತಪ್ಪಿಗೆ ಯಾವತ್ತಾದರೂ ಅವನು ಪಶ್ಚಾತಾಪ ಪಡುತ್ತಾನೆಂದು ಹೇಳಿ ಮಕ್ಕಳನ್ನು ಸಮಾಧಾನ ಮಾಡಿದರು.
ಕಿರಣ್‌ನ ಉಪಟಳ ಶಾಲೆಯಲ್ಲಿಯೂ ಮುಂದುವರಿಯ ತೊಡಗಿತು. ಅದರ ಬಗ್ಗೆ ಹಿತ ಮತ್ತು ಆಹಾನ್ ಅಮ್ಮನಲ್ಲಿ ಹೇಳಿದಾಗ ಅಮ್ಮ ಏನೂ ಹೇಳಲಿಲ್ಲ. ನೀವೂ ಅವನಿಗೆ ಯಾವುದೇ ತೊಂದರೆ ಮಾಡಬಾರದೆಂದು ಅವರಿಗೆ ಎಚ್ಚರಿಸುತ್ತಾರೆ.
ಒಂದು ದಿನ ಶಾಲೆಗೆ ಹೋಗುವ ಮಧ್ಯದಲ್ಲಿ ಹಿತ ಮತ್ತು ಅಹಾನ್ ಗೆ ಕಿರಣ್ ಕಾಣಿಸುತ್ತಾನೆ. ಆದರೆ ಮುಖದಲ್ಲಿ ಎಂದಿನ ಅಹಂಕಾರವಿರಲಿಲ್ಲ. ಬದಲಾಗಿ ಜೋರಾಗಿ ಅಳುತ್ತಿದ್ದ. ಅವನ ಸ್ನೇಹಿತರು ಏನೂ ಮಾಡಲು ತೋಚದೆ ನಿಂತಿದ್ದರು. ಇವರಿಬ್ಬರು ಅವರ ಬಳಿಗೆ ತೆರಳಿ ವಿಚಾರಿಸಿದಾಗ ಯಾವುದೋ ಅಪರಿಚಿತ ಸೈಕಲ್ ಸವಾರ ಕಿರಣ್‌ನ್ನು ರಸ್ತೆಗೆ ದೂಡಿ ಹಾಕಿದ್ದ. ಮೈ ಕೈ ತರಚಿಕೊಂಡಿದ್ದ ಅವನನ್ನು ಅಹಾನ್ ಮತ್ತು ಹಿತ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅನಂತರ ಒಂದೆರಡು ದಿನ ಆತ ಶಾಲೆಗೆ ಬರಲಿಲ್ಲ.
ಮಾರನೇ ದಿನ ಶಾಲೆಗೆ ಬಂದು ಹಿತ ಮತ್ತು ಅಹಾನ್‌ನಲ್ಲಿ ಅವನು ಮಾಡಿತ ತಪ್ಪಿಗೆ ಕ್ಷಮೆ ಕೇಳಿ ಇನ್ನು ಮುಂದೆ ನಾವು ಸ್ನೇಹಿತರಾಗಿರೋಣ ಎಂದು ಹೇಳುತ್ತಾನೆ. ಸಂಜೆ ಮನೆಗೆ ಬಂದು ಅಮ್ಮನಲ್ಲಿ ನಡೆದ ವಿಷಯವನ್ನು ಹೇಳುತ್ತಾರೆ. ಅದಕ್ಕೆ ಅಮ್ಮ ಅವನು ತಪ್ಪು ಮಾಡುವಾಗ ನೀವೂ ಹಾಗೇ ಮಾಡಿದ್ದರೆ ನೀವೆಂದಿಗೂ ಸ್ನೇಹಿತರಾಗುತ್ತಿರಲಿಲ್ಲ. ನೀವು ಸುಮ್ಮನಿದ್ದ ಕಾರಣ ಇಂದು ಎಲ್ಲ ಸರಿಯಾಗಿದೆ. ಒಬ್ಬರು ತಪ್ಪು ಮಾಡುತ್ತಾರೆಂದು ನಾವೂ ಹಾಗೇ ಮಾಡಬಾರದು. ಕ್ಷಮಿಸುವ ಗುಣ ನಮ್ಮಲ್ಲಿರಬೇಕು ಎಂದರು.
• ಸುಶ್ಮಿತಾ ಶೆಟ್ಟಿ ಸಿರಿಬಾಗಿಲು