Advertisement

ವಿ ಮಿಸ್‌ ಯು…ಪಾರ್ವತಿ ಮೇಡಂ ! 

06:35 AM Sep 08, 2017 | |

ಸೌಮ್ಯ ನೋಟ, ದುಂಡಾದ ನಗುಮುಖ, ವಿಶಾಲವಾದ ಹಣೆ, ಎರಡು ಹುಬ್ಬುಗಳ ನಡುವೆ ಶೋಭಿಸುವ ಕುಂಕುಮದ ತಿಲಕ. ಮೊದಲ ಬಾರಿಗೆ ನೋಡಿದವರಿಗೆ ಪಾರ್ವತಿ ಮೇಡಂ ಅವರದ್ದು ಗಂಭೀರ ವ್ಯಕ್ತಿತ್ವ ಎಂದೆನಿಸಿದರೆ ಆಶ್ಚರ್ಯವಿಲ್ಲ. ಆದರೆ, ಅವರು ಎಷ್ಟೊಂದು ಸರಳ ಸಜ್ಜನ ವ್ಯಕ್ತಿ ಅನ್ನುವುದು ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡವರಿಗಷ್ಟೇ ಗೊತ್ತು. ಮಾತಿಗಿಳಿಯುವ ಮುನ್ನ ನಸುನಕ್ಕು ಎದುರು ನಿಂತವರ ಮನಸ್ಸಿನಲ್ಲಿ ಪ್ರೀತಿ ಗೌರವಗಳನ್ನು ಹೆಚ್ಚಿಸುವ ಅವರ ಜೀವನ ಶೈಲಿ ಬಲು ಅಚ್ಚುಕಟ್ಟು.

Advertisement

ಕಾಸರಗೋಡು ಜಿಲ್ಲೆಗೆ ಸೇರಿದ ಧರ್ಮತ್ತಡ್ಕ ಎಂಬ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಪಾರ್ವತಿ ಮೇಡಂ ಧರ್ಮತ್ತಡ್ಕದ ಎ.ಯು.ಪಿ. ಶಾಲೆ, ವಿಠಲ ಬಾಲಿಕಾ ಪ್ರೌಢಶಾಲೆ, ಕಾಸರಗೋಡಿನ ಸರಕಾರಿ ಕಾಲೇಜು ಮತ್ತು ಮೈಸೂರಿನ ಮಾನಸಗಂಗೋತ್ರಿಯಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿ ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಇಂಗ್ಲಿಷ್‌ ಉಪನ್ಯಾಸಕಿಯಾಗಿ ಸೇರಿದ್ದು 1981ರಲ್ಲಿ. ಅಲ್ಲಿ ಎಂಟು ವರ್ಷಗಳ ಸೇವೆಯ ನಂತರ ಕುಂದಾಪುರದ ಗಂಗಾಧರ ಐತಾಳರನ್ನು 1988ರಲ್ಲಿ ವಿವಾಹವಾಗಿ ಭಂಡಾರ್‌ಕಾರ್ ಕಾಲೇಜಿಗೆ ವರ್ಗವಾಗಿ ಬಂದರು.

ಹೌದು, ಪಾರ್ವತಿ ಮೇಡಂ ಈಗ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದಾರೆ. ಕಾಲೇಜಿನಲ್ಲಿರುವ ನಾವು ಮಾತ್ರವಲ್ಲ, ಈ ಹಿಂದೆ ಇಲ್ಲಿ ಕಲಿತು ಹೋಗಿರುವ ಸಾವಿರಾರು ಮಂದಿ ವಿದ್ಯಾರ್ಥಿಗಳ ಪಾಲಿಗೆ‌ ಅವರು ಅಚ್ಚುಮೆಚ್ಚಿನ ಪ್ರಾಧ್ಯಾಪಕಿ. ಅವರನ್ನು ಎಂದಿಗೂ ಮಿಸ್‌ ಮಾಡಿಕೊಳ್ಳುತ್ತೇವೆ. ಕಬ್ಬಿಣದ ಕಡಲೆ ಎಂದು ಅನೇಕರು ಅಂದುಕೊಂಡಿರುವ ಇಂಗ್ಲಿಷ್‌ ಭಾಷೆಯು ಪಾರ್ವತಿ ಮೇಡಂ ಅವರ ಬೋಧನಾ ಶೈಲಿಯಲ್ಲಿ ಸುಲಭವೆನ್ನಿಸಿ ಪರೀಕ್ಷೆಯಲ್ಲಿ  ತೇರ್ಗಡೆಯಾಗಿ ಹೋದವರು ಅದೆಷ್ಟು ಮಂದಿಯೋ? ಮೇಡಂ ತರಗತಿಯನ್ನು ಪ್ರವೇಶಿಸುತ್ತಲೇ ಎಲ್ಲರ ಮುಖದಲ್ಲಿ ಖುಷಿಯ ನಗು. ಭಾಷೆಯಾಗಲಿ, ವ್ಯಾಕರಣವಾಗಲಿ, ಪದ್ಯ-ಗದ್ಯ-ಕಥೆ-ಕಾದಂಬರಿ-ನಾಟಕ-ಹೀಗೆ ಕಲಿಸುವ ವಿಷಯ ಯಾವುದೇ ಇರಲಿ, ಎಲ್ಲ ಕ್ಲಿಷ್ಟತೆಗಳನ್ನು ಬಿಡಿಸಿ ಸರಳವೂ ಸ್ಪಷ್ಟವೂ ಆದ ಧ್ವನಿಯಲ್ಲಿ ಅವರು ವಿವರಿಸುವ ವೈಖರಿಯಲ್ಲಿ ಅದೇನೋ ಮಾಂತ್ರಿಕ ಶಕ್ತಿ. ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಅವರು ನೀಡುವ ವಿವರಣೆಗಳನ್ನು ಮನಸ್ಸಿಟ್ಟು ಕೇಳಿದರೆ ಸಾಕು, ಪರೀಕ್ಷೆಗೆ ವಿಶೇಷವಾಗಿ ಓದದಿದ್ದರೂ ಉತ್ತರಗಳನ್ನು ಬರೆಯಲು ಕಷ್ಟವಾಗುವುದಿಲ್ಲ. ಇಂಗ್ಲಿಷ್‌ ಮತ್ತು ಕನ್ನಡ-ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಉಪನ್ಯಾಸ ನೀಡುವ ಅವರ ಅತ್ಯಂತ ಸರಳ ಭಾಷೆ‌ಯ ಟಿಪ್ಪಣಿಗಳೂ ಸುಪ್ರಸಿದ್ಧ.
ಬೋಧಕಿಯಾಗಿ ಮಾತ್ರವಲ್ಲದೆ, ಪಾರ್ವತಿ ಮೇಡಂ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಜವಾಬ್ದಾರಿಯನ್ನು ಉದ್ದಕ್ಕೂ ನಿರ್ವಹಿಸುತ್ತ ಬಂದವರು. ಸುಮಾರು 18 ವರ್ಷಗಳ ಕಾಲ ಲಲಿತಕಲಾ ಸಂಘದ ಸಂಚಾಲಕಿಯಾಗಿ ವಿದ್ಯಾರ್ಥಿಗಳಿಂದ ಸಂಗೀತ-ನೃತ್ಯ-ನಾಟಕ ಕಾರ್ಯಕ್ರಮಗಳನ್ನು ಸಂಯೋಜಿಸುವುದು, ಅವರಿಗೆ ತರಬೇತಿ ನೀಡುವುದು ಮಾತ್ರವಲ್ಲದೆ  ವಿದ್ಯಾರ್ಥಿಗಳ ನಿರ್ವಹಣೆಯ ಕುರಿತು ಪತ್ರಿಕೆಗಳಲ್ಲಿ ವಿಮರ್ಶೆ ಬರೆದು ಪ್ರಕಟಿಸಿ ಪ್ರೋತ್ಸಾಹ ನೀಡಿದ್ದಾರೆ. ಕಾಲೇಜಿನ ವಾರ್ಷಿಕ ಸಂಚಿಕೆ ದರ್ಶನದ ಇಂಗ್ಲಿಷ್‌ ವಿಭಾಗದ ಸಂಪಾದಕಿಯಾಗಿಯೂ ವಿದ್ಯಾರ್ಥಿಗಳ ಬರೆಯುವ ಹವ್ಯಾಸವನ್ನು ಪ್ರೋತ್ಸಾಹಿಸಿದ್ದಾರೆ. 

ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ  ಕೂಡಾ ಪಾರ್ವತಿ ಮೇಡಂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡದ್ದು ಪ್ರಾಯಶಃ ವಿದ್ಯಾಥಿಗಳಲ್ಲಿ ಅನೇಕರಿಗೆ ಗೊತ್ತಿಲ್ಲ. ಸ್ವತಂತ್ರವಾಗಿ ಕಥೆ-ಕಾದಂಬರಿ- ನಾಟಕ-ವಿಮರ್ಶೆಗಳನ್ನು ಸಾಕಷ್ಟು ಬರೆದಿರುವ ಮೇಡಂ ಕನ್ನಡ, ಇಂಗ್ಲಿಷ್‌, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಪ್ರಾವೀಣ್ಯ ಸಾಧಿಸಿದ್ದಾರೆ.ಅನೇಕ ಕಥೆ-ಕಾದಂಬರಿ, ಕಾವ್ಯ ನಾಟಕಗಳನ್ನುಅನುವಾದಿಸಿದ್ದಾರೆ. ತಮ್ಮ ಕೌಟುಂಬಿಕ ಬದುಕಿನಲ್ಲಿ ನೆಲೆಯೂರಿದ ನಂತರ ಪುಸ್ತಕ ರಚನೆಯಲ್ಲಿ ತೊಡಗಿಕೊಂಡು ಅನೇಕ ಕೃತಿಗಳನ್ನು ರಚಿಸಿದ್ದು ಇವರ ಹಿರಿಮೆ. ಇವರ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಪರ ಕಾಳಜಿ ಹಾಗೂ ಸ್ತ್ರೀಪುರುಷ ಸಮಾನತೆಯ ವಾದಗಳು ಗಮನಾರ್ಹವಾಗಿವೆ. ಇವರ ಕೃತಿಗಳ ನಿರೂಪಣ ಶೈಲಿ, ಮತ್ತು ಗುಣ ಮಟ್ಟಗಳನ್ನು ಗಮನಿಸಿ ಕರ್ನಾಟಕದ ಮುಂಚೂಣಿಯ ಪ್ರಕಾಶಕರಾದ ನವಕರ್ನಾಟಕ, ಅಂಕಿತ, ಮನೋಹರ ಗ್ರಂಥಮಾಲಾ, ಹೇಮಂತ ಮತ್ತು ವಸಂತ ಪ್ರಕಾಶನಗಳು ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಮೊದಲಾದ ಸಂಸ್ಥೆಗಳು ಇವರ ಕೃತಿಗಳನ್ನು ಪ್ರಕಟಿಸಿವೆ.  ಈವರೆಗೆ ಪಾರ್ವತಿ ಮೇಡಂ ಅವರ 34 ಅನುವಾದಿತ ಕೃತಿಗಳು ಮತ್ತು 23 ಸ್ವತಂತ್ರ ಕೃತಿಗಳು ಪ್ರಕಟವಾಗಿವೆ. ಮನೆಯಲ್ಲಿ ಗೃಹಿಣಿಯ ಜವಾಬ್ದಾರಿಯನ್ನು ನಿರ್ವಹಿಸಿ, ಕಾಲೇಜಿನಲ್ಲೂ ದುಡಿಯುತ್ತ ಓರ್ವ ಮಹಿಳೆ ಇಷ್ಟು ಸಾಧನೆ ಮಾಡಿದ್ದು ಅಚ್ಚರಿಯೂ ಹೌದು, ಅಭಿನಂದನೀಯವೂ ಹೌದು.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ್ದಲ್ಲದೆ ಸಾಹಿತ್ಯ ಅಕಾಡೆಮಿಗಳ ಪುಸ್ತಕ ಬಹುಮಾನ ಯೋಜನೆಗಳಿಗೆ ತೀರ್ಪುಗಾರರಾಗಿ ಕೆಲಸ ಮಾಡಿದ ಅನುಭವವೂ ಪಾರ್ವತಿ ಮೇಡಂ ಅವರಿಗಿದೆ. ಆಕಾಶವಾಣಿಯ ನಾಟಕಗಳಲ್ಲಿ ಧ್ವನಿ ನೀಡುವ ಕಲಾವಿದೆಯಾಗಿ ಮಾತ್ರವಲ್ಲದೆ ಆಕಾಶವಾಣಿ ರಾಷ್ಟ್ರೀಯ ನಾಟಕಗಳನ್ನು ಅನುವಾದಿಸಿ ಕೂಡಾ ಅವರು ಕೊಟ್ಟಿದ್ದಾರೆ. ಬಹುಮುಖ ಪ್ರತಿಭಾನ್ವಿತರಾದ ಇವರ ಸಾಧನೆಗಾಗಿ ಅನೇಕ ಪ್ರಶಸ್ತಿ ಸನ್ಮಾನಗಳೂ ಇವರಿಗೆ ದೊರೆತಿವೆ. ಶ್ರೇಷ್ಠ ಅನುವಾದಕಿ ಎನ್ನುವ ನೆಲೆಯಲ್ಲಿ ಕರ್ನಾಟಕ ಅನುವಾದ ಅಕಾಡೆಮಿ (ಕುವೆಂಪು ಭಾಷಾ ಭಾರತಿ)ಯ 2011ರ ಗೌರವ ಪ್ರಶಸ್ತಿ, ಕೇರಳದ ಕಾಳಿಯತ್ತ್ ದಾಮೋದರನ್‌ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಹೆಚ್‌.ವಿ. ಸಾವಿತ್ರಮ್ಮ ಪ್ರಶಸ್ತಿ, ಗೀತಾ ದೇಸಾಯಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ… ಇತ್ಯಾದಿ.

Advertisement

ನೇರನುಡಿ, ಸರಳ ವ್ಯಕ್ತಿತ್ವದ ಪಾರ್ವತಿ ಮೇಡಂ ನಮ್ಮ ಮೇಡಂ ಎಂದು ಹೇಳಿಕೊಳ್ಳಲು ನಮಗೆಲ್ಲ ಹೆಮ್ಮೆ. ಮನುಷ್ಯ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ತತ್ವದಲ್ಲಿ ನಂಬಿಕೆಯಿಟ್ಟು ಎಲ್ಲರೊಂದಿಗೆ ಸಮಾನವಾಗಿ ಬೆರೆತು ಮಾತನಾಡಿಸುವ ಮೇಡಂ ನಮಗೆಲ್ಲರಿಗೂ ಆದರ್ಶ ಮಾತ್ರವಲ್ಲ ಸ್ಫೂರ್ತಿಯೂ ಹೌದು. 36 ವರ್ಷಗಳ ಕಾಲದ ತಮ್ಮ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಅವರಿಗೆ ತಮ್ಮ ಪ್ರವೃತ್ತಿಯಾದ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಸಾಮರ್ಥ್ಯ ಬರಲಿ, ಅವರ ವಿಶ್ರಾಂತ ಜೀವನವು ಸುಖಮಯವಾಗಿರಲಿ ಮತ್ತು ಅರ್ಥಪೂರ್ಣವಾಗಿರಲಿ ಎಂದು ಹೃದಯ ತುಂಬಿ ಹಾರೈಸುತ್ತೇನೆ. ಇದು ನನ್ನೊಬ್ಬನ ಹಾರೈಕೆ ಮಾತ್ರವಾಗಿರದೆ ಭಂಡಾರ್‌ಕಾರ್ ಕಾಲೇಜಿನ ಸಹಸ್ರಾರು ಮಂದಿ ವಿದ್ಯಾರ್ಥಿ ಬಳಗದ ಅಭೀಷ್ಟವೂ ಹೌದು.

– ಶ್ರೀರಾಜ್‌ ಎಸ್‌. ಆಚಾರ್ಯ
ಭಂಡಾರ್‌ಕಾರ್ ಕಾಲೇಜು, ಕುಂದಾಪುರ 

Advertisement

Udayavani is now on Telegram. Click here to join our channel and stay updated with the latest news.

Next