ಭಾರತೀಯ ಸೇನೆಯ ಸೇವೆಗೆ ಸೇರಿದ ವರ್ಷದಲ್ಲೇ ಪಾಕ್ ವಿರುದ್ಧ ಯುದ್ಧ ಎದುರಿಸಿದ ಸೇನೆಯಲ್ಲಿದ್ದೆ. ಸೇವೆಯಿಂದ ನಿವೃತ್ತಿಯಾಗುವ ವರ್ಷಕ್ಕೆ ಮೊದಲು ಕಾರ್ಗಿಲ್ ಯುದ್ಧದಲ್ಲೂ ಪಾಲ್ಗೊಂಡು ಗೆದ್ದಿರುವ ಸಂತಸ ನನ್ನದು.
ಹೀಗೆಂದು ಅಪ್ರತಿಮ ದೇಶಾಭಿಮಾನದಿಂದ ಎದೆ ಯುಬ್ಬಿಸಿದವರು ಸೇನೆಯಲ್ಲಿನ ಸ್ಮರಣೀಯ ಸೇವೆಗೆ 12 ಪದಕ ಪಡೆದಿರುವ ನಿವೃತ್ತ ಸೇನಾ ಕ್ಯಾಪ್ಟನ್ ಬಸಲಿಂಗಪ್ಪ ಶಂಕ್ರಪ್ಪ ಖೋತ. ವಿಜಯಪುರ ಜಿಲ್ಲೆಯ ಸಿದ್ಧಾಪುರ ಕೆ. ಗ್ರಾಮದ ಇವರು 1970, ಜೂ.12ರಂದು ಮರಾಠಾ ಲೈಟ್ ಇನ್‌ಫೆಂಟ್ರಿ ಸೆಂಟರ್‌ನ 19ನೇ ಯುನಿಟ್‌ಗೆ ಸಿಪಾಯಿಯಾಗಿ ಸೇರ್ಪಡೆಯಾದರು. ಸೇವೆಗೆ ಸೇರಿದ ವರ್ಷದಲ್ಲೇ 1970, ಡಿ.3ರಂದು ದೇಶ ರಕ್ಷಣೆಗಾಗಿ ವೈರಿ ಪಾಕಿ ಸ್ಥಾನ ವಿರುದ್ಧ ಎದೆಯೊಡ್ಡಿ ನಿಲ್ಲುವ ಅವಕಾಶ ಬಂತು.
ಯುದ್ಧದ ಮಾತಿರಲಿ ಸೇನೆಯ ಪೂರ್ಣ ಪ್ರಮಾಣದ ಅನುಭವವೂ ಇಲ್ಲದ ಹಂತದಲ್ಲಿ ಪಾಕ್ ವಿರುದ್ಧ ಯುದ್ಧ ಎದುರಾಗಿತ್ತು. ಪ್ರಧಾನಿ ಇಂದಿರಾಗಾಂಧಿ ಯುದ್ಧಕ್ಕೆ ಸನ್ನದ್ಧರಾಗುವಂತೆ ಘೋಷಿಸುತ್ತಲೇ ಭೈರಾಂಪುರದಿಂದ ಆರ್‌ಪಾರ್ ಪ್ರದೇಶಕ್ಕೆ ಬಿ.ಎಸ್. ಖೋತ ವರ್ಗವಾದರು. ಪಾಕ್ ಸೈನಿಕರ ಜತೆಗೆ ಬಾಂಗ್ಲಾ ಉಗ್ರರೂ ವಿರೋಧಿ ಪಾಳೆಯದಲ್ಲಿದ್ದರು. ಇವರ ತಂಡದಲ್ಲಿದ್ದ 11 ಜನರಲ್ಲಿ ಕಂಪೆನಿ ಕಮಾಂಡರ್ ಮಧುಕರ ಪಾಟೀಲ ಸೇರಿದಂತೆ 3 ಜನರು ಹುತಾತ್ಮರಾದಾಗ ಸಹಜವಾಗಿ ಯುವ ಸೈನಿಕ ಖೋತ ಅವರ ಎದೆಯಲ್ಲಿ ಭಯ ತುಂಬಿತ್ತು. ಆದರೆ ಇವರ ತಂಡದ ಹವಲ್ದಾರ್ ಕಾಂಬಳೆ ಅವರು ತನ್ನ ಇಡೀ ತಂಡಕ್ಕೆ ವೈರಿಗಳ ವಿರುದ್ಧ ಗೆಲ್ಲಲು ಆತ್ಮವಿಶ್ವಾಸ ತುಂಬಿದರು. ಆಗ ತಂಡದ ನಾಯಕ ವೆಂಕಟ ಚವ್ಹಾಣ ಅವರು ನೀಡಿದ ಕೆಚ್ಚೆದೆಯ ದೇಶಪ್ರೇಮದ ಮಾತುಗಳು ಎಂಎಲ್‌ಐಸಿ 19ನೇ ಯುನಿಟ್ ಬಾಂಗ್ಲಾ ಗಡಿಯಲ್ಲಿದ್ದ ಜೈಸೂರು ದಾಟಿ ವೈರಿಗಳನ್ನು ಸದೆಬಡಿಯುವಲ್ಲಿ ಯಶಸ್ಸು ತಂದುಕೊಟ್ಟಿತ್ತು.
ಇದನ್ನೂ ಓದಿ:ಎನ್‌ಕೌಂಟರ್: ಎ+ ಕೆಟಗರಿಯ ಹಿಜ್ಬುಲ್ ಉಗ್ರನ ಹತ್ಯೆ
ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆ ಪರಾಕ್ರಮ ಮೆರೆದಿತ್ತು. ಹೀಗಾಗಿ ವೈರಿ ಪಡೆಯ ಸಾವಿರಾರು ಸೈನಿಕರ ಹೆಣಗಳ ರಾಶಿ ದಾಟಿಕೊಂಡು ಢಾಕಾವರೆಗೂ ಮುನ್ನುಗ್ಗಿ ವಿಜಯ ಸಾಧಿಸಿದ್ದೇ ಒಂದು ರೋಚಕ ಅನುಭವ.
ಪಾಕ್ ವಿರುದ್ಧ ಯುದ್ಧ ಗೆದ್ದುದಲ್ಲದೇ ವೈರಿ ಪಾಳೆಯದ ಸುಮಾರು 6,000 ಯುದ್ಧ ಕೈದಿಗಳನ್ನು ಸೆರೆ ಹಿಡಿದಿದ್ದಕ್ಕೆ ಭಾರತ ಸರಕಾರ ಇವರ ಮೇಲೆ ಕಾಪ್ಟರ್‌ಗಳ ಮೂಲಕ ಹೂಮಳೆ ಸುರಿಸಿ ವಿಶೇಷ ಗೌರವ ನೀಡಿತ್ತು ಎಂದು ಹೆಮ್ಮೆ ಪಡುತ್ತಾರೆ ಕ್ಯಾ| ಖೋತ.
ಇದಲ್ಲದೇ 30 ವರ್ಷಗಳ ಸುದೀರ್ಘ ಸೇವೆಯ ನಿವೃತ್ತಿ ಹಂತದಲ್ಲಿ 1999ರಲ್ಲಿ ಮತ್ತೆ ಕಾರ್ಗಿಲ್ ಯುದ್ಧ ಘೋಷಣೆ ಆಗಿತ್ತು. ಅರುಣಾಚಲ ಪ್ರದೇಶದಲ್ಲಿ ಸುಬೇದಾರ್ ಮೇಜರ್ ಆಗಿದ್ದ ಖೋತ್ ಅವರಿಗೆ ಕಾಶ್ಮೀರಕ್ಕೆ ವರ್ಗವಾಯಿತು. ಆಗಲೂ ಪಾಕ್ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ್ದು, ಈ ಯುದ್ಧದಲ್ಲೂ ಖೋತ ದೇಶಕ್ಕಾಗಿ ತಮ್ಮ ಸೇವೆ ನೀಡಿದ್ದರು.
-ಜಿ.ಎಸ್. ಕಮತರ