ನರಗುಂದ: ಇಪ್ಪತ್ ದಿನದಿಂದ ಊರಾಗಿದ್ವಿ. ಊರಿಗೆ ಹೋಗಿ ವಾರದೊಳ್ಗ ಮತ್ತ ಊರ್ಬಿಟ್ಟು ಬಂದೇವ್ರಿಯಪ್ಪಾ..ನಮ್ಮ ಮ್ಯಾಗ ತಾಯಿ ಮಲಪ್ರಭೆ ಮುನಿಸ್ಕೊಂಡಾಳ. ಹಿಂಗಾಗಿ ನಮ್ ಊರ ಸುತ್ತಾ ನೀರು ಬಂದ್ ನಿಂತೇತ್ರಿ..ನಮ್ ಬದುಕು ಬೀದಿಗೆ ಬಂದಂಗಾಗೇತ್ರಿ..
ತಾಲೂಕಿನ ಗಡಿಗ್ರಾಮ ಲಖಮಾಪುರದ ವೃದ್ಧ ಮಹಿಳೆಯರು ಹೀಗೆ ಅಳಲು ತೋಡಿಕೊಂಡಿರುವುದರ ನೋವಿತ್ತು.
ಕಳೆದ ತಿಂಗಳು ಉಕ್ಕಿ ಹರಿದ ಮಲಪ್ರಭಾ ನದಿ ಪ್ರವಾಹದಿಂದ ತಾಲೂಕಿನಲ್ಲೇ ಮೊದಲಿಗೆ ಪ್ರವಾಹಕ್ಕೆ ತುತ್ತಾಗುವ ಗ್ರಾಮವೆಂದರೆ ಲಖಮಾಪುರ ಗ್ರಾಮ. ಈ ಊರು 15 ದಿನಗಳ ಕಾಲ ಹೊರ ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿತ್ತು.ಗ್ರಾಮದ ಮುಖ್ಯರಸ್ತೆಯೇ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಪರಿಣಾಮ ಊರಿಗೆ ಹೋಗಲು ದಾರಿ ಇಲ್ಲದೇ ಸಂತ್ರಸ್ತರು ಕೊಣ್ಣೂರ ಗಂಜಿ ಕೇಂದ್ರದಲ್ಲೇ ನೆಲೆಯೂರಿದ್ದರು.
ವಾರದ ಹಿಂದೆ ಮರಳಿದ್ದರು: ಮುಖ್ಯರಸ್ತೆ ತಾತ್ಕಾಲಿಕ ದುರಸ್ತಿ ಮಾಡಿದ ಬಳಿಕ ಒಂದು ವಾರದ ಹಿಂದೆಯಷ್ಟೇ ಲಖಮಾಪುರ ಗ್ರಾಮಸ್ಥರು ಮರಳಿ ಊರಿಗೆ ಹೋಗಿ ನೆರೆಯಿಂದ ಹಾನಿಗೊಳಗಾದ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದರು. ಈಗ ಮತ್ತೂಮ್ಮೆ ಪ್ರವಾಹ ಬಂದಿದ್ದು, ಇಲ್ಲಿನ ಜನರ ಬದುಕು ಮತ್ತೇ ಬಯಲಿಗೆ ಬಂದು ನಿಂತಿದೆ.
ಸುತ್ತುವರಿದ ನೀರು: ಮಲಪ್ರಭಾ ನದಿಗೆ ಹೆಚ್ಚುವರಿ ನೀರು ಹರಿದು ಬರುವ ಮುನ್ಸೂಚನೆಯಿಂದ ಗುರುವಾರ ರಾತ್ರಿಯೇ ಗ್ರಾಮಸ್ಥರು ಊರು ಬಿಟ್ಟಿದ್ದರು. ಶುಕ್ರವಾರ ಬೆಳಿಗ್ಗೆ ನದಿ ನೀರು ಗ್ರಾಮದ ಸಮೀಪಕ್ಕೆ ಬಂದಿರುವಾಗಲೇ ಶನಿವಾರ ಬೆಳಿಗ್ಗೆ ಮಲಪ್ರಭೆ ಗ್ರಾಮವನ್ನು ಸುತ್ತುವರಿದಿದೆ.
ಜೋಪಡಿಗಳಲ್ಲೇ ವಾಸ: 150 ಕುಟುಂಬ ಹೊಂದಿದ ಲಖಮಾಪುರ ಜನತೆ ತಾಲೂಕಾಡಳಿತ ಸೂಚನೆಯಂತೆ 8,10 ಕುಟುಂಬಗಳು ಬೆಳ್ಳೇರಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಆದರೆ ಬಹುತೇಕ ಕುಟುಂಬಗಳು ಲಖಮಾಪುರ ಮುಖ್ಯರಸ್ತೆಯಲ್ಲಿ ಮತ್ತು ಪಕ್ಕದ ಜಮೀನುಗಳಲ್ಲೇ ತಾಡಪಾಲಿನಿಂದ ಜೋಪಡಿ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಒಂದೊಂದು ಜೋಪಡಿಯಲ್ಲಿ 5, 6 ಕುಟುಂಬಗಳು ವಾಸ ಮಾಡುತ್ತಿದ್ದು,ಜನರ ಬದುಕು ಅಕ್ಷರಶಃ ಬೀದಿಗೆ ಬಂದಂತಾಗಿದೆ. ವೃದ್ಧರು, ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಗ್ರಾಮದ ಜನತೆ ಆತಂಕದ ಬದುಕು ಸಾಗಿಸುತ್ತಿದ್ದಾರೆ.
ಸಂಪರ್ಕ ಕಡಿತ ಸಾಧ್ಯತೆ: ಲಖಮಾಪುರದ ಏಕೈಕ ಮುಖ್ಯರಸ್ತೆ ಕೊಚ್ಚಿ ಹೋದ ಜಾಗದಲ್ಲಿ ಮುರಂ ಹಾಕಿ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಇಂದು ಪ್ರವಾಹ ನೀರು ಬಂದಿದ್ದರಿಂದ ಯಾವುದೇ ಕ್ಷಣದಲ್ಲಿ ಈ ಗ್ರಾಮ ಮತ್ತೇ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
•ಸಿದ್ಧಲಿಂಗಯ್ಯ ಮಣ್ಣೂರಮಠ