ನ್ಯೂಯಾರ್ಕ್: ಕೋವಿಡ್ ಹರಡುವಿಕೆಯ ಕಾರಣಕ್ಕೆ ಅಮೆರಿಕ ಹಾಗೂ ಚೀನದ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಇದೀಗ ಮತ್ತೆ ಚೀನದ ಮೇಲೆ ಕಿಡಿಕಾರಿರುವ ಯುಎಸ್‌ಎ ಅಧ್ಯಕ್ಷ ಟ್ರಂಪ್ “ಚೀನ ಎಂಬ ವೈರಾಣುವನ್ನು ಹೊರಹಾಕುವಲ್ಲಿ ಅಮೆರಿಕದ ನಾಗರಿಕರು ಶ್ರಮಿಸಬೇಕು’ ಎಂದು ಹೇಳಿದ್ದಾರೆ.
ಕೋವಿಡ್ ಸೋಂಕಿಗೆ “ಚೀನ ವೈರಸ್’ ಎಂದೇ ಕರೆಯುತ್ತಿರುವ ಟ್ರಂಪ್ ಕೋವಿಡ್ ಸಾಂಕ್ರಮಿಕ ಪಿಡುಗು ಪ್ರಾರಂಭ ವಾದಾಗಿನಿಂದಲೂ ಡ್ರ್ಯಾಗನ್ ದೇಶದ ವಿರುದ್ಧ ವಾಗ್ಧಾಳಿ ನಡೆಸುತ್ತಲ್ಲೇ ಬಂದಿದ್ದಾರೆ.
ಇದೀಗ ಸೋಂಕು ನಿಯಂತ್ರಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ನರ್ಸ್‌ಗಳು, ಪೊಲೀಸರಿಗೆ, ಅಂಚೆ ಸಿಬಂದಿ ಜತೆ ಸಮಾಲೋಚನೆ ನಡೆಸಿದ ಟ್ರಂಪ್, “ಚೀನ ಎಂಬ ವೈರಾಣುವನ್ನು ಹೊಡೆದೊಡಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದಿದ್ದಾರೆ. ಜತೆಗೆ ಸೋಂಕು ಹರಡುವಿಕೆ ನಿಯಂತ್ರಿಸುವ ಕಾರ್ಯದಲ್ಲಿ ನಿರತವಾಗಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ಪೊಲೀಸರ ಕಾರ್ಯ ಶ್ರೇಷ್ಠವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ ಕೋವಿಡ್ ಸೋಂಕಿನಿಂದ ಗುಣಮುಖರಾದ ಇಬ್ಬರು ಪೊಲೀಸ್ ಅಧಿಕಾರಿಗಳ ಆರೋಗ್ಯ ಕ್ಷೇಮದ ಬಗ್ಗೆಯೂ ಟ್ರಂಪ್ ವಿಚಾರಿಸಿದ್ದಾರೆ.
ಆಫ್ರಿಕಾ: 12 ಲಕ್ಷ ಕೋವಿಡ್ ಸೋಂಕಿತರು
ಆಫ್ರಿಕಾದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದ್ಯ ದೇಶದಲ್ಲಿ 12 ಲಕ್ಷ ಗಡಿ ಸಮೀಪಿಸಿದೆ. ಖಂಡದಲ್ಲಿ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 28ಸಾವಿರ ಗಡಿ ದಾಟಿದೆ ಎಂದು ಆಫ್ರಿಕಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನನ್ (ಸಿಡಿಸಿ) ತಿಳಿಸಿದೆ. ಜಾಗತಿಕವಾಗಿ ಆಫ್ರಿಕಾ ಸೋಂಕು ಬಿಕ್ಕಟ್ಟು ನಿರ್ವಹಣೆಯಲ್ಲಿ ಹಿಂದುಳಿದಿದ್ದು, ಅಲ್ಲಿನ ಆರೋಗ್ಯ ವ್ಯವಸ್ಥೆ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.