ನವದೆಹಲಿ : ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರಕಾರ ಆಪರೇಷನ್ ಗಂಗಾ ಹೆಸರಿನಲ್ಲಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದು, ಎಲ್ಲ ಭಾರತೀಯರನ್ನು ಸರ್ಕಾರದ ವೆಚ್ಚದಲ್ಲಿ ದೇಶಕ್ಕೆ ಕರೆತರಲಾಗುವುದು. ಈ ಉದ್ದೇಶಕ್ಕಾಗಿ ಅವರ ಅನುಮತಿಯೊಂದಿಗೆ ಉಕ್ರೇನ್‌ನ ನೆರೆಯ ದೇಶಗಳಿಗೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ಇನ್ನೊಂದೆಡೆ ,ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಸಿಜ್ಜಾರ್ಟೊ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಇದುವರೆಗೆ ಒದಗಿಸಿದ ಸ್ಥಳಾಂತರಿಸುವ ಬೆಂಬಲಕ್ಕೆ ಧನ್ಯವಾದಗಳು. ಹಂಗೇರಿ-ಉಕ್ರೇನ್ ಗಡಿಯಲ್ಲಿ ಹೆಚ್ಚಿನ ಸಹಕಾರವನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಜೈಶಂಕರ್ ಅವರು ಮೊಲ್ಡೊವಾ ವಿದೇಶಾಂಗ ಸಚಿವ ನಿಕು ಪೊಪೆಸ್ಕುಗೆ ಕರೆ ಮಾಡಿ ಉಕ್ರೇನ್-ಮೊಲ್ಡೊವಾ ಗಡಿಯಲ್ಲಿ ಭಾರತೀಯ ಪ್ರಜೆಗಳ ಪ್ರವೇಶಕ್ಕೆ ಅನುಕೂಲವಾಗುವಂತೆ ಬೆಂಬಲ ಕೋರಿದ್ದಾರೆ. ಅವರ ಪ್ರತಿಕ್ರಿಯೆ ಮತ್ತು ಬಲವಾದ ಬೆಂಬಲವನ್ನು ಶ್ಲಾಘಿಸಿ ನಮ್ಮ ಪ್ರತಿನಿಧಿಗಳು ಅದಕ್ಕೆ ಅನುಗುಣವಾಗಿ ನಾಳೆ ಅಲ್ಲಿಗೆ ತಲುಪುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ‘ಬಹುಮುಖಿ’ ಆಪರೇಷನ್ ಗಂಗಾವನ್ನು ಪ್ರಾರಂಭಿಸಿದೆ. ಈ ತೆರವು ಪ್ರಕ್ರಿಯೆಯು ಸರ್ಕಾರಿ ವೆಚ್ಚದಲ್ಲಿ ಇರುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವಿ ಶೃಂಗ್ಲಾ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ನಾವು ಹಂಗೇರಿ, ಪೋಲೆಂಡ್, ಸ್ಲೋವಾಕಿಯಾ ಮತ್ತು ರೊಮೇನಿಯಾದಿಂದ ನಮ್ಮವರನ್ನು ಸ್ಥಳಾಂತರಿಸುವ ಆಯ್ಕೆಗಳನ್ನು ಗುರುತಿಸಿದ್ದೇವೆ. ನಿರ್ದಿಷ್ಟ ಗಡಿ ದಾಟುವ ಸ್ಥಳಗಳನ್ನು ಗುರುತಿಸಲಾಗಿದೆ ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ವಿದೇಶಾಂಗ ಇಲಾಖೆಯ ತಂಡಗಳನ್ನು ನಿಯೋಜಿಸಿದ್ದೇವೆ ಎಂದು ಹರ್ಷ್ ವಿ ಶ್ರಿಂಗ್ಲಾ ತಿಳಿಸಿದ್ದಾರೆ.
ಕೈವ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ನಮ್ಮ ಸಚಿವಾಲಯವು ಪರಿಸ್ಥಿತಿಯನ್ನು ಹದಗೆಡುವ ಮೊದಲು ಹಲವಾರು ಸಲಹೆಗಳನ್ನು ನೀಡಿತ್ತು. ಈ ಸಲಹೆಗಳಿಗೆ ಅನುಸಾರವಾಗಿ ನಮ್ಮ 4000 ಪ್ರಜೆಗಳು ಸಂಘರ್ಷದ ಮೊದಲು ಉಕ್ರೇನ್ ತೊರೆದಿದ್ದರು. ಅಲ್ಲಿ ಸುಮಾರು 15,000 ಭಾರತೀಯ ನಾಗರಿಕರು ಉಳಿದಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.