Advertisement

ಮೊದಲ ಸವಾಲು ಜಯಿಸಿದ್ದೇವೆ: ಧೋನಿ

06:10 AM May 22, 2018 | Team Udayavani |

ಪುಣೆ: “ಮೊದಲ ಸವಾಲು ಜಯಿಸಿದ್ದೇವೆ’ ಎಂಬುದಾಗಿ ಐಪಿಎಲ್‌ ಲೀಗ್‌ ಹಂತವನ್ನು ದ್ವಿತೀಯ ಸ್ಥಾನದೊಂದಿಗೆ ಮುಗಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಹೇಳಿದ್ದಾರೆ.

Advertisement

2 ವರ್ಷ ನಿಷೇಧದ ಬಳಿಕ ಮರಳಿ ತಂಡವನ್ನು ಒಗ್ಗೂಡಿಸಿಕೊಂಡು ಗೆಲುವಿನ ಪಥದಲ್ಲಿ ಮುನ್ನಡೆಯುವುದು ಸುಲಭವಲ್ಲ ಎಂಬ ಅರ್ಥದಲ್ಲಿ ಧೋನಿ ಈ ಹೇಳಿಕೆ ನೀಡಿದ್ದಾರೆ. ಚೆನ್ನೈ 9 ಜಯದೊಂದಿಗೆ ದ್ವಿತೀಯ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿದ ಸಮಾಧಾನ, ಸಂತಸ ಧೋನಿ ಅವರದು.

ಲೀಗ್‌ ಹಂತದ ಕಟ್ಟಕಡೆಯ ಪಂದ್ಯದಲ್ಲಿ ಪಂಜಾಬ್‌ಗ 5 ವಿಕೆಟ್‌ ಸೋಲುಣಿಸಿದ ಬಳಿಕ ಧೋನಿ ಇಂಥದೊಂದು ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಚೆನ್ನೈ ಕೂಡ ಹೈದರಾಬಾದ್‌ನಷ್ಟೇ 9 ಗೆಲುವು ಸಾಧಿಸಿತು. ಆದರೆ ಅಗ್ರಸ್ಥಾನ ಮರೀಚಿಕೆಯಾಯಿತು. ಕೇವಲ 0.031ರ ರನ್‌ರೇಟ್‌ ಕೊರತೆ ಧೋನಿ ಪಡೆಯನ್ನು ಕಾಡಿತು. ಆದರೆ ಈ ಬಗ್ಗೆ ಅವರು ಭಾರೀ ಚಿಂತೆಗೇನೂ ಒಳಗಾಗಿಲ್ಲ.

“ಅಗ್ರಸ್ಥಾನ ಒಲಿಯದ ಬಗ್ಗೆ ಬೇಸರೆವೇನೂ ಇಲ್ಲ. ಈ ಗೆಲುವು ಹಾಗೂ ಮುಂದಿನ ಹಾದಿ ನಮಗೆ ಮುಖ್ಯ. ಇದೊಂದು ಸ್ವಿಂಗಿಂಗ್‌ ಟ್ರ್ಯಾಕ್‌ ಆಗಿತ್ತು. ಆಗ ಬೌಲರ್‌ಗಳಿಂದ ಹೆಚ್ಚಿನ ನಿರೀಕ್ಷೆ ಇರುತ್ತದೆ. ಇದನ್ನು ನಮ್ಮವರು ಹುಸಿಗೊಳಿಸಲಿಲ್ಲ. ಎನ್‌ಗಿಡಿ ಇದರ ಸಂಪೂರ್ಣ ಲಾಭವೆತ್ತಿದರು. ಚಹರ್‌, ಠಾಕೂರ್‌, ಬ್ರಾವೊ ಕೂಡ ಉತ್ತಮ ದಾಳಿ ಸಂಘಟಿಸಿದರು. ನಮ್ಮದೊಂದು ಪರಿಪೂರ್ಣ ಬೌಲಿಂಗ್‌ ಯೂನಿಟ್‌ ಹೊಂದಿರುವ ತಂಡ. ಮೊದಲ ಆವೃತ್ತಿಯಿಂದಲೇ ನಾವು ಖ್ಯಾತ ಬೌಲರ್‌ಗಳಿಗೆ ಅವಕಾಶ ನೀಡುತ್ತಲೇ ಬಂದಿದ್ದೇವೆ. ಅಶ್ವಿ‌ನ್‌, ಬೊಲಿಂಜರ್‌, ಮೋಹಿತ್‌… ಹೀಗೆ ಉದಾಹರಣೆ ಕೊಡಬಹುದು. ನಮ್ಮ ಮುಂದಿನ ಗುರಿ ಫೈನಲ್‌. ಬೌಲರ್‌ಗಳ ಸಹಕಾರ ಎಂದಿನಂತೆ ಮುಂದುವರಿಯುವ ವಿಶ್ವಾಸವಿದೆ’ ಎಂದು ಧೋನಿ ಆಶಾವಾದ ವ್ಯಕ್ತಪಡಿಸಿದರು.

“ಎಲ್ಲ ದಿಕ್ಕಿನಿಂದಲೂ ಎಡವಿದೆವು’
ನಿಜಕ್ಕಾದರೆ ಪಂಜಾಬ್‌ ಎಲ್ಲರಿಗಿಂತ ಮೊದಲು ಪ್ಲೇ-ಆಫ್ನಲ್ಲಿ ಸೀಟು ಕಾದಿರಿಸಿಕೊಳ್ಳಬೇಕಿತ್ತು. ಪಂಜಾಬ್‌ ಓಟ ಅಷ್ಟೊಂದು ವೇಗದಿಂದ ಕೂಡಿತ್ತು. ಆದರೆ ಅರ್ಧ ಹಾದಿಯ ಬಳಿಕ ಪಂಜಾಬ್‌ ಗೆಲುವಿನ ರೇಸ್‌ನಲ್ಲಿ ಬಹಳ ಹಿಂದುಳಿಯಿತು. ಚೆನ್ನೈ ವಿರುದ್ಧ ಭಾರೀ ಅಂತರದಿಂದ ಜಯಿಸಿದ್ದರೆ 4ನೇ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸುವ ಅಂತಿಮ ಅವಕಾಶವೊಂದಿತ್ತು. ಆದರೆ ಇದರಲ್ಲಿ ಪಂಜಾಬ್‌ ಯಶಸ್ವಿಯಾಗಲಿಲ್ಲ. ನಾವು ಎಲ್ಲ ದಿಕ್ಕಿನಿಂದಲೂ ಎಡವಿದೆವು ಎಂದು ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಐಪಿಎಲ್‌ ತಂಡವೊಂದರ ನಾಯಕತ್ವ ವಹಿಸಿದ ಆರ್‌. ಅಶ್ವಿ‌ನ್‌ ಹೇಳಿದರು.

Advertisement

“ಕಷ್ಟದ ದಿನ ಕೊನೆಯಲ್ಲೂ ಮರುಕಳಿಸಿತು. ನಮ್ಮ ಬ್ಯಾಟಿಂಗ್‌ ಉತ್ತಮ ಮಟ್ಟದಲ್ಲಿರಲಿಲ್ಲ. ಆರಂಭದಲ್ಲೇ 3 ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡೆವು. ಕರುಣ್‌ ನಾಯರ್‌ ಉತ್ತಮ ಪ್ರದರ್ಶನ ನೀಡಿದರು. ಆದರೂ 20-30 ರನ್‌ ಕೊರತೆ ಕಾಡಿತು. ಕೆಲವು ಕ್ಯಾಚ್‌ಗಳನ್ನೂ ಕೈಚೆಲ್ಲಿದೆವು. ದ್ವಿತೀಯಾರ್ಧದಲ್ಲಿ ನಮ್ಮ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸತತ ವೈಫ‌ಲ್ಯ ಕಂಡಿತು. ಇದು ನಮ್ಮ ಕತೆ…’ ಎಂಬುದಾಗಿ ಅಶ್ವಿ‌ನ್‌ ನಿರಾಸೆಯಿಂದ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next