Advertisement

 ಬದುಕುವ ಹಕ್ಕು ನಮಗೂ ಇದೆ 

03:33 PM Oct 23, 2017 | Team Udayavani |

ಪುತ್ತೂರು: ಯುವ ಬ್ರಿಗೇಡ್‌ ವತಿಯಿಂದ ಬದುಕುವ ಹಕ್ಕು ನಮಗೂ ಇದೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಣತೆ ಹಿಡಿದು ಮೆರವಣಿಗೆ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಬಸ್‌ ನಿಲ್ದಾಣ ಸಮೀಪದ ಗಾಂಧಿಕಟ್ಟೆವರೆಗೆ ರವಿವಾರ ನಡೆಯಿತು.

Advertisement

ದೇಶಾದ್ಯಂತ ನಡೆಯುತ್ತಿರುವ ಗೋಹತ್ಯೆ, ಅಕ್ರಮ ಗೋಸಾಗಟ, ಅಕ್ರಮ ಕಸಾಯಿಖಾನೆ ಮಾಹಿತಿದಾರರ ಹತ್ಯೆ ಪ್ರಕರಣ ಖಂಡಿಸಿ ಮೆರವಣಿಗೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇಗುಲದ ಬಳಿಯಿಂದ ಹೊರಟ ಮೆರವಣಿಗೆ ಗಾಂಧಿಕಟ್ಟೆ ಬಳಿ ಸಮಾಪನಗೊಂಡಿತು.

ಹಿಂದೂಗಳು ಜಾಗೃತರಾಗಿ
ಯುವ ಬ್ರಿಗೇಡ್‌ ಸದಸ್ಯ ಶ್ರೀವತ್ಸ ವಿಟ್ಲ ಮಾತನಾಡಿ, ದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕಳೆದ ಒಂದು ವಾರದಲ್ಲಿ ದೇಶಾದ್ಯಂತ ಗೋವುಗಳ ಅಕ್ರಮ ಸಾಗಾಟ, ಅಕ್ರಮ ಕಸಾಯಿ ಖಾನೆಗಳ ಸಂಖ್ಯೆ, ಇವುಗಳ ಮಾಹಿತಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಹತ್ಯೆಯಾದವರಲ್ಲಿ ಎಂಜಿನಿಯರ್‌ ನಂದಿನಿ, ಯೋಧ ದೀಪಕ್‌ ಮಂಡಲ್‌ ಅವರೇ ಸಾಕ್ಷಿ. ಗೋಹತ್ಯೆ ನಿರಾತಂಕವಾಗಿ ಸಾಗಬೇಕು ಎಂಬ ಹಿನ್ನೆಲೆಯಲ್ಲಿ ಅಕ್ರಮ ಕಸಾಯಿಖಾನೆ ಹೊಂದಿರುವ ಸಾಕಷ್ಟು ಮಂದಿಯ ಹತ್ಯೆಯಾಗಿದೆ. ಕುಟುಂಬ ತ್ಯಜಿಸಿ ದೇಶ ಕಾಪಾಡುವ ಯೋಧರು, ಸಾಮಾಜಿಕವಾಗಿ ರಕ್ಷಣೆ ನೀಡುವ ಪೊಲೀಸ್‌ನವರ ಮೇಲೂ ದೌರ್ಜನ್ಯ ಎಸಗುವ ಮಟ್ಟಕ್ಕೆ ಇಳಿದಿದ್ದಾರೆ. ಈ ಬಗ್ಗೆ ಹಿಂದೂಗಳು ಜಾಗೃತರಾಗಬೇಕು. ಇಲ್ಲವಾದಲ್ಲಿ ಗೋಮಾತೆಯನ್ನು ಮುಂದಿನ ದಿನಗಳಲ್ಲಿ ಫೋಟೋದಲ್ಲಿ ನೋಡಬೇಕಾದ ಸ್ಥಿತಿ ಎದುರಾಗಬೇಕಾದೀತು ಎಂದರು.

ಯುವ ಬ್ರಿಗೇಡ್‌ ಸದಸ್ಯ, ನ್ಯಾಯವಾದಿ ಜಯಾನಂದ ಮಾತನಾಡಿ, ಹಣದ ಉದ್ದೇಶದಿಂಧ ಗೋಹತ್ಯೆ ನಡೆಸಲಾಗುತ್ತಿರುವುದು ಖಂಡನೀಯ. ಸರಕಾರ ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.

ಯುವ ಬ್ರಿಗೇಡ್‌ನ‌ ಅನಿಲ್‌, ಸುಬ್ರಹ್ಮಣ್ಯ, ಅಕ್ಷಯ್‌, ಶಿವಕುಮಾರ್‌, ಕೇಶವ ಭಟ್‌, ಸವಿತಾ, ರವಿಶಂಕರ್‌, ವಸಂತ, ಪ್ರಭಾಕರ್‌, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆ, ನಗರಸಭಾ ಸದಸ್ಯ ರಾಜೇಶ್‌ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. ಯುವ ಬ್ರಿಗೇಡ್‌ನ‌ ಗಿರೀಶ್‌ ಹೊಳ್ಳ ಸ್ವಾಗತಿಸಿ, ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next