ನಂದೂರ್‌ಬರ್: ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ರಾಜಿ ಮಾಡಿಕೊಂಡಿತ್ತು ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರಕಾರವು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಮಹಾರಾಷ್ಟ್ರದ ನಾಶಿಕ್‌ನಲ್ಲಿ ನಡೆಸಿದ ಚುನಾವಣೆ ರ್ಯಾಲಿಯಲ್ಲಿ ಹೇಳಿದ್ದಾರೆ. ನಮ್ಮ ಸರಕಾರ ಕೈಗೊಂಡ ಕ್ರಮಗಳಿಂದಾಗಿ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದನೆಗೆ ಕಡಿವಾಣ ಬಿದ್ದಿದೆ. ಈಗ ಉಗ್ರ ಚಟುವಟಿಕೆ ಜಮ್ಮು ಕಾಶ್ಮೀರದ ಕೆಲವು ಭಾಗಗಳಿಗಷ್ಟೇ ಸೀಮಿತವಾಗಿದೆ ಎಂದಿದ್ದಾರೆ.
ರಫೇಲ್ ವಿಚಾರದಲ್ಲಿ ವಿಪಕ್ಷಗಳ ಟೀಕೆಯನ್ನು ಪ್ರಸ್ತಾಪಿಸಿದ ಅವರು, ಎಚ್‌ಎಎಲ್ ಅನ್ನು ಕಾಂಗ್ರೆಸ್ ನಾಶ ಮಾಡಿದೆ ಎಂದು ಆರೋಪಿಸಿದರು. ಬದಲಿಗೆ, ನಮ್ಮ ಸರಕಾರವು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರಕ್ಷಣಾ ಸಲಕರಣೆ ಖರೀದಿ ಪ್ರಕ್ರಿಯೆಯನ್ನು ಉತ್ತೇಜಿಸಿದೆ ಎಂದಿದ್ದಾರೆ. ನಾಶಿಕ್‌ನಲ್ಲಿ ಎಚ್‌ಎಎಲ್ ಘಟಕ ಇರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
2014ರಲ್ಲಿ ಭಾರತದ ಪರಿಸ್ಥಿತಿ ಹೇಗಿತ್ತು? ದೇಶದ ಎಲ್ಲೆಲ್ಲೂ ಬಾಂಬ್ ಸ್ಫೋಟ ನಡೆಯುತ್ತಿತ್ತು. ಮುಂಬೈ, ಪುಣೆ, ಹೈದರಾಬಾದ್, ಕಾಶಿ, ಅಯೋಧ್ಯೆ ಹಾಗೂ ಜಮ್ಮುವಿನಲ್ಲಿ ಸ್ಫೋಟ ನಡೆದಿತ್ತು. ಕಾಂಗ್ರೆಸ್ ಹಾಗೂ ಎನ್‌ಸಿಪಿ ಸರಕಾರ ಏನು ಮಾಡಿತು? ಸಂತಾಪ ಸಭೆ ನಡೆಸಿ ವಿಷಾದ ವ್ಯಕ್ತಪಡಿಸಿ ಸುಮ್ಮನಾಯಿತು. ಪಾಕಿಸ್ತಾನ ನಮ್ಮ ದೇಶಕ್ಕೆ ಹೀಗೆ ಮಾಡಿತ್ತು ಎಂದು ವಿಶ್ವದೆದುರು ಅವರು ಅಳುತ್ತಿದ್ದರು. ಆದರೆ ನಿಮ್ಮ ಚೌಕಿದಾರ ಮಾಡಿದ್ದೇನು? ಈ ವರ್ತನೆಯನ್ನೇ ನಿಮ್ಮ ಚೌಕಿದಾರ ಬದಲಿಸಿದ್ದಾನೆ ಎಂದು ಮೋದಿ ಹೇಳಿ ದ್ದಾರೆ. ಸರ್ಜಿಕಲ್ ದಾಳಿ ಹಾಗೂ ಬಾಲಕೋಟ್ ದಾಳಿಯನ್ನು ಪರೋಕ್ಷವಾಗಿ ಉಲ್ಲೇಖೀಸಿದ ಅವರು, ನಮ್ಮ ಸೇನೆಯು ಉಗ್ರರನ್ನು ಹುಡುಕಿ ಕೊಂಡು ಹೋಗಿ ಧ್ವಂಸ ಮಾಡಿತು. ಉಗ್ರರಿಗೂ ಗೊತ್ತಿತ್ತು, ನೆರೆದೇಶದಲ್ಲಿ ಅಡಗಿದರೂ ಮೋದಿ ನಮ್ಮನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.