ಲಾಹೋರ್: 2011ರಲ್ಲಿ ಮುಂಬಯಿಯಲ್ಲಿ ನಡೆದಿದ್ದ ಭೀಕರ ದಾಳಿಗೆ ಉಗ್ರರನ್ನು ಗಡಿದಾಟಿ ಕಳುಹಿಸಿದ್ದು ಪಾಕಿಸ್ಥಾನವೇ ಎಂದು ಅಲ್ಲಿನ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
“ದ ಡಾನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮ್ಮ ದೇಶದಲ್ಲಿ ಉಗ್ರ ಸಂಘಟನೆ ಗಳು ಸಕ್ರಿಯವಾಗಿವೆ’ ಎಂದು ಹೇಳಿದ್ದಾರೆ. ಅಲ್ಲದೆ, ಅಂಥ ಸಂಘಟನೆಗಳು ಗಡಿ ದಾಟಿ ಹೋಗಿ, ಮುಂಬಯಿಯಲ್ಲಿ ಅಷ್ಟೊಂದು ಮಂದಿಯನ್ನ ಕೊಲ್ಲಲು ಅವಕಾಶ ಕಲ್ಪಿಸಿದಂಥ ಪಾಕ್ ಸರಕಾರದ ನೀತಿಯನ್ನೂ ಅವರು ಪ್ರಶ್ನಿಸಿದ್ದಾರೆ.
ನಾವು ಈಗ ಏಕಾಂಗಿ ಯಾಗಿದ್ದೇವೆ. ಅಷ್ಟೊಂದು ತ್ಯಾಗ ಮಾಡಿದ್ದರೂ, ನಮ್ಮ ಅಹವಾಲುಗಳನ್ನು ಯಾರೂ ಆಲಿಸುತ್ತಿಲ್ಲ. ಆದರೆ, ಅಫ್ಘಾನಿ ಸ್ಥಾನದ ಮಾತುಗಳಿಗೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗುತ್ತಿದೆ. ನಾವು ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದೂ ಷರೀಫ್ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಉಗ್ರ ಸಂಘಟನೆಗಳು ಅತ್ಯಂತ ಪ್ರಭಾವಯುತವಾಗಿದ್ದು, ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ ಎಂದಿರುವ ಅವರು, ಹತ್ತು ವರ್ಷಗಳು ಪೂರ್ತಿಯಾದರೂ ಮುಂಬಯಿ ದಾಳಿಗೆ ಸಂಬಂಧಿಸಿದ ವಿಚಾರಣೆ ಏಕೆ ಪೂರ್ತಿಯಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಉಗ್ರರನ್ನು ಬೇರೊಂದು ದೇಶಕ್ಕೆ ಕಳುಹಿಸಿ, ಅಲ್ಲಿ ಭಯೋತ್ಪಾದನೆ ಮಾಡಲು ಅವಕಾಶ ಕಲ್ಪಿಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ರಷ್ಯಾ, ಚೀನ ಅಧ್ಯಕ್ಷರೂ ಹಲವು ಸಂದರ್ಭಗಳಲ್ಲಿ ಇದೇ ಮಾತುಗಳನ್ನು ಹೇಳಿದ್ದಾರೆ.
ಪಾಕಿಸ್ಥಾನವು ಅಮೆರಿಕಕ್ಕೆ ಸುಳ್ಳು ಹೇಳುತ್ತಿದೆ ಹಾಗೂ ಉಗ್ರರಿಗೆ ಸ್ವರ್ಗವಾಗಿರಲು ಬಯಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಆರೋಪಿಸಿದ್ದಾರೆ ಎಂದೂ ಷರೀಫ್ ಹೇಳಿದ್ದಾರೆ.