Advertisement

ನಾವೇ ಬಿಜೆಪಿಯಿಂದ ಬೆಂಗಳೂರನ್ನು ರಕ್ಷಿಸಿದ್ದೇವೆ

12:12 PM Mar 08, 2018 | Team Udayavani |

ಬೆಂಗಳೂರು: ಬೆಂಗಳೂರು ರಕ್ಷಿಸಿ ಎಂದು ಬಿಜೆಪಿಯವರು ಪಾದಯಾತ್ರೆ ನಡೆಸುತ್ತಿದ್ದಾರೆ. ವಾಸ್ತವವಾಗಿ ನಾವು ಅವರಿಂದ ಬೆಂಗಳೂರನ್ನು ರಕ್ಷಿಸಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಬಿಜೆಪಿಯವರು ಬಿಬಿಎಂಪಿಯಲ್ಲಿ 8 ಸಾವಿರ ಕೋಟಿ ರೂ. ಸಾಲ ಮಾಡಿದ್ದರು. ಬಿಬಿಎಂಪಿ ಆಸ್ತಿ ಅಡ ಇಟ್ಟಿದ್ದರು. ಅವರ ಅವಧಿಯಲ್ಲಿ ನಡೆದ ಹಗರಣಗಳ ಕುರಿತು ಐಎಎಸ್‌ ಅಧಿಕಾರಿ ಕಠಾರಿಯಾ ನೀಡಿರುವ ವರದಿ ಪಡೆದು ತನಿಖೆಗೆ ನ್ಯಾಯಮೂರ್ತಿ ಮೋಹನ್‌ ದಾಸ್‌ ನೇತೃತ್ವದ ಆಯೋಗ ರಚಿಸಲಾಗಿದೆ ಎಂದರು.

ಬೆಂಗಳೂರು ರಕ್ಷಿಸಿ ಎಂದು ಬಿಜೆಪಿಯವರು ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ಗೆ ಪ್ರತಿಯಾಗಿ ಕಾಂಗ್ರೆಸ್‌ ಕೂಡ ಅವರ ಅವಧಿಯಲ್ಲಿ ನಡೆದ ಅವ್ಯವಹಾರಗಳ ಕುರಿತು ದಾಖಲೆಗಳೊಂದಿಗೆ ಚಾರ್ಜ್‌ಶೀಟ್‌ ಬಿಡುಗಡೆ ಮಾಡಲಿದೆ ಸಚಿವರು ತಿಳಿಸಿದರು.

10 ಕೋಮು ಕೊಲೆ: ಕಾಂಗ್ರೆಸ್‌ ಅವಧಿಯಲ್ಲಿ ರಾಜ್ಯದಲ್ಲಿ 24 ಹಿಂದೂ ಯುವಕರ ಕೊಲೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಕೋಮು ದ್ವೇಷಕ್ಕೆ 10 ಕೊಲೆಗಳು ನಡೆದಿದ್ದು, ಉಳಿದ ಕೊಲೆಗಳು ವೈಯಕ್ತಿಕ ಕಾರಣಗಳಿಗೆ ನಡೆದಿವೆ ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ ಮೋದಿಯವರು ಪ್ರಧಾನಿಯಾಗಿದ್ದಾಗ ಎರಡು ಸಾವಿರ ಜನರ ನರಮೇಧ ನಡೆಯಿತು. ಹರಿಯಾಣದಲ್ಲಿ ರಾಮ್‌ ರಹೀಂ ವಿಷಯಕ್ಕೆ ಸಂಬಂಧಿಸಿದಂತೆ 35 ಜನರ ಕೊಲೆಯಾಗಿದೆ. ಅದೆಲ್ಲಾ ಬಿಜೆಪಿಯವರ ಗಮನಕ್ಕಿಲ್ಲ ಎಂದು ಟೀಕಿಸಿದರು.

Advertisement

ಮುಸ್ಲಿಮರ ಹತ್ಯೆ: ವಿಎಚ್‌ಪಿ, ಬಜರಂಗದಳ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರಿಂದ 11 ಮುಸ್ಲಿಮರ ಕೊಲೆಯಾಗಿದೆ. ಈ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಇವರನ್ನು ನರ ಹಂತಕರು, ಕೊಲೆಗಡುಕರು ಅಂತ ಯಾಕೆ ಕರೆಯಬಾರದು ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕೊಲೆ, ದರೋಡೆ, ಖೋಟಾ ನೋಟು ಪ್ರಕರಣಗಳು ಹೆಚ್ಚು ದಾಖಲಾಗಿವೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿದ್ದರಾಮಯ್ಯಗೆ ಬಡಿಗೆ ತೆಗೆದುಕೊಂಡು ಹೊಡೆಯಿರಿ ಎನ್ನುತ್ತಾರೆ. ಸಚಿವ ಅನಂತಕುಮಾರ್‌ ಹೆಗಡೆ ಕಟುಕ ಎನ್ನುತ್ತಾರೆ. ಸಿ.ಟಿ. ರವಿ, ನಳಿನ್‌ ಕುಮಾರ್‌ ಕಟೀಲ್‌ ಇವರೆಲ್ಲಾ ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಮಂಗಳೂರಿಗೆ ಕರೆಸಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಹೇಳುತ್ತಾರೆ. ಅವರ ರಾಜ್ಯವೇ ಅಪರಾಧ ಪ್ರಕರಣದಲ್ಲಿ ಮುಂದಿದೆ ಎಂದರು.

ಇದೇ ವೇಳೆ, ಜಯಲಲಿತಾ ಆಪೆ¤ ಶಶಿಕಲಾಗೆ ಜೈಲಿನಲ್ಲಿ ವೈದ್ಯರ ಶಿಫಾರಸಿನ ಮೇರೆಗೆ ಹಾಸಿಗೆ, ತಲೆದಿಂಬು ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಶಶಿಕಲಾಗೆ ಆರೋಗ್ಯ ಸಮಸ್ಯೆಯಾದರೆ, ಜೈಲಿನಲ್ಲಿಯೇ ಆಸ್ಪತ್ರೆ ಇದೆ. ಅಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು. 

ಅಶೋಕ್‌ ಬಂದರೆ ಚರ್ಚೆಗೆ ಸಿದ್ಧ: ಬಿಬಿಎಂಪಿ ಹಗರಣಗಳ ಬಗ್ಗೆ ನಗರದ ಟೌನ್‌ಹಾಲ್‌ ಮುಂದೆ ಚರ್ಚಿಸಲು ಮಾಜಿ ಡಿಸಿಎಂ ಆರ್‌.ಅಶೋಕ್‌ ಬಂದರೆ ಚರ್ಚೆಗೆ ನಾನೂ ಸಿದ್ಧ. ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ ದಾಖಲೆ ಬಿಡುಗಡೆ ಮಾಡಿದ್ದರೆ, ನಾವೂ ವಿಧಾನ ಪರಿಷತ್‌ ಮಾಜಿ ಸದಸ್ಯರನ್ನೇ ಚರ್ಚೆಗೆ ಕಳುಹಿಸುತ್ತೇವೆ. ನನ್ನ ಸರಿ ಸಮಾನರು, ಆರ್‌.ಅಶೋಕ್‌ ಅಥವಾ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಬಂದರೆ ಚರ್ಚೆಗೆ ಸಿದ್ಧ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next