ಭಾಲ್ಕಿ: ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತದೆ. ಅದರ ಲಾಭವನ್ನು ಮೋದಿ ಅವರು ಮಾತಿನ ಮೂಲಕ ಪಡೆಯಲು ಯತ್ನಿಸುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಪಟ್ಟಣದ ಬಿಕೆಐಟಿ ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀಡಿದ ಶೇ.90ರಷ್ಟು ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂದರು. ರೆಡ್ಡಿ ಬ್ರದರ್ಸ್ ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ. ಭ್ರಷ್ಟ ವ್ಯಕ್ತಿ ಯಡಿಯೂರಪ್ಪ ಅವರನ್ನು ಏಕೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದೀರಿ ಎನ್ನುವುದರ ಕುರಿತು ರಾಜ್ಯದ ಜನರಿಗೆ ತಿಳಿಸದೇ ಕೇವಲ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ವೈಯಕ್ತಿಕ ಮಾತನ್ನು ಆಡುತ್ತೀರಿ. ಇದರಿಂದ ಏನೂ ಪ್ರಯೋಜನ ಇಲ್ಲ. ನನ್ನ ಬಗ್ಗೆ ಮೋದಿ ಅವರು ಎಷ್ಟೇ ಕೆಟ್ಟದ್ದಾಗಿ ಮಾತನಾಡಿರೂ ನಾನು ಅವರ ಬಗ್ಗೆ ಗೌರಯುತವಾಗಿ ಮಾತನಾಡುತ್ತೇನೆ. ಅವರು
ದೇಶದ ಪ್ರಧಾನ ಮಂತ್ರಿ ಎಂದರು.
ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವವೋ ಅನ್ನುವ ಯೋಜನೆ ಘೋಷಣೆ ಮಾಡಿದ್ದರು. ಈಗ “ಬೇಟಿ ಬಚಾವೋ ಉತ್ತರ ಪ್ರದೇಶ ಶಾಸಕರಿಂದ’ ಎನ್ನುವಂತಾಗಿದೆ. ದೇಶದ ವಿವಿಧೆಡೆ ದಲಿತರು, ಮಹಿಳೆಯರ ಮೇಲೆ ನಡೆದ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ ಕುರಿತು ಮೋದಿ ಅವರು ಬಾಯಿ ಬಿಡಲಿಲ್ಲ. ಅವರ ಪೊಳ್ಳು ಆಶ್ವಾಸನೆಗಳ ಆಟ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ, ಕೆ.ಎಚ್.ಮುನಿಯಪ್ಪ, ಶೈಲಜನಾಥನ್, ಮುರುಮ್, ಭೀಮಣ್ಣ ಖಂಡ್ರೆ, ಸಚಿವ ಈಶ್ವರ ಖಂಡ್ರೆ, ವಿಶಾಲ ಪುರಿ, ರೇಖಾ ಪಾಟೀಲ, ಗೀತಾ ಖಂಡ್ರೆ, ಮಹಾದೇವ ಸ್ವಾಮಿ, ಜಮೀರ ಅಹಮದ, ಸೋಮನಾಥಪ್ಪ ಅಸ್ಟೂರೆ ಇದ್ದರು. ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಸ್ವಾಗತಿಸಿದರು. ಹಣಮಂತರಾವ್ ಚವ್ಹಾಣ ವಂದಿಸಿದರು.