ನವದೆಹಲಿ: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆ ಕುರಿತ ಬೇಡಿಕೆ ಹಾಗೂ ಸಮಸ್ಯೆಯನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ(ಡಿಸೆಂಬರ್ 08, 2020) 7ಗಂಟೆಗೆ ಮಾತುಕತೆ ನಡೆಸಲು ರೈತ ಮುಖಂಡರಿಗೆ ಆಹ್ವಾನ ನೀಡಿರುವುದಾಗಿ ಭಾರತಿಯ ಕಿಸಾನ್ ಸಂಘ(ಬಿಕೆಯು)ದ ಮುಖಂಡ ರಾಕೇಶ್ ಟಿಕೈಟ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಹಿರಿಯ ರೈತ ಮುಖಂಡ, ಇಂದು ರಾತ್ರಿ 7ಗಂಟೆಗೆ ಸಚಿವ ಅಮಿತ್ ಶಾ ಜತೆ ಚರ್ಚೆ ನಡೆಯಲಿದೆ. ನಾವೀಗ ಸಿಂಘು ಗಡಿಯತ್ತ ತೆರಳಲಿದ್ದು, ನಂತರ ಅಲ್ಲಿಂದ ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದರು.
ಪ್ರತಿಭಟನೆ, ಭಾರತ್ ಬಂದ್ ಕರೆ ನಡುವೆ ಕೇಂದ್ರ ಗೃಹ ಸಚಿವರ ಆಹ್ವಾನದಿಂದ ನಿಮಗೆ ಏನಾದರು ಪರಿಹಾರದ ನಿರೀಕ್ಷೆ ಇದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಕೇಶ್ ಅವರು, ಇದೊಂದು ಉತ್ತಮ ಬೆಳವಣಿಗೆ. ಈ ಮಾತುಕತೆ ಮೂಲಕ ಏನಾದರು ಧನಾತ್ಮಕ ಅಂಶ ಹೊರಬೀಳಬಹುದು ಎಂದು ಆಶಾಭಾವ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಪಂಜಾಬ್ ನಲ್ಲಿ ಮತ್ತೆ ಉಗ್ರ ಚಟುವಟಿಕೆಗೆ ಸಂಚು: ಐಎಸ್ ಐಗೆ ಭಿಂದ್ರನ್ ವಾಲೆ ಸೋದರಳಿಯನ ಸಾಥ್!
ಕೇಂದ್ರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಹಾಗೂ ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಮಂಗಳವಾರ(ಡಿಸೆಂಬರ್ 08) ದೇಶಾದ್ಯಂತ ಭಾರತ್ ಬಂದ್ ಗೆ ಕರೆ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಅಂಗಡಿ, ಮುಂಗಟ್ಟು ಬಂದ್ ಆಗಿದ್ದು, ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿರುವುದಾಗಿ ವರದಿ ತಿಳಿಸಿದೆ.
ಪಂಜಾಬ್, ಹರ್ಯಾಣ ಮತ್ತು ದೆಹಲಿ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲೆಡೆ ಬಸ್, ಜನಸಂಚಾರ ಸೇರಿದಂತೆ ಎಲ್ಲಾ ಅಂಗಡಿ, ಮುಂಗಟ್ಟು ತೆರೆದಿತ್ತು.