Advertisement

ಕೆಲಸದ ಕೂಲಿ ಕೇಳಲು ಬಂದಿದ್ದೇವೆ

12:03 PM Mar 05, 2018 | Team Udayavani |

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

Advertisement

ನೈಸ್‌ ಜಂಕ್ಷನ್‌ ಬಳಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಸಾಧನೆಯ ಸಂಭ್ರಮ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಕಳೆದ ಐದು ವರ್ಷಗಳಲ್ಲಿ ನಿಮ್ಮ ಸೇವೆ ಮಾಡಿದ್ದೇವೆ. ಅದಕ್ಕೆ ಈಗ ಕೂಲಿ ಕೇಳಲು ಬಂದಿದ್ದೇವೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸೋಮಶೇಖರ್‌ ಸಾಕಷ್ಟು ಶ್ರಮಿಸಿದ್ದು, ಅಪಾರ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ಸೋಮಶೇಖರ್‌ ಅವರೇ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆ’ ಎಂದು ಹೇಳಿದರು. 

ಈ ಹಿಂದೆ ಯಶವಂತಪುರದಿಂದ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸಿದ್ದರು. ಆದರೆ, ಏನೂ ಕೆಲಸ ಮಾಡಲಿಲ್ಲ. ಹಾಗಾಗಿ, ಹೆದರಿ ರಾಜಾಜಿನಗರಕ್ಕೆ ಓಡಿದರು. ಅಲ್ಲಿಯೂ ಹೀನಾಯವಾಗಿ ಸೋಲುಂಡರು ಎಂದು ಲೇವಡಿ ಮಾಡಿದರು.

ಸವಾಲು: ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, “ಕ್ಷೇತ್ರದಲ್ಲಿ ನಾನು ರೌಡಿಸಂ ಮತ್ತು ಭೂಮಾಫಿಯಾದಲ್ಲಿ ತೊಡಗಿದ್ದೇನೆ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಇದು ಸಾಬೀತಾದರೆ, ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದರು. 

Advertisement

ಯಶವಂತಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗೆ ಕಾವೇರಿ ನೀರು ಸಂಪರ್ಕ, ಒಳಚರಂಡಿ, ಬೀದಿ ದೀಪ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ 17 ಕೋಟಿ ರೂ ವೆಚ್ಚದಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ,

ನಗರದಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಬಡವರು ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಐತಿಹಾಸಿಕ ತೀರ್ಮಾನ ಮಾಡಲಾಗಿದೆ, ಸೊಣ್ಣೇನಹಳ್ಳಿ ಉಲ್ಲಾಳು ವ್ಯಾಪ್ತಿಯ ಕೊಳಗೇರಿಯಲ್ಲಿ ಮೂರು ಸಾವಿರ ಮನೆಗಳಿಗೆ ಹಕ್ಕುಪತ್ರ ವಿತರಣೆ ಹಾಗೂ 3,200 ಮನೆಗಳಿಗೆ “ಎ’ ಖಾತಾ ನೀಡಲಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ 10 ಸಾವಿರ ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆ ಇದ್ದು, 6,500 ಸಾವಿರ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಂಚನಬೆಲೆ ಜಲಾಶಯದಿಂದ ಕ್ಷೇತ್ರ ವ್ಯಾಪ್ತಿಯ 32 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಚಿವ ಸಂಪುಟದ ಒಪ್ಪಿಗೆ ದೊರಕಿದ್ದು, ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಸಚಿವರಾದ ಕೆ.ಜೆ. ಜಾರ್ಜ್‌, ಡಾ.ಎಚ್‌.ಸಿ. ಮಹದೇವಪ್ಪ, ಬಿಡಿಎ ಅಧ್ಯಕ್ಷ ವೆಂಕಟೇಶ್‌, ವಿಧಾನ ಪರಿಷತ್‌ ಸದಸ್ಯ ನಾರಾಯಣ ಸ್ವಾಮಿ, ಮೇಯರ್‌ ಸಂಪತ್‌ರಾಜ್‌, ಪಾಲಿಕೆ ಸದಸ್ಯ ರಾಜಣ್ಣ, ಪಂಚಾಯಿತಿ ಅಧ್ಯಕ್ಷೆ ಲೋಕಾದೇವಿ ನಾಗರಾಜ್‌, ಜಿಲ್ಲಾಧಿಕಾರಿ ವಿ. ಶಂಕರ್‌ ಮತ್ತಿತರರು ಇದ್ದರು. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next