ಚೆನ್ನೈ: ಎರಡು ವರ್ಷಗಳ ನಿಷೇಧ ಕಳಚಿಕೊಂಡು 2018ರ ಐಪಿಎಲ್‌ಗೆ ಮರಳಿದ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಶಸ್ತಿ ಸಮರಕ್ಕೆ ಅಣಿಯಾಗಿದೆ. 4 ದಿನ ಮೊದಲೇ ತಂಡ ಫೈನಲ್ ಪ್ರವೇಶಿಸಿದ್ದರಿಂದ ಆಟಗಾರರೆಲ್ಲ ಪ್ರಶಸ್ತಿ ಕಾದಾಟಕ್ಕೆ ಮಾನಸಿಕವಾಗಿ ಅಣಿಯಾಗಿದ್ದಾರೆ. ಯಾವ ಎದುರಾಳಿ ಬಂದರೂ ಒಂದು ಕೈ ನೋಡಿಯೇ ಬಿಡುವ ಉಮೇದಿನಲ್ಲಿದ್ದಾರೆ. ಕ್ರಿಕೆಟ್ ಪಂಡಿತರ ದೃಷ್ಟಿಯಲ್ಲೂ ಚೆನ್ನೈ ಈ ಬಾರಿಯ ಫೇವರಿಟ್ ತಂಡವಾವಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ತಂಡದ ಹಿರಿಯ ಸದಸ್ಯ ಸುರೇಶ್ ರೈನಾ, ಧೋನಿಗಾಗಿ ಐಪಿಎಲ್ ಗೆದ್ದು ತರಬಲ್ಲ ಸಮರ್ಥ ತಂಡ ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ.
“ಚೆನ್ನೈ ತಂಡ ಫೈನಲ್ ಕಾಣುತ್ತಿರುವುದು ಇದು ಏಳನೇ ಸಲ. 2 ವರ್ಷಗಳ ನಿಷೇಧದ ಬಳಿಕ ತಂಡ ಪ್ರಶಸ್ತಿ ಸುತ್ತು ತಲುಪಿದ್ದರಿಂದಲೋ ಏನೋ, ನಾಯಕ ಧೋನಿ ಹೆಚ್ಚು ಭಾವುಕರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಚೆನ್ನೈ ತಂಡದ ಯಶಸ್ಸಿನ ಬಗ್ಗೆ ಬಹಳ ನಿಗಾ ವಹಿಸುತ್ತಲೇ ಬಂದಿದ್ದಾರೆ. ತಂಡವನ್ನು 2 ಸಲ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ. 3ನೇ ಸಲ ತಂಡಕ್ಕೆ ಪ್ರಶಸ್ತಿ ತಂದುಕೊಡಬೇಕೆಂಬುದು ಅವರ ಹೆಬ್ಬಯಕೆ. ಅವರಿಗಾಗಿ ಐಪಿಎಲ್ ಗೆದ್ದು ತರಬಲ್ಲ ಸಮರ್ಥ ಪಡೆ ಚೆನ್ನೈ ಬಳಿ ಇದೆ…’ ಎಂಬುದಾಗಿ ತಂಡದ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ವಿಶ್ವಾಸ ವ್ಯಕ್ತಪಡಿಸಿದರು.
ಟೀಕೆಗಳಿಗೆ ಜಗ್ಗದ ಕ್ರಿಕೆಟಿಗ
“ಧೋನಿ ಯಾವುದೇ ರೀತಿಯ ಟೀಕೆಗಳಿಗೂ ಜಗ್ಗದ ಆಟಗಾರ. ಇದಕ್ಕೆಲ್ಲ ಅವರು ತಮ್ಮ ಸಾಧನೆಯ ಮೂಲಕವೇ ಉತ್ತರ ನೀಡುತ್ತ ಬಂದಿದ್ದಾರೆ. ಕೆಲವೊಮ್ಮೆ ನಾವು ಇದನ್ನು ಭಾವನಾತ್ಮಕ ದೃಷ್ಟಿಕೋನದಿಂದಲೂ ನೋಡಬೇಕಾಗುತ್ತದೆ. ಅವರು ಅಸಹಾಯಕರಾದಾಗಲೆಲ್ಲ ನಾವು ವಿಶೇಷವಾದುದನ್ನು ಸಾಧಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಧೋನಿಗೆ ಈ ಸಲದ ಕಪ್ ಗೆದ್ದು ಕೊಡಬೇಕಾಗಿದೆ…’ ಎಂದು ಸುರೇಶ್ ರೈನಾ ಹೇಳಿದರು.