Advertisement

ನಮ್ಮಲ್ಲಿ 198 ಹೊಸ ತಳಿ! ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಈ ಅಂಶ: ಝಡ್‌ಎಸ್‌ಐ ಶೋಧನೆ

02:43 AM Jun 04, 2020 | Sriram |

ಹೊಸದಿಲ್ಲಿ: ಕೋವಿಡ್ -19 ವೈರಸ್‌ಗಳಿಗೆ ಸಂಬಂಧಿಸಿದಂತೆ ಕೆಲವಾರು ಕುತೂಹಲ ಸಂಗತಿಗಳನ್ನು ಭಾರತೀಯ ಪ್ರಾಣಿಶಾಸ್ತ್ರ ಸರ್ವೆ (ಝಡ್‌ಎಸ್‌ಐ) ಸಂಶೋಧಕರು ಪತ್ತೆ ಹಚ್ಚಿದ್ದಾರೆ.

Advertisement

ಚೀನದಲ್ಲಿ ಉಗಮವಾಗಿರುವ ಕೋವಿಡ್ -19 ವೈರಾಣುಗಳ ವಂಶವಾಹಿಯಲ್ಲಿ ಹಲವಾರು ರೂಪಾಂತರಗಳಾಗಿವೆ. ಸದ್ಯಕ್ಕೆ ಭಾರತದಲ್ಲಿ ಪತ್ತೆಯಾಗಿರುವ ಕೋವಿಡ್ -19 ವೈರಾಣುಗಳಲ್ಲಿ 198 ಹೊಸ ತಳಿಯ ವೈರಾಣುಗಳಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹೊಸ ತಳಿಗಳು ಹೆಚ್ಚಾಗಿ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿ ಕಂಡುಬಂದಿವೆ ಎಂದು ಝೆಡ್‌ಎಸ್‌ಐ ಸಂಸ್ಥೆಯ “ಸೆಂಟರ್‌ ಫಾರ್‌ ಡಿಎನ್‌ಎ ಟಾಕ್ಸೋನಮಿ’ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.

ಹೊಸ ತಳಿಗಳ ಸೃಷ್ಟಿ ಹೇಗೆ?: “ಮಾಲೆಕ್ಯುಲರ್‌ ಬಯಾಲಜಿ ಹಾಗೂ ಜೆನೆಟಿಕ್ಸ್‌’ ವಿಜ್ಞಾನದ‌ ಪ್ರಕಾರ, ಯಾವುದೇ ಜೀವಿಯ ವಂಶವಾಹಿಗಳು (ಜೀನ್‌ಗಳು) ಆ ಜೀವಿಯ ಡಿಎನ್‌ಎಯಲ್ಲಿ ಅಡಕವಾಗಿರುತ್ತವೆ. ಆ ಡಿಎನ್‌ಎಯು “ಜೀನೋಮ್‌’ ಎಂಬ ಒಂದು ಕೋಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಇರುತ್ತವೆ. ವೈರಾಣುಗಳು ಯಾವುದೇ ಪ್ರದೇಶ, ಪ್ರಾಂತ್ಯಕ್ಕೆ ಹರಡಿದಾಗ ಆ ಪರಿಸರಕ್ಕೆ ತಕ್ಕಂತೆ ಅವುಗಳ ಜೀನೋಮ್‌ಗಳೂ ಮಾರ್ಪಾಡು ಹೊಂದುತ್ತವೆ.

ಜೀನೋಮ್‌ಗಳಲ್ಲಿ ಬದಲಾವಣೆ
ಆದಂತೆಲ್ಲ ಅವುಗಳ ಒಳಗಿರುವ ಡಿಎನ್‌ಎ ರಚನೆಗಳಲ್ಲೂ, ಅದರೊಳಗಿನ ವಂಶವಾಹಿಗಳಲ್ಲೂ ಬದಲಾವಣೆಯಾಗುತ್ತಿರುತ್ತದೆ. ಈ ಬದಲಾವಣೆಗಳು ಹೊಸ ಪರಿಸರ, ವಾತಾವರಣಕ್ಕೆ ತಕ್ಕಂತೆ ವೈರಾಣುವನ್ನು ಬಲಿಷ್ಠಗೊಳಿಸುತ್ತವೆ. ಹೀಗೆ ಬದಲಾದ ವೈರಾಣುಗಳು ಹೊಸ ತಳಿಗಳಾಗಿ ಮಾರ್ಪಡುತ್ತವೆ.

ಭಾರತದಲ್ಲಿವೆ 198 ತಳಿಗಳು: ಭಾರತದ ನಾನಾ ಪ್ರಾಂತ್ಯಗಳಿಂದ ಸಂಗ್ರಹಿಸಲಾಗಿರುವ ಕೋವಿಡ್ -19 ವೈರಾಣುಗಳ ಜಿನೋಮ್‌ಗಳು ಸುಮಾರು 400 ಬಾರಿ ಮಾರ್ಪಾಟು ಹೊಂದಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಆ ಮಾರ್ಪಾಟುಗಳಿಂದ ಏನಿಲ್ಲವೆಂದರೂ 198 ಹೊಸ ತಳಿಗಳು ಉತ್ಪತ್ತಿಯಾಗಿವೆ. ಕೋವಿಡ್ -19 ವೈರಾಣು ಸಾರ್ಸ್‌-ಕೋವ್‌-2 ವೈರಾಣುವಿನ ಹೊಸ ಪೀಳಿಗೆ ಆಗಿರುವುದರಿಂದ, ಕೋವಿಡ್ -19ದಲ್ಲಿ ಹೊಸ ಪೀಳಿಗೆಗಳು ಹುಟ್ಟಿರುವುದರಿಂದ ಹೊಸ ತಳಿಗಳನ್ನು ಸಾರ್ಸ್‌- ಕೋವ್‌-2ರ ಹೊಸ ತಲೆಮಾರು ಎಂದು ಪರಿಗಣಿಸಬಹುದು. ಕರ್ನಾಟಕ ಸೇರಿ ದೆಹಲಿ, ಗುಜರಾತ್‌, ತೆಲಂಗಾಣ, ಮಹಾರಾಷ್ಟ್ರದಲ್ಲಿ ಕೊರೊನಾ ಹೊಸ ತಳಿಗಳನ್ನು ಕಾಣಬಹುದಾಗಿದೆ ಎಂದು “ಸೆಂಟರ್‌ ಫಾರ್‌ ಡಿಎನ್‌ಎ ಟಾಕ್ಸೋನಮಿ’ ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಮತ್ತೊಂದೆಡೆ, ಭಾರತದ ಎಲ್ಲೆಡೆ ಹರಡಿರುವ ವೈರಾಣುಗಳು 2ನೇ ಅತ್ಯಂತ ಪ್ರಭಾವಿ ಸಾಂಕ್ರಾಮಿಕ ವೈರಾಣುಗಳಾಗಿ ಮಾರ್ಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.

15 ದಿನಗಳಲ್ಲಿ 1 ಲಕ್ಷ ಮಂದಿಗೆ ಸೋಂಕು
ದೇಶವ್ಯಾಪಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಬುಧವಾರ 2 ಲಕ್ಷ ದಾಟಿದ್ದು, ಕಳೆದ 15 ದಿನಗಳ ಅವಧಿಯಲ್ಲೇ ಬರೋಬ್ಬರಿ ಲಕ್ಷ ಮಂದಿಗೆ ಸೋಂಕು ತಗಲಿರುವ ಗಮನಾರ್ಹ ವಿಚಾರ ಬಹಿರಂಗವಾಗಿದೆ.

ವುಹಾನ್‌ನಿಂದ ಜ.30ರಂದು ಕೇರಳಕ್ಕೆ ಆಗಮಿಸಿದ್ದª ವಿದ್ಯಾರ್ಥಿಗಳಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಮಾರ್ಚ್‌ನಲ್ಲಿ ಪ್ರಕರ ಣಗಳ ಸಂಖ್ಯೆ ಕ್ರಮೇಣ ಹೆಚ್ಚಳವಾಗ ತೊಡಗಿತು. ಮಾ. 10ರ ವೇಳೆಗೆ ದೇಶದಲ್ಲಿ 50 ಮಂದಿಗೆ ಸೋಂಕು ತಗುಲಿತ್ತು. ಅನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾ ಗುತ್ತಲೇ ಸಾಗಿತು. ಮೇ 18ರಂದು ಇದು 1 ಲಕ್ಷಕ್ಕೆ ತಲುಪಿತ್ತು. ಅಂದರೆ ಮೊದಲ ಪ್ರಕರಣ ದಾಖಲಾದ ದಿನದಿಂದ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ತಲುಪಲು 110 ದಿನಗಳು ಬೇಕಾದವು. ಆದರೆ, ಅನಂತರದಲ್ಲಿ ಸೋಂಕು 2 ಲಕ್ಷಕ್ಕೇ ರಲು ಕೇವಲ 2 ವಾರ ಸಾಕಾಯಿತು.

ಪರೀಕ್ಷೆಯಲ್ಲಿ ಭಾರತ ಟಾಪ್‌ 5: ಭಾರತದಲ್ಲಿ ಪರೀಕ್ಷಾ ಮೂಲಸೌಕರ್ಯಗಳನ್ನು ಗಣನೀಯವಾಗಿ ಸುಧಾರಿಸಲಾಗಿದ್ದು, ಪ್ರತಿದಿನ 1.2 ಲಕ್ಷ ಕೋವಿಡ್‌-19 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ವರೆಗೆ ಸುಮಾರು 40 ಲಕ್ಷ ಪರೀಕ್ಷೆಗಳು ನಡೆದಿದ್ದು, ಈ ವಿಚಾರದಲ್ಲಿ ಜಗತ್ತಿನ ಐದು ದೇಶಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ.

3 ನಗರಗಳಲ್ಲೇ ಶೇ.44ರಷ್ಟು ಸೋಂಕಿತರು
ದೇಶದ ಒಟ್ಟಾರೆ ಸೋಂಕಿತರ ಪೈಕಿ ಶೇ.44ರಷ್ಟು ಸೋಂಕಿತರು ಮುಂಬಯಿ, ದಿಲ್ಲಿ ಮತ್ತು ಚೆನ್ನೈ ಯಲ್ಲಿದ್ದಾರೆ. ಇಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಉಳಿದೆರಡು ನಗರಗಳಿಗೆ ಹೋಲಿಸಿದರೆ ಮುಂಬಯಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಸೋಂಕಿತರಿದ್ದಾರೆ. ಚೆನ್ನೈ ನಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಪ್ರಮಾಣವು ದಿಲ್ಲಿಗಿಂತಲೂ ಅಧಿಕವಿದೆ. ಎಪ್ರಿಲ್‌ ಕೊನೆಯ ವಾರದವರೆಗೂ ಮುಂಬಯಿಯಲ್ಲಿ ಪ್ರಕರಣಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚಳವಾಗುತ್ತಿತ್ತು. ಆದರೆ, ಈಗ ಮುಂಬಯಿಗಿಂತಲೂ ಹೆಚ್ಚು ವೇಗವಾಗಿ ದಿಲ್ಲಿಯಲ್ಲಿ ಸೋಂಕು ವ್ಯಾಪಿಸುತ್ತಿದೆ.

ಜೂನ್‌ ಮಧ್ಯೆದಿನಕ್ಕೆ 15,000 ಪ್ರಕರಣ?
ಭಾರತದಲ್ಲಿ ಕೋವಿಡ್ -19ವ್ಯಾಪಿಸುವಿಕೆಯ ತೀವ್ರತೆ ನೋಡಿದರೆ ಜೂನ್‌ ತಿಂಗಳ ಮಧ್ಯಭಾಗದಲ್ಲಿ ದಿನಕ್ಕೆ 15 ಸಾವಿರದಂತೆ ಹೊಸ ಪ್ರಕರಣಗಳು ಪತ್ತೆಯಾಗಲಿವೆ ಎಂದು ಚೀನದ ಸಂಶೋಧಕರು ಸಿದ್ಧಪಡಿಸಿದ ಜಾಗತಿಕ ಕೋವಿಡ್ -19 ಮುನ್ಸೂಚನೆ ವರದಿ ಹೇಳಿದೆ.

ವಾಯವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿನ ಲಾಂಝೌ ವಿಶ್ವವಿದ್ಯಾಲಯದ ಸಂಶೋಧಕರು “ಗ್ಲೋಬಲ್‌ ಕೋವಿಡ್‌-19 ಪ್ರಡಿಕ್ಟ್ ಸಿಸ್ಟಂ’ ಎಂಬ ವರದಿ ತಯಾರಿಸುತ್ತಿದ್ದು, 180 ದೇಶಗಳ ಕೋವಿಡ್ -19 ಸ್ಥಿತಿಗತಿ ಕುರಿತು ಮುನ್ಸೂಚನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅದರಂತೆ, ಭಾರತಕ್ಕೆ ಸಂಬಂಧಿಸಿದ ವರದಿಯಲ್ಲಿ, ಬುಧವಾರದಿಂದ ಮುಂದಿನ 4 ದಿನಗಳವರೆಗೆ ಕ್ರಮವಾಗಿ ಪ್ರತಿದಿನ 9676, 10,078, 10,498 ಮತ್ತು 10,936 ಪ್ರಕರಣಗಳು ಪತ್ತೆಯಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತದಲ್ಲಿ ಮೇ 28ರಂದು 7,467 ಮಂದಿಗೆ ಕೋವಿಡ್ -19 ಸೋಂಕು ದೃಢಪಟ್ಟಿತ್ತು. ನಾವು ಮೇ 28ರಂದು 7,607 ಪ್ರಕರಣ ಪತ್ತೆಯಾಗಬಹುದೆಂದು ಭವಿಷ್ಯ ನುಡಿದಿದ್ದೆವು. ಅದು ಬಹುತೇಕ ನಿಜವಾಗಿದೆ’ ಎಂದು ಈ ಯೋಜನೆಯ ನೇತೃತ್ವ ವಹಿಸಿರುವ ಹುವಾಂಗ್‌ ಜಿಯಾನ್‌ ಪಿಂಗ್‌ ಹೇಳಿದ್ದಾರೆ. ಜೂನ್‌ 15ರ ವೇಳೆಗೆ ಭಾರತದಲ್ಲಿ ಪ್ರತಿನಿತ್ಯ 15 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಲಿದೆ ಎಂದೂ ಅವರು ಹೇಳಿದ್ದಾರೆ.

ಒಂದೇ ದಿನ ಗರಿಷ್ಠ ಪ್ರಕರಣ
ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8 ಗಂಟೆವರೆಗೆ ಒಟ್ಟಾರೆ 8,909 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಅವಧಿಯಲ್ಲಿ 217 ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟೊಂದು ಮಂದಿಗೆ ಸೋಂಕು ತಗುಲಿರುವುದು ಇದೇ ಮೊದಲು. ಈ ನಡುವೆ, ಒಂದು ಲಕ್ಷದಷ್ಟು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದು, ಗುಣಮುಖ ಪ್ರಮಾಣ ಶೇ.48.31ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next