“ನಾನು ಸಿನಿಮಾ ಬಿಟ್ಟು ಎಲ್ಲೂ ಹೋಗಿಲ್ಲ. ನಾನು ಇಲ್ಲೇ ಇದ್ದೀನಿ. ಆದ್ರೆ ಅದೇನೋ ಗೊತ್ತಿಲ್ಲ, ನಾನು ಇತ್ತೀಚೆಗೆ ಮಾಡುತ್ತಿರುವ ಸಿನಿಮಾಗಳನ್ನು ಎಲ್ಲರೂ ನನ್ನ ಕಂ ಬ್ಯಾಕ್ ಸಿನಿಮಾ ಅಂಥ ಕರೆಯುತ್ತಿದ್ದಾರೆ. ನಾನು ಸಿನಿಮಾ ಬಿಟ್ಟು ಹೊರಗೆ ಹೋಗಿದ್ದರೆ ತಾನೇ ಕಂ ಬ್ಯಾಕ್ ಆಗೋದು. ನಾನು ಇಲ್ಲೇ ಇದ್ದು, ಸಿನಿಮಾ ಮಾಡುವಾಗ ನನ್ನ ಸಿನಿಮಾವನ್ನು ಕಂ ಬ್ಯಾಕ್ ಸಿನಿಮಾ ಅಂಥ ಯಾಕೆ ಕರೆಯುತ್ತಾರೋ, ಗೊತ್ತಿಲ್ಲ….’ ಇದು ನಟಿ ಸಿಂಧು ಲೋಕನಾಥ್ ಮಾತು.
ನಟಿ ಸಿಂಧೂ ಲೋಕನಾಥ್ ಮದುವೆಯಾದ ಬಳಿಕ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಅಪರೂಪ ವಾಗಿದೆ ಅನ್ನೋದು ಚಿತ್ರರಂಗದಲ್ಲಿ ಕೆಲವರ ಮಾತು. ಮತ್ತೆ ಕೆಲವರು ಸಿಂಧೂ ಲೋಕನಾಥ್ ಅಭಿನಯಿಸುತ್ತಿರುವ ಹೊಸ ಚಿತ್ರಗಳನ್ನು ಅವರ ಕಂ ಬ್ಯಾಕ್ ಸಿನಿಮಾ ಎಂದು ಕರೆಯುತ್ತಿದ್ದಾರೆ. ಆದ್ರೆ ಸಿಂಧೂ ಲೋಕನಾಥ್ ಮಾತ್ರ ಈ ಬಗ್ಗೆ ಹೇಳೋದು ಬೇರೆಯೇ. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಆಗೊಂದು, ಈಗೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಸಿಂಧೂ ಲೋಕನಾಥ್ ಚಿತ್ರರಂಗದಿಂದ ಗ್ಯಾಪ್ ತೆಗೆದುಕೊಂಡಿರಲಿಲ್ಲವಂತೆ .
ಇದರ ನಡುವೆಯೇ ಈ ವರ್ಷದ ಆರಂಭದಲ್ಲಿಯೇ ಸಿಂಧೂ “ಕಾಣದಂತೆ ಮಾಯವಾದನು’ ಮತ್ತು “ಕೃಷ್ಣ ಟಾಕೀಸ್’ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈ ಬಗ್ಗೆ
“ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಸಿಂಧೂ ಲೋಕನಾಥ್ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. “ನಾನು ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಕಡಿಮೆ. ಅದಕ್ಕೆ ಕಾರಣ ಒಳ್ಳೆಯ ಸ್ಕ್ರಿಪ್ಟ್ಗಳು ಸಿಗದಿರುವುದು.
ಸಿನಿಮಾವನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ನಾನು ತುಂಬ ಚ್ಯೂಸಿ. ನನಗೆ ಸಿನಿಮಾದ ಕಥೆ, ನನ್ನ ಪಾತ್ರ, ಅದರ ಸ್ಕ್ರಿಪ್ಟ್ ಎಲ್ಲವೂ ಇಷ್ಟವಾದರೇನೆ ಆ ಸಿನಿಮಾ ಒಪ್ಪಿಕೊಳ್ಳೋದು. ಸುಮ್ಮನೆ ಆಫರ್ ಬರುತ್ತಿದೆ ಅಂಥ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳಲು ನಾನು ರೆಡಿಯಿಲ್ಲ. ಮಾಡೋದು ಕೆಲವೇ ಕೆಲವು ಸಿನಿಮಾಗಳಾದರೂ, ಅವು ಆಡಿಯನ್ಸ್ ನೆನಪಿನಲ್ಲಿ ಉಳಿಯುವಂಥ ಸಿನಿಮಾಗಳಾಗಿರಬೇಕು’ ಅನ್ನೋದು ಸಿಂಧೂ ಮಾತು. ಇನ್ನು ಈ ವಾರ, ಸಿಂಧೂ ಅಭಿನಯದ “ಕಾಣದಂತೆ ಮಾಯವಾದನು’ ಚಿತ್ರ ತೆರೆಗೆ ಬರುತ್ತಿದೆ.
2016ರಲ್ಲಿ ಶುರುವಾದ ಈ ಚಿತ್ರ ಸುಮಾರು ಮೂರುವರೆ ವರ್ಷಗಳ ಬಳಿಕ ತೆರೆಗೆ ಬರುತ್ತಿದೆ. ಇದರಲ್ಲಿ ಸಿಂಧೂ ಅತ್ತ ತೀರಾ ಮಾಡ್ರನ್ ಅಲ್ಲದ, ಇತ್ತ ತೀರಾ ಟ್ರೆಡೀಷನಲ್ ಅಲ್ಲದ ಇಂದಿನ ಕಾಲದ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಸಿಂಧೂ, “ಇದೊಂದು ಗೋಸ್ಟ್ ಫ್ಯಾಂಟಸಿ-ಲವ್‌ಸ್ಟೋರಿ ಇರುವ ಸಿನಿಮಾ. ಇದರಲ್ಲಿ ಆತ್ಮವಿದೆ, ಹುಡುಕಾಟವಿದೆ. ಹಾಗಂತ ಇದು ಹಾರರ್ ಸಿನಿಮಾವಲ್ಲ. ಎನ್.ಜಿ.ಒ ದಲ್ಲಿ ವರ್ಕ್ ಮಾಡುವ, ತುಂಬಾ ಸೆನ್ಸಿಬಲ್ ಆಗಿರುವ, ಅಷ್ಟೇ ಮೆಚೂರ್ಡ್ ಆಗಿರುವ ಹುಡುಗಿಯ ಕ್ಯಾರೆಕ್ಟರ್ ನನ್ನದು.
“ಲವ್ ಇನ್ ಮಂಡ್ಯ’ ಸಿನಿಮಾದ ನಂತರ ನನಗೆ ತುಂಬಾ ಇಷ್ಟವಾದ ಕ್ಯಾರೆಕ್ಟರ್ ಈ ಸಿನಿಮಾದಲ್ಲಿ ಸಿಕ್ಕಿದೆ. 2016ರಲ್ಲೇ ನಾನು ಈ ಸಿನಿಮಾ ಒಪ್ಪಿಕೊಂಡಿದ್ದೆ. ಆನಂತರ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಉದಯ್ ಅವರ ಸಾವಿನಿಂದ, ಆ ಪಾತ್ರವನ್ನು ಮತ್ತೆ ರೀ-ಶೂಟ್ ಮಾಡಬೇಕಾ ಯಿತು. ಜೊತೆಗೆ ಗ್ರಾಫಿಕ್ಸ್, ಸಿ.ಜಿ ವರ್ಕ್ ಗಳಿಗೂ ಸಾಕಷ್ಟು ಸಮಯ ಹಿಡಿಯಿತು. ಹಾಗಾಗಿ “ಕಾಣದಂತೆ ಮಾಯ ವಾದನು’ ಸಿನಿಮಾ ರಿಲೀಸ್ ಆಗೋದಕ್ಕೆ ಸ್ವಲ್ಪ ತಡವಾಯಿತು’ ಎಂದು ತಡವಾದ ಕಾರಣ ವಿವರಿಸುತ್ತಾರೆ. “ಕಾಣದಂತೆ ಮಾಯವಾದನು..’
ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮತ್ತು ಭರವಸೆಯ ಮಾತುಗಳನ್ನಾಡುವ ಸಿಂಧೂ, “ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಇರುವಂಥ ಸಿನಿಮಾ. ಇಡೀ ಸಿನಿಮಾ ಥಿಯೇಟರ್‌ನಲ್ಲಿ ಒಂದು ಕ್ಷಣ ಕೂಡ ಆಡಿಯನ್ಸ್ ಗಮನ ಅತ್ತಿತ್ತ ಹರಿಯಲು ಬಿಡುವುದಿಲ್ಲ. ನನ್ನ ಪ್ರಕಾರ ಇದು ಎಲ್ಲರಿಗೂ ಬ್ರೇಕ್ ಕೊಡುವಂಥ ಸಿನಿಮಾ’ ಎನ್ನುತ್ತಾರೆ. ಚಿತ್ರದಲ್ಲಿ ಸಿಂಧೂ ಲೋಕನಾಥ್, ನಾಯಕ ವಿಕಾಸ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಸಿಂಧೂ ಹೊಸಲುಕ್‌ನಲ್ಲಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.