ತುಮಕೂರು: ಯಾವುದೇ ಕಾರಣಕ್ಕೂ ನಮ್ಮ ಜಮೀನುಗಳನ್ನು ನಾವು ಬಿಟ್ಟು ಕೊಡುವುದಿಲ್ಲ. ನೀವು ನೋಟಿಸ್ ನೀಡಿದ್ದೀರಾ, ನಾವು ಸಭೆಗೆ ಬಂದಿದ್ದೇವೆ, ನೀವು ಎಷ್ಟೇ ಪರಿಹಾರ ಕೊಡುತ್ತೇವೆಂದರೂ ನಾವು ಜಮೀನು ನೀಡಲು ಸಿದ್ಧರಿಲ್ಲ. ಜಪಾನೀಸ್ ಟೌನ್‌ಶಿಪ್ ನಿರ್ಮಾಣ ಮಾಡಲು ನಮ್ಮ ಬದುಕನ್ನು ಏಕೆ ಬಲಿ ಕೊಡುತ್ತೀರಾ ಎಂದು ರೈತರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರನ್ನೇ ಪ್ರಶ್ನಿಸಿದ ಘಟನೆ ನಡೆದಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ, ಬೆಸ್ಕಾಂ ಸೇರಿದಂತೆ ಇತರೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರೈತರ ಜಮೀನುಗಳಿಗೆ ಪರಿಹಾರ ನೀಡುವ ಕುರಿತು ಪ್ರಸ್ತಾಪ ಮಾಡಿದರು.
ರೈತರು ಮಾತನಾಡಿ, ಈಗಾಗಲೇ ನಮ್ಮ ಜಮೀನುಗಳಲ್ಲಿ ವಿದ್ಯುತ್ ಲೈನ್‌ಗಳು ಹಾದು ಹೋಗಿವೆ. ಅದರ ತೊಂದರೆಯನ್ನೆ ನಮ್ಮ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮತ್ತೆ 400 ಕೆ.ವಿ ವಿದ್ಯುತ್ ತಂತಿಗಳನ್ನು ನಮ್ಮ ಜಮೀನುಗಳಲ್ಲಿ ಸಾಗಿಸಿದರೆ ಹೇಗೆ, ನಾವು ಯಾವುದೇ ಕಾರಣಕ್ಕೂ ನಮ್ಮ ಜಮೀನುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ಇದಕ್ಕೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಪ್ರತಿಕ್ರಿಯಿಸಿ ಇದು ಸಭೆ. ಎಲ್ಲರಿಗೂ ಮಾತನಾಡುವ ಹಕ್ಕಿದೆ. ನಿಮ್ಮ ಅಭಿಪ್ರಾಯವನ್ನು ನೀವು ತಿಳಿಸಿ, ನಮ್ಮ ಅಭಿಪ್ರಾಯವನ್ನೂ ಕೇಳಿ. ಆ ನಂತರ ಸಭೆಯ ನಡಾವಳಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು. ಈ ಹಿಂದೆ ಜಿಲ್ಲಾಧಿಕಾರಿಗಳು ಮಾಡಿರುವ ಆದೇಶದಂತೆ ಎಕರೆಗೆ 50 ಲಕ್ಷ ರೂ. ನೀಡುತ್ತೇವೆ, ಜಪಾನೀಸ್ ಟೌನ್‌ಶಿಪ್ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ತಂತಿಗಳು ಅಲ್ಲಿ ಹಾದು ಹೋಗಿವೆ. ಅದನ್ನು ಬದಲಾಯಿಸಬೇಕಾಗಿದೆ. ಇದಕ್ಕೆ ಒಪ್ಪಿಗೆ ಸೂಚಿಸಿ ಮುಂದೆ ಬರುವ ರೈತರಿಗೆ ಪರಿಹಾರ ನೀಡಲಾಗುವುದು. ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಮುನ್ನ ರೈತರ ಒಪ್ಪಿಗೆ ಅವಶ್ಯ ಎಂದು ಹೇಳಿದರು.
ಬಳಿಕ ಎಲ್ಲಾ ರೈತರು ಒಗ್ಗಟ್ಟಿನಿಂದಲೇ ಮಾತನಾಡಿ, ಜಪಾನೀಸ್ ಕಂಪನಿಯ ಉದ್ದಾರಕ್ಕೆ ನಮ್ಮ ಜಮೀನುಗಳನ್ನು ಏಕೆ ಕೊಡಬೇಕು. ನೀವೆಷ್ಟೆ ಪರಿಹಾರ ನೀಡಿದರೂ ನಾವು ಜಮೀನು ನೀಡುವುದಿಲ್ಲ, ಇದಕ್ಕೆ ನಾವು ಬದ್ಧರಾಗಿದ್ದೇವೆ, ಈಗ ಹಾದುಹೋಗಿರುವ ಜಾಗದಲ್ಲೇ ವಿದ್ಯುತ್ ಲೈನ್ ಹೋಗಲಿ. ಆದರೆ ಮತ್ತೆ ಬೇರೆ ಕಡೆ ವಿದ್ಯುತ್ ಲೈನ್ ಸ್ಥಳಾಂತರ ಮಾಡಲು ನಮ್ಮ ವಿರೋಧವಿದೆ ಎಂದು ಸುತ್ತ-ಮುತ್ತಲಿನ ಗ್ರಾಮಗಳ ರೈತರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.