Advertisement
ಬೆಂಗಳೂರು ಪ್ರಸ್‌ಕ್ಲಬ್ ಭಾನುವಾರ ಹಮ್ಮಿಕೊಂಡಿದ್ದ ಪ್ರಸ್‌ಕ್ಲಬ್ ವರ್ಷದ ವ್ಯಕ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ರಾಜಕಾರಣಿಯಾದವರು ಸಮಾಜದಲ್ಲಿ ಶಾಂತಿ-ಸಹಬಾಳ್ವೆ ನೆಲೆಸಲೆಂದು ಆಶಿಸಬೇಕು. ಈ ನಿಟ್ಟಿನಲ್ಲಿ ಶ್ರಮಿಸಬೇಕು. ಆದರೆ, ಸಾಮರಸ್ಯ ಹಾಳು ಮಾಡಬೇಕೆಂದು ಬಯಸುವವರು ನನ್ನ ಪ್ರಕಾರ ಮನುಷ್ಯರೇ ಅಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಬೆಂಕಿ ಹಚ್ಚಲು ನಾವು ಸುಲಭವಾಗಿ ಬಿಡುವುದಿಲ್ಲ. ಹಾಗೊಂದು ವೇಳೆ ಬೆಂಕಿ ಹಚ್ಚಿದರೂ ತಕ್ಷಣ ನಾವು ಆರಿಸಿ ಬಿಡುತ್ತೇವೆ ಎಂದು ಸೂಚ್ಯವಾಗಿ ಹೇಳಿದರು.
Related Articles
Advertisement
ಮತ್ತೂಬ್ಬರ ಪ್ರಾಣವೂ ಮುಖ್ಯ:ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ “ಪ್ರಸ್‌ಕ್ಲಬ್ ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಮಾಜದಲ್ಲಿ ನನ್ನ ಪ್ರಾಣ ಎಷ್ಟು ಮುಖ್ಯವೋ ಮತ್ತೂಬ್ಬರ ಪ್ರಾಣವೂ ಅಷ್ಟೇ ಅಮೂಲ್ಯ ಎಂದು ತಿಳಿದವರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಮತ್ತೂಬ್ಬರನ್ನು ದ್ವೇಷಿಸುವವನು ಮಾನವನಾಗಲು ಸಾಧ್ಯವೇ ಇಲ್ಲ. ಧರ್ಮ, ಜಾತಿಯ ಹಿನ್ನೆಲೆ ನೋಡುವುದಲ್ಲ; ವಿಶ್ವಮಾನವನಾಗಿ ಜಗತ್ತಿಗೆ ಕಾಲಿಟ್ಟ ವ್ಯಕ್ತಿ, ವಿಶ್ವಮಾನವನಾಗಿ ಬೆಳೆಯಲು ಪ್ರಯತ್ನಿಸಬೇಕು ಎಂದು ಹೇಳಿದರು. ಸಂವಿಧಾನವು ಜಾತ್ಯತೀತವಾದುದು. ಇದನ್ನು ಜಾರಿಗೊಳಿಸುವುದು ಚುನಾಯಿತ ಸರ್ಕಾರದ ಜವಾಬ್ದಾರಿ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಜನಪ್ರತಿನಿಧಿಗಳಾಗಲು ಲಾಯಕ್ಕಿಲ್ಲ. ಜಾತೀಯತೆ ಅನುಸರಿಸಿದರೆ, ಅದು ಸಂವಿಧಾನಬಾಹಿರ. ಈ ಮೂಲಭೂತ ತಿಳವಳಿಕೆ ಜನಪ್ರತಿನಿಧಿಗಳಲ್ಲಿ ಇರಬೇಕು ಎಂದು ಸೂಚ್ಯವಾಗಿ ಹೇಳಿದರು. ಪರ್ಯಾಯ ಸಂವಿಧಾನ ಸಾಧ್ಯವಿಲ್ಲ:
ಮಾನವೀಯ ಮೌಲ್ಯಗಳನ್ನೇ ಸಂವಿಧಾನ ಪ್ರತಿಪಾದನೆ ಮಾಡುತ್ತದೆ. ಆ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಆದರೆ, ಆ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಅಪರಾಧವೇ ಎಂದು ಪ್ರಶ್ನಿಸಿದ ಅವರು, ಡಾ.ಅಂಬೇಡ್ಕರ್ ಅವರು ಸ್ವ-ಅನುಭವದಿಂದ ಈ ಸಂವಿಧಾನವನ್ನು ರಚಿಸಿದ್ದಾರೆ. ಇದಕ್ಕಿಂತ ಉತ್ತಮವಾದುದು ಅಥವಾ ವ್ಯತಿರಿಕ್ತವಾದುದನ್ನು ತರಲು ಸಾಧ್ಯವೇ ಇಲ್ಲ ಮತ್ತು ಸೂಕ್ತವೂ ಅಲ್ಲ ಎಂದು ಹೇಳಿದರು.
ಸಮಾಜದಲ್ಲಿ ಕೆಳವರ್ಗದವರು ಸ್ವಾಭಿಮಾನದಿಂದ ಬದುಕುವುದೇ ದುರಹಂಕಾರ ಎಂದು ಬಿಂಬಿಸಲಾಗುತ್ತಿದೆ. ಆದರೆ, ಮೇಲ್ವರ್ಗದವರು ಇದೇ ಸ್ವಾಭಿಮಾನದಿಂದ ಬದುಕಿದರೆ, ಅದು ಪ್ರತಿಷ್ಠೆ ಆಗುತ್ತದೆ. ಈ ಮನಃಸ್ಥಿತಿ ಬದಲಾಗಬೇಕಾಗಿದೆ ಎಂದ ಅವರು, ನನಗೂ ದುರಹಂಕಾರಿ, ಹುಂಬ ಎಂದೆಲ್ಲಾ ಕೆಲವರು ಹೇಳುತ್ತಾರೆ. ಆದರೆ, ನಾನು ಹಳ್ಳಿಯಿಂದ ಬಂದವನು. ಆ ಸೊಗಡು ಹೋಗುವುದೇ ಇಲ್ಲ. ಹಾಗಾಗಿ, ನಾನು ಮಾತನಾಡುವುದೇ ಹೀಗೆ ಎಂದರು.