Advertisement
ಭಾರತದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿಯವರು ರಾಷ್ಟ್ರೀಯ ಭದ್ರತೆಯ ವಿಷಯ ಬಳಸುತ್ತಾರೆ. ದೇಶದ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಭವಿಷ್ಯದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಇದು ದೇಶದ ದೊಡ್ಡ ವಿಷಯವಲ್ಲವೇ? ಅದೇಕೆ ಪ್ರಧಾನಿಗಳು ತಮ್ಮ ಭಾಷಣಗಳಲ್ಲಿ ನಿರುದ್ಯೋಗದ ವಿಷಯದಲ್ಲಿ ತಮ್ಮ ಸರ್ಕಾರದ ಅಂಕಿಸಂಖ್ಯೆಗಳ ಬಗ್ಗೆ ಮಾತನಾಡುವುದಿಲ್ಲ? ರೈತರ ಸಾಮೂಹಿಕ ಆತ್ಮಹತ್ಯೆಗಳು ದೊಡ್ಡ ಸಮಸ್ಯೆಯಲ್ಲವೇ? ಈ ಬಗ್ಗೆ ಏಕೆ ಪ್ರಧಾನಿಗಳು ಮಾತನಾಡುವುದಿಲ್ಲ?
Related Articles
Advertisement
ಮನಮೋಹನ್ ಸಿಂಗ್ ಅವಧಿಯಲ್ಲಿ ಮೂರು ಸರ್ಜಿಕಲ್ ದಾಳಿ ನಡೆದಿದ್ದವು. ಆದರೆ ನಾವು ಇದನ್ನು ಜಗತ್ತಿನ ಮುಂದೆ ಹೇಳಿಕೊಳ್ಳಲಿಲ್ಲ. ಏಕೆಂದರೆ ನಮ್ಮ ಸೈನಿಕರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದಕ್ಕೆ ನಾವು ಬಯಸುವುದಿಲ್ಲ. ನಾವು ಸೈನಿಕರನ್ನು ಗೌರವಿಸುತ್ತೇವೆ, ಸೆಲ್ಯೂಟ್ ಮಾಡುತ್ತೇವೆ. ಮೋದಿಯವರಂತೆ ಸೈನ್ಯದ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡು ಅಗೌರವ ತೋರುವುದಿಲ್ಲ.
•ಮನಮೋಹನ್ ಅವಧಿಯಲ್ಲಿ ನಡೆದ ಮೂರು ಸರ್ಜಿಕಲ್ ದಾಳಿಗಳ ಫಲಿತಾಂಶವೇನಾಯಿತು?
ಆಗ ಏನು ನಡೆಯಿತು ಅಂತ ಹೇಳುವುದಿಲ್ಲ. ಆದರೆ, ಟಾರ್ಗೆಟ್ ಅನ್ನು ಹೊಡೆದುರುಳಿಸುವಲ್ಲಿ ಆಗ ಸೇನೆ ಸಫಲವಾಗಿತ್ತು.
•2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ನಡೆದರೂ ಯುಪಿಎ ಸರ್ಕಾರ ತಿರುಗಿ ಬೀಳಲಿಲ್ಲ ಎಂದು ದೂಷಿಸುತ್ತದೆ ಬಿಜೆಪಿ…
ಸತ್ಯವೇನೆಂದರೆ, ಅಂದು ನಾವು ಪಾಕಿಸ್ತಾನವನ್ನು ವ್ಯೂಹಾತ್ಮಕವಾಗಿ ಸಂಪೂರ್ಣವಾಗಿ ಕಟ್ಟಿಹಾಕಿಬಿಟ್ಟಿದ್ದೆವು. ಜಮ್ಮು-ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸುವುದಕ್ಕಾಗಿ ಅಂತಾರಾಷ್ಟ್ರೀಯ ಕ್ಯಾಂಪೇನ್ ಕೈಗೊಂಡೆವು. ಆದರೆ ನಾವು ಈ ವಿಚಾರಗಳನ್ನು ರಾಜಕೀಯಗೊಳಿಸಲಿಲ್ಲ.
•ಪ್ರಸಕ್ತ ಸರ್ಕಾರವು ಕಾಶ್ಮೀರದ ವಿಚಾರದಲ್ಲಿ ಕಠಿಣ ವೈಖರಿಯನ್ನು ಅಳವಡಿಸಿಕೊಂಡಿದೆ. ಇದರಿಂದ ಪ್ರಯೋಜನ ಆಗುತ್ತಿದೆಯೇ?
ಜಮ್ಮು-ಕಾಶ್ಮೀರದ ವಿಷಯದಲ್ಲಿ ಈ ಸರ್ಕಾರಕ್ಕೆ ಒಂದು ಸ್ಟ್ರಾಟಜಿಯೇ ಇಲ್ಲ. ಇದರ ಬದಲು ಇತರೆ ರಾಜ್ಯಗಳಿಂದ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕಾಗಿ ಜಮ್ಮು-ಕಾಶ್ಮೀರದ ವಿಷಯವನ್ನು ಬಳಸಿಕೊಳ್ಳುತ್ತಿದೆ. ನರೇಂದ್ರ ಮೋದಿಯವರು ಪಿಡಿಪಿಯೊಂದಿಗೆ ಅವಕಾಶವಾದಿ ಮೈತ್ರಿ ಮಾಡಿಕೊಂಡ ಕೂಡಲೇ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದ ಮತ್ತೂಮ್ಮೆ ಆರಂಭವಾಯಿತು. ನನಗೆ ನೆನಪಿದೆ, ಅರುಣ್ ಜೇಟ್ಲಿ ಅವರು ನನ್ನನ್ನು ಭೇಟಿಯಾಗಲು ಬಂದಾಗ ಈ ವಿಚಾರವಾಗಿ ನಾನು ಮಾತನಾಡಿದ್ದೆ- ‘ಜೇಟ್ಲಿಯವರೇ, ನೀವೆಲ್ಲ ಜಮ್ಮು-ಕಾಶ್ಮೀರದಲ್ಲಿ ಏನು ಮಾಡುತ್ತಿದ್ದೀರಿ ಎಂಬ ಅರಿವಿದೆಯೇ? ಇದರಿಂದಾಗಿ ಆ ಭಾಗ ಹೊತ್ತಿ ಉರಿಯಲಿದೆ’ ಎಂದಿದ್ದೆ. ಆದರೆ ಜೇಟ್ಲಿ- ‘ಕಾಶ್ಮೀರ ಶಾಂತಿಯುತವಾಗಿದೆ, ಅಲ್ಲೇನೂ ಆಗುವುದಿಲ್ಲ’ ಎಂದಿದ್ದರು. ಸತ್ಯವೇನೆಂದರೆ ಪಿಡಿಪಿಯೊಂದಿಗಿನ ಮೋದಿಯವರ ಮೈತ್ರಿಯೇ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದಕ್ಕೆ ದ್ವಾರಬಾಗಿಲು ತೆರೆದುಬಿಟ್ಟಿತು.
•ಕಾಶ್ಮೀರದ ವಿಷಯವನ್ನು ನೀವು ಹೇಗೆ ನಿಭಾಯಿಸುತ್ತಿದ್ದಿರಿ?
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಆ ರಾಜ್ಯದ ವಿಚಾರದಲ್ಲಿ ತುಂಬಾ ಯೋಚನೆ ಮಾಡಿ ವ್ಯೂಹತಂತ್ರಗಳನ್ನು ರಚಿಸಿದ್ದೆವು. ಈ ವಿಚಾರದಲ್ಲಿ ನನ್ನದೂ ಶ್ರಮವಿದೆ. ವರ್ಷಗಳವರೆಗೆ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡಿದೆವು. ಅಲ್ಲಿ ಪಂಚಾಯಿತಿ ಚುನಾವಣೆಗಳನ್ನು ನಡೆಸಿದೆವು, ಟಾಟಾರಂಥ ಬೃಹತ್ ಉದ್ಯಮಿಯನ್ನು ಜಮ್ಮು-ಕಾಶ್ಮೀರಕ್ಕೆ ಕರೆದೊಯ್ದು ಅಲ್ಲಿನ ಯುವಕರಿಗೆ ಹೊಸ ದೃಷ್ಟಿಕೋನ ಸಿಗುವಂತೆ ಮಾಡಲು, ಅವರು ಉದ್ಯೋಗಗಳನ್ನು ಹುಡುಕಿಕೊಳ್ಳುವಂತಾಗಲು ಶ್ರಮಿಸಿದೆವು. ಸ್ವಸಹಾಯ ಗುಂಪುಗಳ ಮೂಲಕ ಸಾವಿರಾರು ಹೆಣ್ಣುಮಕ್ಕಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಬೆಸೆದೆವು. ಈ ಎಲ್ಲಾ ಕ್ರಮಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದದ ಬೆನ್ನೆಲುಬು ಮುರಿದಿತ್ತು. 2004ರಲ್ಲಿ ನಾವು ಅಧಿಕಾರಕ್ಕೆ ಬರುವ ಹೊತ್ತಿಗೆ ಕಾಶ್ಮೀರ ಹೊತ್ತಿ ಉರಿಯುತ್ತಿತ್ತು. ನಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ಕಾಶ್ಮೀರ ಶಾಂತವಾಗಿತ್ತು. ನನಗಿನ್ನೂ ನೆನಪಿದೆ, ಆಗೆಲ್ಲ ಪ್ರತಿ ದಿನ ಶ್ರೀನಗರಕ್ಕೆ ಸುಮರು 50 ವಿಮಾನಗಳು ಪ್ರವಾಸಿಗರನ್ನು ಹೊತ್ತೂಯ್ಯುತ್ತಿದ್ದವು. ಹಾಗಾಗಿ ನೀವು ನಮ್ಮ ಕಾರ್ಯವೈಖರಿಯನ್ನು ಗಮನಿಸಿ ನೋಡಿ. ಕೇವಲ ಉಗ್ರವಾದವನ್ನು ಹೊಸಕಿ ಹಾಕುವುದಷ್ಟೇ ಅಲ್ಲ, ಅದರೊಟ್ಟಿಗೆ ಜಮ್ಮು-ಕಾಶ್ಮೀರದ ಜನರೊಂದಿಗೆ ಒಡನಾಡಿ ಅವರಿಗೆ ವಿಭಿನ್ನ ದೃಷ್ಟಿಕೋನವನ್ನು ಅರ್ಥಮಾಡಿಸಲು ಪ್ರಯತ್ನಿಸಿದೆವು.
••ಮೋದಿಯವರ ವಿದೇಶಾಂಗ ನೀತಿಗಳ ಬಗ್ಗೆ ಏನಂತೀರಿ?
ಮೋದಿ ಅವರಿಗೆ ವಿದೇಶಾಂಗ ನೀತಿಯೇ ಇಲ್ಲ! ದಿನವೂ ಹುಚ್ಚಾಟಿಕೆ ನಡೆಸುತ್ತಾರೆ. ಉದಾರಣೆಗೆ, ಅವರು ಆಫ್ಘಾನಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದರು, ಆಮೇಲೆ ಹಠಾತ್ತಾಗಿ ಅಲ್ಲಿಂದ ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸಿಬಿಟ್ಟರು. ಆಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಹಾರಿ ಹೋಗುವ ಮೂಲಕ, ಅಫ‌್ಗನ್ ನಾಗರಿಕರಿಗೆ ತಾವು ಕೆಟ್ಟ ಸಂದೇಶ ಕಳುಹಿಸುತ್ತಿದ್ದೇವೆ ಎನ್ನುವುದೂ ಅವರಿಗೆ ಅರ್ಥವಾಗುವುದಿಲ್ಲ. ಅವರ ನಡೆಯಿಂದಾಗಿ ಆಫ್ಘಾನಿಸ್ತಾನ ಸರ್ಕಾರಕ್ಕೂ ಬೇಸರವಾಗಿತ್ತು. ಅವರಿಗೆ ಫಾರಿನ್ ಪಾಲಿಸಿಯ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ವಿಶ್ವ ನಾಯಕರನ್ನು ತಬ್ಬಿಕೊಳ್ಳುವುದೇ ವಿದೇಶಾಂಗ ನೀತಿ ಅಂದುಕೊಂಡಿದ್ದಾರೆ ಮೋದಿ!
••ನೀವೂ ನರೇಂದ್ರ ಮೋದಿಯನ್ನು ತಬ್ಬಿಕೊಂಡಿರಲ್ಲ?
ಅವರೇನೂ ವಿದೇಶಿ ನಾಯಕರಲ್ಲವಲ್ಲ?
••ಹಾಗಿದ್ದರೆ ನೀವು ಮೋದಿಯವರನ್ನು ತಬ್ಬಿಕೊಳ್ಳುವುದಕ್ಕೂ, ಮೋದಿಯವರು ವಿದೇಶಗಳ ನಾಯಕರನ್ನು ತಬ್ಬಿಕೊಳ್ಳುವುದಕ್ಕೂ ಏನು ವ್ಯತ್ಯಾಸವಿದೆ?
ನನ್ನ ಅಪ್ಪುಗೆಯಲ್ಲಿ ಪ್ರೀತಿ ಇತ್ತು!
••ಮೋದಿಯವರ ಅಪ್ಪುಗೆಗಳಲ್ಲಿ ಪ್ರೀತಿ ಇರುವುದಿಲ್ಲ ಅಂತ ಅದ್ಹೇಗೆ ಹೇಳುತ್ತೀರಿ?
ನೋಡಿದರೇ ಗೊತ್ತಾಗುತ್ತದೆ. ಅವರ ಅಪ್ಪುಗೆಗಳಲ್ಲಿ ಅವಕಾಶವಾದಿತನ ಇರುತ್ತದೆ. ನನಗೆ ಅಂದು ಏನೂ ತೋಚದೆ ಗೊಂದಲದಲ್ಲಿ ಇರುವ ಪ್ರಧಾನಿ ಕಂಡರು, ದೇಶವನ್ನು ನಡೆಸುವುದು ರಾಜ್ಯವನ್ನು ನಡೆಸಿದಂತಲ್ಲ ಎಂದು ಅರಿವಾದ ಪ್ರಧಾನಿ ಕಂಡರು, ತಪ್ಪಿನ ಮೇಲೆ ತಪ್ಪು ಮಾಡುವ ಪ್ರಧಾನಿ ಕಂಡರು. ಅವರು ನನ್ನ ಮೇಲೆ ಕೋಪಗೊಂಡಿದ್ದರು, ನನ್ನ ಮೇಲೆ ಕೂಗಾಡುತ್ತಿದ್ದರು… ಆಗ ನನಗೆ ಅವರ ಬಗ್ಗೆ ಸಹಾನುಭೂತಿ ಮೂಡಿತು. ನಾನು ನಿಮ್ಮನ್ನು ಅಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಾ, ಹೋಗಿ ಅಪ್ಪಿಕೊಂಡುಬಿಟ್ಟೆ. ನಾನು ನಿಮ್ಮ ಎದುರಾಳಿಯಾಗಿರಬಹುದು, ಆದರೆ ಭಾರತದ ಹಿತಾಸಕ್ತಿಯ ಪರವಿದ್ದೇನೆ, ನಾನು ನಿಮಗೆ ಸಹಾಯ ಮಾಡಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನು ನಾನು ಅವರಿಗೆ ಪರೋಕ್ಷವಾಗಿ ನೀಡಿದೆ. ಆದರೆ ಅವರು ನನ್ನನ್ನು ‘ಪಕ್ಕಕ್ಕೆ ಸರಿ’ ಅಂದುಬಿಟ್ಟರು.
••ಆ ಅಪ್ಪುಗೆಯ ನಂತರ ಮೋದಿ ನಿಮ್ಮನ್ನು ಟೀಕಿಸಿದರು. ಆಮೇಲೆ ನೀವು, ‘ಚೌಕಿದಾರ್ ಚೋರ್ ಹೈ’ ಅಂತ ಅನ್ನೋದಕ್ಕೆ ಆರಂಭಿಸಿದಿರಲ್ಲ? ಈಗ ನೋಡಿದರೆ ಅವರ ಬಗ್ಗೆ ನಿಮಗೆ ಸಹಾನುಭೂತಿ ಇದೆ ಅಂತೀರಿ.
ಅವರ ಬಗ್ಗೆ ನನಗೆ ಸಹಾನುಭೂತಿಯೇನೋ ಇದೆ. ಆದರೆ ನಾನು ಸತ್ಯವನ್ನು ಹೇಳುತ್ತೇನೆ. ಸತ್ಯವನ್ನು ಕಡೆಗಣಿಸಲು ನನಗೆ ಸಾಧ್ಯವಾಗುವುದಿಲ್ಲ. ಸತ್ಯವೇನೆಂದರೆ, ಪ್ರಧಾನಿ ಮೋದಿಯವರು ಮಿಸ್ಟರ್ ಅನಿಲ್ ಅಂಬಾನಿಯವರಿಗೆ 30,000 ಕೋಟಿ ರೂಪಾಯಿ ಕೊಟ್ಟಿದ್ದಾರೆ…ಈ ವಿಷಯ ನಿಮಗೂ ಗೊತ್ತಿದೆ, ಇಡೀ ದೇಶಕ್ಕ್ಕೂ ಗೊತ್ತಿದೆ. ಈ ಅನಿಲ್ ಅಂಬಾನಿ ಒಂದೇ ಒಂದು ವಿಮಾನವನ್ನೂ ನಿರ್ಮಿಸಿದವರಲ್ಲ! ನಾನು ಸತ್ಯವನ್ನೇ ಹೇಳುತ್ತೇನೆ-ಚೌಕಿದಾರ್ ಚೋರ್ ಹೇ. ಇದನ್ನು ಇನ್ನಷ್ಟು ನೈಸ್ ಆಗಿ ಹೇಳಲು ಸಾಧ್ಯವಿಲ್ಲ.
••ಅನಿಲ್ ಅಂಬಾನಿಗೆ 30,000 ಕೋಟಿ ರೂಪಾಯಿ ಸಿಕ್ಕಿದೆ ಅಂತ ನೀವನ್ನುತ್ತೀರಿ, ಆದರೆ ಪತ್ರಿಕಾ ವರದಿಯೊಂದು ಅವರಿಗೆ 1,000 ಕೋಟಿ ರೂ. ಕಾಂಟ್ರಾಕ್ಟ್ ಸಿಕ್ಕಿದೆ ಅನ್ನುತ್ತದಲ್ಲಾ?
ರಫೇಲ್ ಒಪ್ಪಂದದಲ್ಲಿ ಮೇಲಿನ ಅಂಕಿಸಂಖ್ಯೆಯನ್ನು ಸ್ಪಷ್ಟವಾಗಿ ರುಜುವಾತು ಮಾಡುವುಷ್ಟು ದಾಖಲೆಗಳು ಇವೆ. ಪ್ರಧಾನಿ ಮೋದಿಯವರು ‘ಪರ್ಯಾಯ ಮಾತುಕತೆ’ ನಡೆಸಿದ್ದಾರೆ ಎಂದು ಇಡೀ ರಕ್ಷಣಾ ಇಲಾಖೆಯೇ ಹೇಳುತ್ತಿದೆ ಎನ್ನುವುದನ್ನು ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ದಾಖಲೆಗಳೇ ಸಾರುತ್ತಿವೆ. ಮೋದಿ ಪ್ರತಿಯೊಂದು ನಿಯಮವನ್ನು, ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಾರೆ. ಇತ್ತ ರಕ್ಷಣಾ ಸಚಿವರು ತಮಗೆ ಹೊಸ ಕಾಂಟ್ರಾಕ್ಟ್‌ನ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಹಳೆಯ ಒಪ್ಪಂದವನ್ನೇ ಇನ್ನೂ ಕ್ಲೋಸ್ ಮಾಡಿಲ್ಲ, ಆಗಲೇ ಪ್ರಧಾನಿಗಳು ಹೊಸ ಒಪ್ಪಂದ ಆರಂಭಿಸಿಬಿಟ್ಟಿದ್ದಾರೆ! ಏನೇ ಇದ್ದರೂ ಕಟ್ಟಕಡೆಗೆ, ಈ ವಿಚಾರದಲ್ಲಿ ತನಿಖೆಯಂತೂ ಆಗುತ್ತದೆ. ಆಗ ಮೋದಿ ತಪ್ಪಿಸಿಕೊಳ್ಳಲಾರರು.
•ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಫೇಲ್ ಒಬ್ಬಂದದ ವಿಚಾರದಲ್ಲಿ ನೀವು ತನಿಖೆಗೆ ಚಾಲನೆ ನೀಡುತ್ತೀರಾ?
ನಿಸ್ಸಂಶಯವಾಗಿಯೂ! ಜೀವನದಲ್ಲಿ ಎಂದಿಗೂ ವಿಮಾನಗಳನ್ನು ತಯಾರು ಮಾಡದ ವ್ಯಕ್ತಿಗೆ ಪ್ರಪಂಚದ ಅತಿದೊಡ್ಡ ರಕ್ಷಣಾ ಒಪ್ಪಂದದ ಗುತ್ತಿಗೆಯನ್ನು ಕೊಡಲಾಗಿದೆ. ತನಿಖೆಯಾಗಲೇಬೇಕು.
••ಒಂದು ವೇಳೆ ಯುಪಿಎ ಮತ್ತು ಮೈತ್ರಿಪಕ್ಷಗಳು ಸರ್ಕಾರ ರಚಿಸಿ ಕಾಂಗ್ರೆಸ್ಸೇತರ ಪ್ರಧಾನಿಯನ್ನು ತರಲು ಬಯಸಿದರೆ, ನೀವು ಒಪ್ಪುತ್ತೀರಾ?
ಬಿಜೆಪಿಯನ್ನು ಸೋಲಿಸುವುದು ಮತ್ತು ಭಾರತದ ಸಂಸ್ಥೆಗಳನ್ನು ರಕ್ಷಿಸುವುದರ ಮೇಲಷ್ಟೇ ನನ್ನ ಗಮನವಿದೆ. ಮೊದಲು ಚುನಾವಣೆಗಳು ಮುಗಿಯಲಿ, ಫಲಿತಾಂಶ ಬರಲಿ, ಆಮೇಲೆ ನಾವೆಲ್ಲ ಚರ್ಚೆ ಮಾಡುತ್ತೇವೆ.
••ನ್ಯಾಯ್ ಯೋಜನೆಗೆ ಹಣ ಎಲ್ಲಿಂದ ತರುತ್ತೀರಿ?
ನ್ಯಾಯ್ ಯೋಜನೆಗೆ ಎರಡು ಉದ್ದೇಶಗಳಿವೆ. ಒಂದು ಬಡತನದ ಸಂಕೋಲೆಗಳನ್ನು ಮುರಿಯುವುದು ಮತ್ತು ಜಿಎಸ್‌ಟಿ, ನೋಟ್ಬಂದಿಯಿಂದ ನಿಂತುಹೋಗಿರುವ ದೇಶದ ಆರ್ಥಿಕತೆಗೆ ಪುನರುಜ್ಜೀವ ನೀಡುವುದು. ನಮ್ಮ ವ್ಯವಸ್ಥೆಯಲ್ಲಿ ತಂಡದಲ್ಲಿ ಅದ್ಭುತ ಅರ್ಥಶಾಸ್ತ್ರಜ್ಞರಿದ್ದಾರೆ, ನ್ಯಾಯ್ ಯೋಜನೆಯ ವಿಚಾರದಲ್ಲಿ ಅನೇಕ ತಿಂಗಳು ಅವರು ಕೆಲಸ ಮಾಡಿದ್ದಾರೆ. ಒಂದು ವಿಷಯದಲ್ಲಿ ಗ್ಯಾರಂಟಿ ಕೊಡುತ್ತೇನೆ- ಈ ಯೋಜನೆಗೆ ಮಧ್ಯಮವರ್ಗದಿಂದಂತೂ ಹಣ ಪಡೆಯುವುದಿಲ್ಲ. ನಿಮ್ಮ ತೆರಿಗೆಯಿಂದ ಒಂದೇ ಒಂದು ರೂಪಾಯಿಯನ್ನೂ ಈ ಯೋಜನೆಗೆ ಬಳಸುವುದಿಲ್ಲ. ನಾವು ಆಗಲೇ ಲೆಕ್ಕಾಚಾರ ಮಾಡಿದ್ದೇವೆ. ಪ್ರಸಕ್ತ ಆರ್ಥಿಕ ಹರಿವಿನಿಂದಲೇ ಇದಕ್ಕೆ ಹಣ ಬರುತ್ತದೆ. ಸರ್ಕಾರಿ ಸ್ಕೀಮುಗಳಲ್ಲಿನ ಅದಕ್ಷತೆಯನ್ನು ತಗ್ಗಿಸುವುದರಿಂದ, ಸರ್ಕಾರಿ ಸ್ವತ್ತುಗಳ ಉತ್ತಮ ಮಾನಿಟೈಸೇಷನ್‌ನಿಂದ ಈ ಹಣ ತರುತ್ತೇವೆ.
••ನರೇಂದ್ರ ಮೋದಿಯವರಲ್ಲಿನ ಯಾವುದಾದರೂ ಗುಣವನ್ನು ನೀವು ಕಲಿಯಲು ಬಯಸುತ್ತೀರಾ, ಅದೇನು?
ಒಂದೇ ಸಮಯದಲ್ಲಿ ವಿವಿಧ ಜನರಿಗೆ ವಿವಿಧ ಸಂದೇಶಗಳನ್ನು ತಲುಪಿಸುವುದು ಹೇಗೆ ಎನ್ನುವುದನ್ನು! ಅವರು ಒಂದೇ ಸಮಯದಲ್ಲಿ ನಿಮಗೆ ಒಂದು ಅರ್ಥ ಸಿಗುವಂತೆ ಮಾತನಾಡಿ, ಇನ್ನೊಬ್ಬರಿಗೆ ತದ್ವಿರುದ್ಧ ಅರ್ಥದ ಸಂದೇಶ ಹೋಗಿರುತ್ತದೆ! ಆದರೆ ಈ ಗುಣದಲ್ಲಿ ಸ್ವಲ್ಪ ವಂಚನೆ ಇರುತ್ತದೆ. ನನಗೆ ಈ ರೀತಿ ನಾನು ಮಾಡುವುದಿಲ್ಲ, ನಾನು ಅನ್‌ಕಂಫರ್ಟೆಬಲ್ ಆಗುತ್ತೇನೆ. ಈ ಕೌಶಲವಂತೂ ಮೋದಿಯವರಲ್ಲಿದೆ.
••ಅಮೇಠಿಯಲ್ಲಿ ಸೋಲುತ್ತೇನೆ ಎನ್ನುವ ಕಾರಣಕ್ಕಾಗಿ ನೀವು ವಯನಾಡ್‌ನಲ್ಲಿ ಸ್ಪರ್ಧಿಸಿದಿರಾ?
ಖಂಡಿತ ಇಲ್ಲ,. ಅಮೇಠಿ ನನ್ನ ಕುಟುಂಬವಿದ್ದಂತೆ. ನಾನು ತಮಿಳುನಾಡಿಗೆ ಹೋದಾಗ, ಅಲ್ಲಿನ ಜನರೆಲ್ಲ ‘ನಮಗೆ ದೇಶದಲ್ಲಿ ಸಮಾನ ಹಕ್ಕು ಇದೆಯೇ?’ ಎಂದು ಪ್ರಶ್ನಿಸಿದಂತೆ ಭಾಸವಾಯಿತು. ಇಡೀ ದಕ್ಷಿಣ ಭಾರತದ ತುಂಬೆಲ್ಲ ಈ ಭಾವನೆ ಇದೆ. ಇದು ನನಗೆ ಅರ್ಥವಾಗುತ್ತಿದ್ದಂತೆಯೇ, ದಕ್ಷಿಣದಿಂದ ಸ್ಪರ್ಧಿಸಲು ನಿರ್ಧರಿಸಿದೆ.
••ತಮಗೆ ಮಾವಿನ ಹಣ್ಣು ಇಷ್ಟ ಎಂದು ಅಕ್ಷಯ್ ಕುಮಾರ್‌ಗೆ ಹೇಳಿದರು ಮೋದಿ. ನಿಮಗೆ ಯಾವ ಹಣ್ಣು ಇಷ್ಟ?
ಒಂದು ಹಣ್ಣಿನ ಸ್ವಾದವನ್ನು ನಮ್ಮ ಮನಸ್ಸು ಸೃಷ್ಟಿಸುತ್ತದೆ. ಯಾವುದೇ ಹಣ್ಣನ್ನು ಬೇಕಾದರೂ ನೀವು ಇಷ್ಟಪಡಬಹುದು/ ಇಷ್ಟಪಡದಿರಬಹುದು. ಇಷ್ಟ-ಇಷ್ಟವಿಲ್ಲ ಎನ್ನುವುದೆಲ್ಲ ನಾವೇ ಮನಸ್ಸಿನಲ್ಲಿ ನಿರ್ಮಿಸಿಕೊಳ್ಳುತ್ತೇವೆ. ನನಗೆ ಮಾವಿನ ಹಣ್ಣು ಇಷ್ಟ, ಬಾಳೆ ಹಣ್ಣು ಇಷ್ಟ. ಮೊದಲೆಲ್ಲ ಕ್ಯಾರೆಟ್ ಇಷ್ಟವಿರಲಿಲ್ಲ, ಈಗ ಕ್ಯಾರೆಟ್ ಇಷ್ಟ. ನನಗೆ ಶತಾವರಿ ಅಂದರೆ ಚೂರೂ ಇಷ್ಟವೇ ಇರಲಿಲ್ಲ, ಈಗ ಇಷ್ಟ.
ನಾಮ್‌ಧಾರ್ ಅನ್ನುತ್ತಾರಲ್ಲ?ನೋಡಿ, ನನ್ನ ಕುಟುಂಬದವರು ರಾಜಕೀಯದಲ್ಲಿದ್ದಾರೆ ಎನ್ನುವುದು ಸತ್ಯ. ಆದರೆ ಅವರ ಅನುಭವವೇ ನನ್ನ ಅನುಭವ ಅಲ್ಲವಲ್ಲ. ನನ್ನ ಅನುಭವವು ಅಗಾಧ ಹೋರಾಟಗಳು ಮತ್ತು ಹಿಂಸಾಚಾರಗಳನ್ನು ಒಳಗೊಂಡಿದೆ. ನನ್ನ ಅಜ್ಜಿ ಮತ್ತು ಅಪ್ಪ ಕೊಲೆಯಾದದ್ದನ್ನು ನಾನು ಕಂಡಿದ್ದೇನೆ, ಚುನಾವಣೆಗಳಲ್ಲಿ ಸೋಲು ಗೆಲುವನ್ನು ನೋಡಿದ್ದೇನೆ, ನನ್ನ ಈ ಎಲ್ಲಾ ಅನುಭವಗಳನ್ನು ಒಂದೇ ಪದದಲ್ಲಿ ಅದ್ಹೇಗೆ ಕಟ್ಟಿಕೊಡಬಲ್ಲಿರಿ? ನಾನು ಯಾರು ಎನ್ನುವುದನ್ನು ಅರ್ಥಮಾಡಿಕೊಳ್ಳಿ. ನನ್ನ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಿ, ಆಮೇಲೆ ನೀವೇ ತೀರ್ಮಾನ ನೀಡಿ. (ಕೃಪೆ: ಇಂಡಿಯಾ ಟುಡೆ)