ಬೆಂಗಳೂರು: ಕಳೆದ ವರ್ಷ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನಾವು ಕಾಂಗ್ರೆಸ್‌ಗೆ ಖರೀದಿಯಾಗಿಲ್ಲ ಎಂದು ಬಂಡಾಯ ಶಾಸಕರು ಹೇಳಿದ್ದಾರೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂತರ ಮಾತನಾಡಿದ ಚಲುವರಾಯಸ್ವಾಮಿ, ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನಮ್ಮನ್ನು ಬಿಟ್ಟು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದಾಗಿ ಸವಾಲು ಹಾಕಿದ್ದರು.
ಹೀಗಾಗಿ ಅವರ ವಿರುದ್ಧ ನಾವು ಮತ ಹಾಕಿದ್ದೇವೆ. ನಾವ್ಯಾರು ಹಣಕ್ಕಾಗಿ ಯಾರ ಮನೆಯ ಮುಂದೆ ಹೋಗಿ ನಿಂತಿರಲಿಲ್ಲ ಎಂದು ಹೇಳಿದ್ದಾರೆ. ರಾಜ್ಯಸಭೆ ಚುನಾವಣೆ ನಂತರ ನಮ್ಮನ್ನು ಪಕ್ಷದಿಂದ ವಜಾ ಮಾಡಿದ್ದರೆ, ನಾವು ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ದರಾಗಿದ್ದೆವು.ಆದರೆ, ಅವರು ಅಮಾನತು ಮಾಡಿ, ಸ್ಪೀಕರ್‌ಗೆ ದೂರು ನೀಡಿದರು. ಆ ತನಿಖೆ ಬಂದ ನಂತರ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡುತ್ತಿದ್ದೇವೆ.
ಸೂಟ್‌ಕೇಸ್ ವ್ಯವಹಾರ ಮಾಡಲು ಜೆಡಿಎಸ್‌ನಲ್ಲಿ ನಾವ್ಯಾರು ರಾಜ್ಯಾಧ್ಯಕ್ಷರಾಗಿರಲಿಲ್ಲ. ಆ ಪಕ್ಷದಲ್ಲಿ ಯಾವುದೇ ತೀರ್ಮಾನವಾಗಬೇಕಿದ್ದರೂ, ಕುಮಾರಸ್ವಾಮಿ ಅಥವಾ ದೇವೇಗೌಡರೇ ಅಂತಿಮವಾಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಹೀಗಾಗಿ ಸೂಟ್‌ಕೇಸ್ ಯಾರು ತೆಗೆದುಕೊಳ್ಳುತ್ತಿದ್ದರು ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಚಲುವರಾಯಸ್ವಾಮಿ ವಾಗ್ಧಾಳಿ ನಡೆಸಿದರು.
ಸೂಟಕೇಸ್ ಪಡೆಯುವ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ ಹೇಳಿಕೆ ಸರಿಯಿಲ್ಲ ಎಂದು ದೇವೇಗೌಡರೇ ಒಪ್ಪಿಕೊಂಡು ಕುಮಾರಸ್ವಾಮಿ ಕ್ಷಮೆ ಕೇಳುವಂತೆ ಸೂಚಿಸಿದ್ದರು. ಅದೇ ಸಾಕಲ್ಲವೇ ಯಾರು ಸೂಟ್‌ಕೇಸ ಪಡೆಯುತ್ತಿದ್ದರು ಎಂದು ಜನರಿಗೆ ತಿಳಿಯಲು ಎಂದರು. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಟಿಕೆಟ್ ನೀಡಿ ಎಂದು ಅವರ ಮನೆ ಬಾಗಿಲಿಗೆ ಹೋಗುವುದಿಲ್ಲ. ನಾವು ಏಳೂ ಜನರು ಈಗ ಯಾವ ಪಕ್ಷಕ್ಕೆ ಹೋಗಬೇಕೆಂದು ಸ್ಪಷ್ಟವಾಗಿ ನಿರ್ಧರಿಸಿದ್ದೇವೆ.
ಕಾಂಗ್ರೆಸ್ ಹೈ ಕಮಾಂಡ್ ಆಗಲಿ ಅಥವಾ ಮುಖ್ಯಮಂತ್ರಿಯಿಂದಾಗಲಿ ಯಾವುದೇ ಗೊಂದಲವಿಲ್ಲ. ಆ ಪಕ್ಷದಿಂದ ಅಧಿಕೃತ ಸೂಚನೆ ಬರುವವರೆಗೂ ನಾವು ಕಾಯುತ್ತಿದ್ದೇವೆ. ಮುಂದಿನ ಬಾರಿ ನಮಗೆಲ್ಲರಿಗೂ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವುದರ ಬಗ್ಗೆ ನಮಗಾರಿಗೂ ಆತಂಕ ಇಲ್ಲ ಎಂದರು. ಮುಂದಿನ ಚುನಾವಣೆ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದರೆ, ಜೆಡಿಎಸ್ ಜೊತೆ ಕೈ ಜೋಡಿಸುವ ತೀರ್ಮಾನವನ್ನು ಹೈಕಮಾಂಡ್ ನಾಯಕರು ತೆಗೆದುಕೊಳ್ಳುತ್ತಾರೆ.
ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಸಮ್ಮಿಶ್ರ ಸರ್ಕಾರ ಬರುವುದರಿಂದಲೂ ನಮ್ಮ ರಾಜಕೀಯ ಭವಿಷ್ಯಕ್ಕೆ ಯಾವುದೇ ತೊಂದರೆಯಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನಂತರ ಬಂಡಾಯ ಶಾಸಕರು ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಅವರ ಮನೆಗೆ ತೆರಳಿದರು.
ಐಟಿ ದಾಳಿ ರಾಜಕೀಯ ಪ್ರೇರಿತ
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವ ಸಂದರ್ಭ ನೋಡಿದರೆ, ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಇಡಿ ದೇಶವೇ ಹೇಳುತ್ತಿದೆ. ಡಿ.ಕೆ. ಶಿವಕುಮಾರ್ ಪ್ರಭಾವ ನೋಡಿ ಅವರ ಶಕ್ತಿ ಕುಂದಿಸಲು ಈ ದಾಳಿ ನಡೆಸಲಾಗಿದೆ. ಇದಕ್ಕೆಲ್ಲಾ ಡಿ.ಕೆ.ಶಿ ಹೆದರುವುದಿಲ್ಲ. ಐಟಿ ಇಲಾಖೆಗೆ ಎಲ್ಲ ದಾಖಲೆಗಳನ್ನು ಕೊಟ್ಟು ಅವರು ಹೊರ ಬರುತ್ತಾರೆ. ಈ ದಾಳಿಯಿಂದ ಅವರು ಮತ್ತಷ್ಟು ಬಲಿಷ್ಠರಾಗಿ ಹೊರ ಬರುತ್ತಾರೆ.