ಬೆಂಗಳೂರು: ಕೆಲ ವರ್ಷಗಳಿಂದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದುವ ಮೂಲಕ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿರುವ ಬೆಂಗಳೂರು ನಗರ ಪೊಲೀಸರು, ಮತ್ತೂಂದು ಸಾಮಾಜಿಕ ವೇದಿಕೆ ‘ಶೇರ್‌ಚಾಟ್’ನಲ್ಲೂ ಖಾತೆ ತೆರೆದು ಇನ್ನಷ್ಟು ಜನಸ್ನೇಹಿ ಆಗಲು ಮುಂದಾಗಿದ್ದಾರೆ.
ಈ ಮೂಲಕ ಸಾರ್ವಜನಿಕರು ತಮ್ಮ ದೂರುಗಳು ಅಥವಾ ನಗರದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಯನ್ನು ಸಂದೇಶ, ವಿಡಿಯೋ, ಆಡಿಯೋ ಚಿತ್ರ ಅಥವಾ ಆ ಅಪ್ಲಿಕೇಷನ್‌ನಲ್ಲಿ ಲಭ್ಯವಿರುವ ರೂಪದಲ್ಲೇ ನೇರವಾಗಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ಕನ್ನಡದಲ್ಲಿ ಸಲ್ಲಿಸಬಹುದು. ದೂರು ಸ್ವೀಕರಿಸುವ ಸಿಬ್ಬಂದಿ ಸಹ ಕನ್ನಡದಲ್ಲೇ ಸ್ಪಂದಿಸಲಿದ್ದಾರೆ ಎಂದರು.
ಕಾರ್ಯಹೇಗೆ?: ಶೇರ್‌ಚಾಟ್ ಆ್ಯಪ್ ಅನ್ನು ಪ್ಲೇರ್‌ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿ, ಅಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿ ಖಾತೆ ತೆರೆಯಬೇಕು. ನಂತರ ‘@blrcitypolice# ಬೆಂಗಳೂರು ನಗರ ಪೊಲೀಸ್’ ಖಾತೆಯನ್ನು ಫಾಲೋ ಮಾಡಬೇಕು. ಬಳಿಕ ವೈಯಕ್ತಿಕ ಹಾಗೂ ಸಾರ್ವಜನಿಕವಾಗಿಯೂ ದೂರು ಅಥವಾ ಸಲಹೆ, ಸೂಚನೆಗಳನ್ನು ನೀಡಬಹುದು.
ಪ್ರಮುಖವಾಗಿ ಸಾರ್ವಜನಿಕರು ತಮ್ಮ ಕಣ್ಣೆದುರು ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡಿ, ಸ್ಥಳ ನಮೂದಿಸಿ ‘ಬೆಂಗಳೂರು ನಗರ ಪೊಲೀಸ್’ ಖಾತೆಗೆ ಟ್ಯಾಗ್ ಮಾಡಬೇಕು. ಇದರ ಆಧಾರದಲ್ಲಿ ಖಾತೆ ನಿರ್ವಹಿಸುವ ಸಿಬ್ಬಂದಿ ಕೂಡಲೇ ದೂರುದಾರರಿಗೆ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಲಿದ್ದಾರೆ. ವೈಯಕ್ತಿಕವಾಗಿ ದೂರು ಅಥವಾ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡುವ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಆಲೋಕ್ ಕುಮಾರ್ ಹೇಳಿದರು.
Advertisement
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಶೇರ್‌ಚಾಟ್ ಖಾತೆಗೆ ಚಾಲನೆ ನೀಡಿದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ನಗರದ ಜನತೆ ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್, ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸ್‌ಆ್ಯಪ್‌ಗ್ಳ ಮೂಲಕ ನೇರವಾಗಿ ದೂರು ನೀಡುತ್ತಿದ್ದರು. ಆದರೆ, ರಾಜ್ಯದ ಆಡಳಿತ ಭಾಷೆ ಕನ್ನಡದಲ್ಲಿ ವ್ಯವಹರಿಸಲು ಬಹುತೇಕರಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲೇ ಆಯ್ಕೆಗಳನ್ನು ಒದಗಿಸುವ ‘ಶೇರ್‌ಚಾಟ್’ನಲ್ಲಿ (@blrcitypolice# ಬೆಂಗಳೂರು ನಗರ ಪೊಲೀಸ್) ಖಾತೆ ತೆರೆದು ನಗರದ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದೇವೆ ಎಂದರು.
Related Articles
100 ಡಯಲ್ ಮಾಡಿ ಠಾಣಾಧಿಕಾರಿ ಭೇಟಿಗೆ ಸಮಯ ನಿಗದಿ ಮಾಡಿ
‘ನಿಮ್ಮ ಸೇವೆ ಮತ್ತು ರಕ್ಷಣೆ ನಮ್ಮ ಹೊಣೆ’ ಎಂಬ ಧ್ಯೇಯವಾಕ್ಯದೊಂದಿಗೆ ನಾಗರಿಕ ಸಬಲೀಕರಣ ಯೋಜನೆ ಜಾರಿಗೊಳಿಸುತ್ತಿರುವ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ನಮ್ಮ-100ಕ್ಕೆ ಕರೆ ಮಾಡಿ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್ ಅಥವಾ ಹಿರಿಯ ಸಿಬ್ಬಂದಿ ಭೇಟಿಗೆ ಸಮಯ ನಿಗದಿ ಮಾಡುವ ಸೌಲಭ್ಯ ಕಲ್ಪಿಸಿದ್ದಾರೆ. ಈ ಮೂಲಕ ಅಹವಾಲು ಸಲ್ಲಿಕೆಗೆ ಠಾಣಾಧಿಕಾರಿಗಳನ್ನು ಕಾಣಲು ನಾಗರಿಕರು ಠಾಣೆಗಳಲ್ಲಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಿದಂತಾಗಿದೆ. ಅಲ್ಲದೆ, ತಮ್ಮ ದೂರುಗಳ ಇತ್ಯರ್ಥ ಕುರಿತು ಫೀಡ್‌ಬ್ಯಾಕ್ ನೀಡಲು ಸಾರ್ವಜನಿರಕರಿಗೆ ಆಯುಕ್ತರು ಸೂಚಿಸಿದ್ದಾರೆ.
ಏನು ಮಾಡಬೇಕು?: ನಮ್ಮ 100ಗೆ ಕರೆ ಮಾಡಿ ಯಾವ ಠಾಣಾಧಿಕಾರಿಯನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿದರೆ, ಕರೆ ಸ್ವೀಕರಿಸುವ ಸಿಬ್ಬಂದಿ ಕೂಡಲೇ ನಿರ್ದಿಷ್ಟ ಠಾಣಾಧಿಕಾರಿ ಜತೆ ಮಾತನಾಡಿ, ಯಾವ ಸಮಯಕ್ಕೆ ಬರಬೇಕು ಎಂದು ದೂರುದಾರಿಗೆ ತಿಳಿಸುತ್ತಾರೆ. ಸಮಯ ನಿಗದಿ ಮಾಡಿ ಒಂದೆರಡು ಬಾರಿ ಸಿಗದಿದ್ದರೆ ಬಳಿಕ ಎಸಿಪಿ, ಡಿಸಿಪಿ ಮಾತ್ರವಲ್ಲದೆ, ಹೆಚ್ಚುವರಿ ಪೊಲೀಸ್ ಆಯುಕ್ತರು ಅಥವಾ ನೇರವಾಗಿ ಪೊಲೀಸ್ ಆಯುಕ್ತರನ್ನೇ ಭೇಟಿಯಾಗಿ ಠಾಣಾಧಿಕಾರಿ ವಿರುದ್ಧ ದೂರು ನೀಡಬಹುದು.
Advertisement