ಚಿಕ್ಕಮಗಳೂರು: ಮುಲ್ಲಾ ನಮಾಜ್ ಮಾಡುವುದಾದರೆ ಯತಿಯಾಗಿರುವ ನನಗೂ ಕೂಗಲು ಅವಕಾಶ ಮಾಡಿಕೊಡಿ. ಅವರು ಅಲ್ಲಾಹುನನ್ನು ಕೂಗುವುದಾದರೆ ನಾವು ರಾಮನನ್ನು ಕೂಗುತ್ತೇವೆ. ಮುಸ್ಲಿಮರಿಗೆ ಒಂದು ನ್ಯಾಯ, ಹಿಂದೂಗಳಿಗೆ ಒಂದು ನ್ಯಾಯ ಎಷ್ಟು ಸರಿ ಎಂದು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಪ್ರಶ್ನಿಸಿದರು.
ಇದನ್ನೂ ಓದಿ:ದೇವಸ್ಥಾನ, ಮಸೀದಿಗಳಲ್ಲಿ ಧ್ವನಿ ವರ್ಧಕ ಹಾಕುವುದರಿಂದ ಯಾರಿಗೆ ತೊಂದರೆ ಆಗಿದೆ?: ಸಿದ್ದರಾಮಯ್ಯ
ಸಖರಾಯಪಟ್ಟಣದಲ್ಲಿ ಮೈಕ್ ಬ್ಯಾನ್ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶ್ರೀಗಳು, ನಮ್ಮ ಮಠದಲ್ಲಿ ಕಾಳಿ ಕೂಗು ಕೂಗುತ್ತಿದ್ದೇವೆ. ಮಸೀದಿಗಳಲ್ಲಿ ಐದು ಬಾರಿ ಕೂಗುವುದಕ್ಕೆ ನ್ಯಾಯಾಲಯ ನಿಷೇಧ ಹೇರಿದೆ.
ಆದರೂ ಅದನ್ನು ತಪ್ಪಿಸಲು ಆಗುತ್ತಿಲ್ಲ. ಹೀಗಾಗಿ ಈ ನೆಲದ ಕಾನೂನಿನ ಶಕ್ತಿ ಎಷ್ಟು ಎಂಬುದನ್ನು ತೋರಿಸಿಕೊಡುವ ದೃಷ್ಟಿಯಿಂದ ನಾವು ಕಾರ್ಯನಿರ್ವಹಿಸಬೇಕಿದೆ. ಈ ಬಗ್ಗೆ ಎಲ್ಲ ಹಿಂದೂ ಸಂಘಟಕರು ಒಂದಾಗಿ ಅಭಿಯಾನ ಆರಂಭಿಸಬೇಕು. ಜತೆಗೆ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಂಡು ಮಸೀದಿಗಳಿಂದ ಮೈಕ್ ತೆಗೆಯಲು ಮುಂದಾಗಬೇಕು ಎಂದರು.
ಅಲಾರಾಂ ಇಟ್ಟು ಎದ್ದು ನಮಾಜ್ ಮಾಡಲಿ: ರವಿ
ಬೆಂಗಳೂರು: ಮುಸ್ಲಿಮರು ಆಜಾನ್ ಕೂಗುವುದು ಪ್ರಾರ್ಥನೆಗೆ ಬನ್ನಿ ಎಂದು ಕರೆಯಲು. ಈಗ ತಂತ್ರಜ್ಞಾನ ಮುಂದುವರಿದಿದೆ. ಅಲಾರಾಂ ಇಟ್ಟುಕೊಂಡು ಎದ್ದು ಬಂದು ನಮಾಜ್ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ.ರವಿ ಹೇಳಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಮೊಹಮದ್ ಪೈಗಂಬರ್ ಇದ್ದಾಗ ದ್ವನಿವರ್ಧಕ ಇರಲಿಲ್ಲ, ಕುರಾನ್ ಬರೆದಾಗ ಧ್ವನಿವರ್ಧಕ ಇರಲಿಲ್ಲ. ಇದನ್ನು ವಾದ ಮಾಡುವ ಕೆಲ ನಾಯಕರು ನಮ್ಮಲ್ಲಿದ್ದಾರೆ. ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿದೆಯೋ ಅದರಂತೆ ಎಲ್ಲರೂ ಪಾಲಿಸಬೇಕು ಎಂದರು.