ಮಹಾನಗರ: ಪೂರ್ವ ಲಡಾಖ್‌ನ ಗಾಲ್ವಾನ್ ಪ್ರದೇಶದಲ್ಲಿ ಚೀನ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ದ.ಕ. ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕದ್ರಿ ಸರ್ಕಿಟ್‌ಹೌಸ್ ಬಳಿ ಇರುವ ಹುತಾತ್ಮರ ಸ್ಮಾರಕದಲ್ಲಿ ಬುಧವಾರ ನಮನ ಸಲ್ಲಿಸಲಾಯಿತು.
ಇದೇ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಭಾರತದ ಗಡಿ ಕಾಪಾಡುವ ಎಲ್ಲ ಯೋಧರ ಜತೆ ನಾವೆಲ್ಲರೂ ಒಂದಾಗಿದ್ದೇವೆ. ಭಾರತೀಯರು ಸ್ನೇಹ ಜೀವಿಗಳು. ಎಂದಿಗೂ ಯುದ್ಧ ಬಯಸಿದವರಲ್ಲ. ಆದರೆ, ಚೀನ ಹಿಂಬಾಗಿಲಿನಿಂದ ಬಂದು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದೆ.
ನಾವು ಭಾರತದ ಪ್ರಧಾನಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ. ಪ್ರಧಾನಿ ಮೌನ ವಹಿಸದೆ ಏಟಿಗೆ ಎದುರೇಟು ನೀಡುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.ಚೀನೀ ಸೈನಿಕರಿಗಿಂತ ಭಾರತದ ಸೈನ್ಯ ಬಲಿಷ್ಠವಾಗಿದೆ. ಮುಂಬರುವ ದಿನಗಳಲ್ಲಿ ಭಾರತಕ್ಕೆ ಆಮದಾಗುವ ಎಲ್ಲ ಚೀನಿ ಸಾಮಗ್ರಿಗಳನ್ನು ಭಾರತೀಯರು ಬಹಿಷ್ಕರಿಸಬೇಕು.
ಪಕ್ಷ ಬೇಧ ಮರೆತು ನಮ್ಮ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಚೀನೀ ವಸ್ತು ಬಹಿಷ್ಕರಿಸಿ ಎಂಬ ಭಿತ್ತಿಚಿತ್ರ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ಎ.ಸಿ. ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ಅನಿಲ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ವಿಶ್ವಾಸಕುಮಾರ್ ದಾಸ್, ಪದ್ಮನಾಭ ಅಮೀನ್, ಪ್ರಕಾಶ್ ಸಾಲ್ಯಾನ್, ಸುಹೇಲ ಕಂದಕ್, ಸುಹಾನ್ ಆಳ್ವ, ಗಿರೀಶ್ ಆಳ್ವ, ಪ್ರಸಾದ್ ಮಲ್ಲಿ, ಲಾರೆನ್ಸ್ ಮತ್ತಿತರರು ಇದ್ದರು.