ದಾವಣಗೆರೆ: ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ನಗರಾಭಿವೃದ್ಧಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ ಜನರು, ಜನಪ್ರತಿನಿಧಿಗಳು ಸಾಕಷ್ಟು ಪ್ರೀತಿ, ವಿಶ್ವಾಸ ತೋರುತ್ತಿರುವಾಗ ನನಗೆ ಬೇರೆ ಜಿಲ್ಲೆಯ ಉಸ್ತುವಾರಿ ಅಗತ್ಯತೆಯೇ ಇಲ್ಲ. ನಾನು ಬೇರೆ ಜಿಲ್ಲೆಯನ್ನು ಕೇಳಿಯೂ ಇಲ್ಲ ಎಂದರು.
ಸಚಿವ ಸಂಪುಟ ಪುನಾರಚನೆ, ವಿಸ್ತರಣೆಗಾಗಿ ವಿನೂತನ ಪ್ರಯತ್ನ, ಪ್ರಯೋಗ ನಡೆಸಲಾಗುವುದು ಎಂದು ಹೇಳಲಾಗುತ್ತದೆ. ಯಾವ ಮಾನದಂಡದ ಆಧಾರದಲ್ಲಿ ವಿನೂತನ ಪ್ರಯೋಗ ಮಾಡಲಾಗುತ್ತದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ, ಅಭಿವೃದ್ದಿ ಕಾರ್ಯಗಳಿಗೆ ಸದಾ ಬೆಂಬಲವಾಗಿ ಇರುತ್ತೇವೆ. ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ನನಗೆ ರಾಜಕೀಯ ಬದ್ಧತೆಯಿದೆ, ಬೇರೆ ಪಕ್ಷಕ್ಕೆ ಹೋಗಲ್ಲ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ
ಆರು ಸಾವಿರ ಕೋಟಿಗೂ ಅಧಿಕ ಅನುದಾನ ಬಳಸಿಕೊಂಡು ಬೆಂಗಳೂರನ್ನು ವಿಶ್ವದಲ್ಲೇ ಅತ್ಯುತ್ತಮ ನಗರವನ್ನಾಗಿ ನಿರ್ಮಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಣಕಾಸು ಸಚಿವರೂ ಆಗಿದ್ದಾರೆ. ಹಾಗಾಗಿ ಅವರೇ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿದ್ದಾರೆ. ನಾವು ಯಾರೂ ಸಹ ಬೆಂಗಳೂರು ಉಸ್ತುವಾರಿ ಕೇಳಿಲ್ಲ. ಆ ಬಗ್ಗೆ ನಮಗೆ ಯಾರಿಗೂ ಯಾವುದೇ ಅಸಮಾಧಾನ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಗಿ ಖರೀದಿ ಮಿತಿ ಹೆಚ್ಚಿಸುವ ಬಗ್ಗೆ ಕೇಂದ್ರದ ಕೃಷಿ ಸಚಿವರೊಂದಿಗೆ ಸಂಪರ್ಕ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.