Advertisement
ಈ ಮಾತುಗಳನ್ನು ಹೇಳುವಾಗ ಆ ಅಜ್ಜನ ಕಣ್ಣಲ್ಲಿ ಯುದ್ಧ ಗೆದ್ದ ಸಂಭ್ರಮವಿತ್ತು. ಹಿಂದೆ ಅನುಭವಿಸಿದ ಸಂಕಷ್ಟದ ನೋವಿತ್ತು. ನೋವು ಮೆಟ್ಟಿ ನಿಂತ ಸಾರ್ಥಕ ಶ್ರಮದ ಸಂಭ್ರಮ ಪ್ರತಿ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ದೇಶದಲ್ಲೇ ಅತ್ಯಂತ ಹೆಚ್ಚು ಬರಪೀಡಿತ ಹಾಗೂ ಮರುಭೂಮಿ ನಾಡು ಎಂದೇ ಪರಿಗಣಿಸುವ ರಾಜಸ್ಥಾನದ ಅಲ್ವಾರ ಜಿಲ್ಲೆಯ ಮಂಡಲವಾಸ್ ಗ್ರಾಮದ ಹಿರಿಯ ಜಗದೀಶ ಮೀನಾ ಅವರ ಹೆಮ್ಮೆಯ ನುಡಿಗಳಿವು.
Related Articles
Advertisement
ಡಾ| ರಾಜೇಂದ್ರ ಸಿಂಗ್ ಅವರು ತೋರಿದ ಜಾಗೃತಿ ಹಾಗೂ ಬದುಕಿನ ಭರವಸೆಯಿಂದಾಗಿ ಗ್ರಾಮಸ್ಥರು ಒಂದಾಗಿ ಜಲಸಂರಕ್ಷಣೆಗೆ ಮುಂದಾದೆವು. ಬಗಾನಿ ನದಿ ನೀರು ಹಿಡಿದಿಡಲು ಬಾಂದಾರ ನಿರ್ಮಾಣ ಕಾಯಕಕ್ಕಿಳಿದೆವು. ತರುಣ ಭಾರತ ಸಂಘದ ಪ್ರೋತ್ಸಾಹ, ಯುವಕರ ಉತ್ಸಾಹದಿಂದಾಗಿ ಸರ್ಕಾರದ ಯಾವುದೇ ನೆರವಿಲ್ಲದೆ, ಗ್ರಾಮಸ್ಥರ ದೇಣಿಗೆ, ಶ್ರಮದಾನದಿಂದಾಗಿ ನೋಡ ನೋಡುತ್ತಿದ್ದಂತೆಯೇ ಬಾಂದಾರ ನಿರ್ಮಾಣಗೊಂಡಿತು. ಇದನ್ನೇ ನಾವು ಬೊಮಿಯಾಜಿ ಬಾಂದಾರ ಎಂದು ಕರೆಯುತ್ತಿದ್ದೇವೆ.
13 ವರ್ಷಗಳಿಂದ ನೀರು ಬತ್ತಿಲ್ಲ: ಬಗಾನಿ ನದಿಗೆ ಬಾಂದಾರ ನಿರ್ಮಾಣ ಕಾರ್ಯಕ್ಕಿಳಿದ ನಾವು ಹಂತ ಹಂತವಾಗಿ 1998ರಲ್ಲಿ ಪೂರ್ಣ ಪ್ರಮಾಣದಲ್ಲಿ ಕೈಗೊಂಡೆವು. ಬಿದ್ದ ನೀರು ತಕ್ಷಣಕ್ಕೆ ಎದ್ದು ಹೋಗದಂತೆ ತಡೆದವು. ನೀವು ನಂಬುತ್ತೀರೋ ಇಲ್ಲವೋ ಕಳೆದ 13 ವರ್ಷಗಳಿಂದ ಈ ಬಾಂದಾರದಲ್ಲಿ ನೀರು ಬತ್ತಿಯೇ ಇಲ್ಲ. ಜನವರಿ ಕೊನೆ ವಾರದಲ್ಲೂ ಸುಮಾರು 35 ಅಡಿಯಷ್ಟು ನೀರು ನಿಂತಿದೆ. ಸುತ್ತಮುತ್ತಲ ಬಾವಿಗಳು ತುಂಬಿವೆ. ಅಂತರ್ಜಲ ಮಟ್ಟ ಉತ್ತಮವಾಗಿಯೇ ಇದೆ.
ನಾವು ಕೇವಲ ಬಾಂದಾರ ನಿರ್ಮಾಣ ಮಾಡಿ ನೀರು ನಿಲ್ಲಿಸಿ ಕೈ ತೊಳೆದುಕೊಳ್ಳಲಿಲ್ಲ. ಸುಮಾರು 5 ಕಿಮೀ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ ಆಯಾ ಗ್ರಾಮಸ್ಥರು ಸೇರಿ ಅರಣ್ಯ ಬೆಳೆಸುವ ಕಾರ್ಯ ಮಾಡಿದೆವು. ನಾವು ನೆಟ್ಟ ಸಸಿಗಳು ಇಂದು ಮುಗಿಲೆತ್ತರದ ಮರಗಳಾಗಿ ಬೆಳೆದು ನಿಂತಿವೆ. ಅನೇಕ ವನ್ಯ ಪ್ರಾಣಿಗಳಿಗೂ ಆಶ್ರಯವಾಗಿವೆ.
ಹೊಲಗಳಲ್ಲಿ ಕೇವಲ ತಂಬಾಕು ಅಷ್ಟೇ ಅಲ್ಲದೆ ಗೋಧಿ, ಸಾಸಿವೆ, ಜೋಳ, ಶೇಂಗಾ ಇತ್ಯಾದಿ ಬೆಳೆಗಳು ನಳನಳಿಸುತ್ತಿವೆ. ನೀರು ತರಲು ಕಿಮೀಗಟ್ಟಲೆ ಸಾಗಬೇಕಿಲ್ಲ. ಊರೊಳಗಿನ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ದನಕರುಗಳು, ವನ್ಯ ಪ್ರಾಣಿಗಳಿಗೆ ನೀರು-ಹಸಿರಿಗೆ ಬರವಿಲ್ಲ. ಈಗ ಹೇಳಿ ನಾವು ನೀರಿನ ಶ್ರೀಮಂತರು ಹೌದೋ ಅಲ್ಲವೋ? ಹಣದಿಂದ ಹೆಚ್ಚು ಶ್ರೀಮಂತರು ಇಲ್ಲದಿರಬಹುದು. ಆದರೆ, ನೀರಿನ ವಿಚಾರದಲ್ಲಿ ನಾವು ಶ್ರೀಮಂತರಾಗಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎನ್ನುತ್ತಾರೆ ಜಗದೀಶ ಮೀನಾ.
ಪಡೇವಾಲೇ ಆದ್ಮಿ: ಮಂಡಲವಾಸ್ ಗ್ರಾಮಕ್ಕೆ ತೆರಳಿ ಜಗದೀಶ ಎಂದು ಯಾರನ್ನಾದರೂ ಕೇಳಿದರೆ ಯಾವ ಜಗದೀಶ ಎಂದು ಪ್ರಶ್ನಿಸುತ್ತಾರೆ. ಆದರೆ ಪಡೇವಾಲೇ ಆದ್ಮಿ ಎಂದು ಹೇಳಿದರೆ ಸಾಕು ಥಟ್ಟನೆ ಜಗದೀಶ ಮೀನಾ ಅವರ ಮನೆಗೆ ಕರೆದೊಯ್ಯುತ್ತಾರೆ. ಕಾರಣ ಇಷ್ಟೆ, ಇಡೀ ಊರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮೊದಲ ವ್ಯಕ್ತಿ ಇವರಂತೆ. ನಂತರ ಹೆಚ್ಚಿನ ಓದು ಕೈಗೊಂಡು ತಹಶೀಲ್ದಾರ್ ಹುದ್ದೆ ಮಟ್ಟಕ್ಕೂ ಹೋಗಿದ್ದರು ಜಗದೀಶ ಮೀನಾ.
ಆದರೆ, ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಬೇಸತ್ತು ಹುದ್ದೆ ತೊರೆದು ಗ್ರಾಮ ಸೇರಿದ್ದಂತೆ. ಅದಕ್ಕಾಗಿಯೇ ಇಂದಿಗೂ ಅವರನ್ನು ಅಲ್ಲಿನ ಜನ ಗುರುತಿಸುವುದು ಪಡೇವಾಲೇ ಆದ್ಮಿ ಎಂದು. ಅಂದು ಹೆಚ್ಚಿಗೆ ಓದಿದವರು ಯಾರೂ ಇರಲಿಲ್ಲ. ಆದರೆ ಇದೀಗ ನಮ್ಮ ಹುಡುಗರು ಎಂಎ, ಎಂಎಸ್ಸಿ ಸೇರಿದಂತೆ ಇನ್ನಿತರ ಪದವಿ ಶಿಕ್ಷಣ ಪಡೆದಿದ್ದಾರೆ ಎಂಬುದು ಮಂಡಲವಾಸ್ ಗ್ರಾಮದ ಅನೇಕರ ಅಭಿಪ್ರಾಯ.
* ಅಮರೇಗೌಡ ಗೋನವಾರ