Advertisement

ನಾವು ಪಾಂಡವರು, ಬಿಜೆಪಿಯವರು ಕೌರವರು: ಸಿಎಂ

10:38 AM Jan 17, 2018 | Team Udayavani |

ಬೆಂಗಳೂರು: ಚುನಾವಣೆ ಕುರುಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಪಾಂಡವರು, ಬಿಜೆಪಿಯವರು ಕೌರವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ. ಮಂಗಳವಾರ ಕೆಪಿಸಿಸಿ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ತಲೆ ತಗ್ಗಿಸುವಂತಹ ಯಾವುದೇ ಕೆಲಸ ಮಾಡಿಲ್ಲ. ಸುಳ್ಳು ಹೇಳ್ಳೋದು ಬೇಡ, ಸತ್ಯವನ್ನೇ ಬಲವಾಗಿ ಹೇಳ್ಳೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದಾಧಿಕಾರಿಗಳಿಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಮಾತನಾಡಿದರು.

Advertisement

ಬಿಜೆಪಿಯವರ ಹಿಂದುತ್ವವನ್ನು ತೀವ್ರವಾಗಿ ವಿರೋಧಿಸಬೇಕು. ಅವರೊಬ್ಬರೇ ಹಿಂದೂ ರಕ್ಷಕರಾ? ಅವರು ಅಧಿಕಾರಕ್ಕೆ ಬಂದದ್ದು ಈಗ. 70 ವರ್ಷಗಳಿಂದ ಹಿಂದೂ ಧರ್ಮದ ರಕ್ಷಣೆ ಮಾಡಿದ್ದು ಯಾರು? ಎಲ್ಲ ಧರ್ಮಗಳನ್ನು ಕಾಂಗ್ರೆಸ್‌ ರಕ್ಷಣೆ ಮಾಡಿದೆ. ಬಿಜೆಪಿಯವರಿಗೆ ಹಿಂದುತ್ವ ಬಿಟ್ಟು ಹೇಳಲು ಬೇರೇನೂ ಉಳಿದಿಲ್ಲ. ಪ್ರಧಾನಿ ಮೋದಿಗೆ ಬೆಂಕಿ ಹಚ್ಚೋದು ಬಿಟ್ಟು ಬೇರೆ ಏನೂ ಬರುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.  ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ನನ್ನ ವಿರುದ್ಧ ನೇರವಾಗಿ ಆರೋಪ ಮಾಡಿದರೂ, ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಖಂಡಿಸಲಿಲ್ಲ. ಪಕ್ಷದ ನಾಯಕರ ಗಮನಕ್ಕೆ ಬರದೇ ಅನಂತಕುಮಾರ್‌ ಹೆಗಡೆ ಮಾತನಾಡಲು ಸಾಧ್ಯವಿಲ್ಲ. ಬಿಜೆಪಿಯವರ ಈ ರೀತಿಯ ಹೇಳಿಕೆಯನ್ನು ನೇರವಾಗಿ ಖಂಡಿಸಬೇಕೆಂದು ಮುಖ್ಯಮಂತ್ರಿ ತಿಳಿಸಿದರು.
 
ರಾಜ್ಯ ಬಿಜೆಪಿಯವರು ಯಡಿಯೂರಪ್ಪ ಅವರನ್ನು ನಂಬಿಕೊಂಡಿಲ್ಲ. ಮೋದಿಯನ್ನು ನಂಬಿಕೊಂಡಿದ್ದಾರೆ. ಯಡಿಯೂರಪ್ಪ ಅದು ಬಿಡ್ತೀನಿ ಇದು ಬಿಡ್ತೀನಿ ಅಂತ ಹೆದರಿಸುತ್ತಾರೆ. ಅವರದು ಖಾಲಿ ಬುಟ್ಟಿ. ಬಿಜೆಪಿಯವರ ಮಿಷನ್‌ 150ರ ಬಗ್ಗೆ ಅವರ ಶಾಸಕರಿಗೇ ನಂಬಿಕೆ ಇಲ್ಲ. ನಮಗೆ ಬೂತ್‌ ಕಮಿಟಿ ಅತ್ಯಂತ ಮುಖ್ಯವಾಗಿದೆ. ಪ್ರತಿ ಬೂತ್‌ನಲ್ಲಿ 50 ವೋಟು ಹೆಚ್ಚಾದರೆ, 10 ಸಾವಿರ ಮತಗಳು ಹೆಚ್ಚಾಗುತ್ತವೆ. ಬೂತ್‌ ಕಮಿಟಿ ಸದಸ್ಯರಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕೆಂದು ಸೂಚಿಸಿದರು. ಬೂತ್‌ ಕಮಿಟಿ ಮೂಲಕ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸರ್ಕಾರ ಅಕ್ಕಿ ಕೊಟ್ಟಿದೆ. ಸಾಲ ಮನ್ನಾ ಮಾಡಿದೆ. ಆದರೆ, ಜನರು ಸೊಸೈಟಿಯವರು ಮಾಡಿದ್ದಾರೆಂದು ಹೇಳುತ್ತಾರೆ. ಬೂತ್‌ ಕಮಿಟಿ ಸದಸ್ಯರು ಜನರಿಗೆ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರು. ಪ್ರತಿಯೊಂದು ಬೂತ್‌ ಕಮಿಟಿಯವರು ಮತದಾರರ ಪಟ್ಟಿ ಇಟ್ಟುಕೊಂಡಿರಬೇಕು. ಅನಗತ್ಯವಾಗಿ ಹೊರಗಿನವರ ಹೆಸರು ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ಇಲ್ಲದಿರುವುದರಿಂದ ಬಿಜೆಪಿಯವರು ಆರ್‌ ಎಸ್‌ಎಸ್‌ನವರನ್ನು ಕರೆದುಕೊಂಡು ಬಿಡುತ್ತಾರೆ. ಅವರ ಬಗ್ಗೆ ನಿಗಾ ಇಡಬೇಕೆಂದು ಸಿಎಂ ಕಿವಿ ಮಾತು ಹೇಳಿದರು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಕಾಂಗ್ರೆಸ್‌ ಪರವಾದ ವಾತಾವರಣವಿದೆ. ಬೋಗಸ್‌ ಕಂಪನಿಗಳು ಸಮೀಕ್ಷೆ ಮಾಡುವುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ, ಯಡಿಯೂರಪ್ಪ ಎಷ್ಟೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು. 

ಇಬ್ರಾಹಿಂ-ಗೌಡರ ಭೇಟಿಗೆ ಆಕ್ಷೇಪ
ಬೆಂಗಳೂರು:
ವಿಧಾನ ಪರಿಷತ್‌ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಪ್ರತಿಧ್ವನಿಸಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿಯಾವುಲ್ಲಾ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಬ್ಬ ಜವಾಬ್ದಾರಿ ಇರುವ ಪಕ್ಷದ ನಾಯಕರು ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ರೀತಿಯ ಭೇಟಿಯಿಂದ ಸಮಾಜಕ್ಕೆ ಪಕ್ಷದಿಂದ ಯಾವ ರೀತಿಯ ಸಂದೇಶ ಹೋಗುತ್ತದೆ ಎಂದು
ಇಬ್ರಾಹಿಂ ಭೇಟಿ ಬಗ್ಗೆ ಕಿಡಿಕಾರಿದರು. ಆದರೆ, ಜಿಯಾವುಲ್ಲಾ ಅವರ ಆಕ್ಷೇಪಕ್ಕೆ ಯಾವ ನಾಯಕರೂ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next