Advertisement

ತ್ರಿವರ್ಣ ಧ್ವಜಕ್ಕೆ ನಾವೇ ವಾರಸುದಾರರು: ಡಿ.ಕೆ.ಶಿವಕುಮಾರ್‌

07:37 PM Jul 31, 2022 | Team Udayavani |

ಚಿತ್ರದುರ್ಗ: ಸ್ವಾತಂತ್ರ್ಯ ಬಂದಾಗ ಬಿಜೆಪಿ ಇರಲಿಲ್ಲ. ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಹೀಗಾಗಿ ತ್ರಿವರ್ಣ ಧ್ವಜಕ್ಕೆ ನಾವೇ ವಾರಸುದಾರರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಎಸ್‌.ನಿಜಲಿಂಗಪ್ಪ ಸ್ಮಾರಕ ಪುಣ್ಯಭೂಮಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರವಾಸದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ 75ನೇ ವರ್ಷಾಚರಣೆಯನ್ನು ಅದ್ಧೂರಿ ಹಾಗೂ ಸಂಭ್ರಮದಿಂದ ಆಚರಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಜೈಪುರದಲ್ಲಿ ನಡೆದ ಕಾಂಗ್ರೆಸ್‌ ಚಿಂತನಾ ಶಿಬಿರದಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು. ನಾವು ತೀರ್ಮಾನ ಮಾಡಿದ ನಂತರ ಬಿಜೆಪಿಯವರು ಮನೆ ಮನೆಗೆ ತಿರಂಗಾ ಹಾರಿಸುವ ಯೋಜನೆ ರೂಪಿಸಿದ್ದಾರೆ ಎಂದರು.

ಬಿಜೆಪಿಯವರು ಕಾರ್ಯಕ್ರಮ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ತ್ರಿವರ್ಣ ಧ್ವಜ ರೂಪಿಸಿದ್ದು ಕಾಂಗ್ರೆಸ್‌ ಪಕ್ಷ. ಮಹಾತ್ಮ ಗಾಂಧೀಜಿ, ನೆಹರು, ಸರ್ದಾರ್‌ ವಲ್ಲಭಬಾಯಿ ಪಟೇಲ್‌. ಎಲ್ಲರೂ ನಮ್ಮವರು. ಬಿಜೆಪಿಯವರು ಹೈಜಾಕ್‌ ಮಾಡುತ್ತಿದ್ದಾರೆ. ಭೂಮಿ ನಮ್ಮದಾಗಿದ್ದು, ಬಿಜೆಪಿಯವರು ಬಗರ್‌ಹುಕುಂ ಸಾಗುವಳಿಯಂತೆ ಬಂದಿದ್ದಾರೆ. ಆ.15ರಂದು ಕಾಂಗ್ರೆಸ್‌ನಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ. 75 ಸಾವಿರ ಜನರು ತ್ರಿವರ್ಣ ಧ್ವಜ ಹಿಡಿದು 6 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ. ಇದಕ್ಕೆ ಚಿತ್ರದುರ್ಗ ಜಿಲ್ಲೆಯಿಂದ ದೊಡ್ಡ ಪ್ರಮಾಣದಲ್ಲಿ ಜನರು ಆಗಮಿಸಬೇಕು ಎಂದರು.

ತ್ರಿವರ್ಣ ಧ್ವಜ ಕಾಂಗ್ರೆಸ್‌ ಕೊಡುಗೆ: ಖಂಡ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ಸಿಗಲಿಲ್ಲ. ರಕ್ತ ಕೊಟ್ಟಿದ್ದಾರೆ, ಬಲಿದಾನ ಆಗಿದೆ. ಅನೇಕ ಹಿರಿಯ ಕಾಂಗ್ರೆಸ್‌ ನಾಯಕರು ಹೋರಾಟ ಮಾಡಿದ್ದಾರೆ. ತ್ರಿವರ್ಣ ಧ್ವಜ ಕೊಟ್ಟಿದ್ದು ಕಾಂಗ್ರೆಸ್‌ ಕೊಡುಗೆ. ಒಂದು ಸೂಜಿಯಿಂದ, ನ್ಯೂಕ್ಲಿಯರ್‌ ಬಾಂಬ್‌ವರೆಗೆ ಎಲ್ಲಾ ತಂತ್ರಜ್ಞಾನ ಕಾಂಗ್ರೆಸ್‌ ಕೊಡುಗೆಯಾಗಿದೆ. ಆದರೆ ಇಂದು ಸುಳ್ಳಿನ ನಡಿಗೆ ನಡೆಯುತ್ತಿದೆ. ನಕಲಿ ರಾಷ್ಟ್ರವಾದಿಗಳು ನಮ್ಮ ನಾಯಕರನ್ನು ಹೈಜಾಕ್‌ ಮಾಡಿದ್ದಾರೆ. ಸತ್ಯ ಸಾಯಬಾರದು, ಉಳಿಯಬೇಕು. ಇಂದು ಸಾಮರಸ್ಯ ಕದಡಿ ದುರಾಡಳಿತ, ಭ್ರಷ್ಟಾಚಾರ ಮಾಡುತ್ತಿದ್ದಾರೆ. ಯುವಕರಿಗೆ ಈ ವಿಚಾರಗಳನ್ನು ತಿಳಿಸಬೇಕಿದೆ. ಆ.3ರಂದು ರಾಹುಲ್‌ ಗಾಂಧಿ  ಚಿತ್ರದುರ್ಗಕ್ಕೆ ಬರುತ್ತಿದ್ದಾರೆ. ಮಠಗಳಿಗೆ ಭೇಟಿ ನೀಡಿ ಸುಮಾರು 28 ಮಠಾಧಿಧೀಶರ ಜತೆ ಸಂವಾದ ನಡೆಸಲಿದ್ದಾರೆ ಎಂದರು.

ಸ್ವಾತಂತ್ರ್ಯಕ್ಕೂ ಬಿಜೆಪಿ-ಆರೆಸ್ಸೆಸ್‌ಗೂ
ಸಂಬಂಧವೇ ಇಲ್ಲ: ಆಂಜನೇಯ
ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ಸ್ವಾತಂತ್ರ್ಯಕ್ಕೂ ಬಿಜೆಪಿ-ಆರೆಸ್ಸೆಸ್‌ಗೂ ಸಂಬಂಧ ಇಲ್ಲ. ನಮ್ಮ ಪಕ್ಷದ ಹಿರಿಯ ನಾಯಕರು ಇದಕ್ಕಾಗಿ ಹೋರಾಟ ಮಾಡಿದ್ದಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. 40 ಪರ್ಸೆಂಟೇಜ್‌ ಪಡೆಯುವ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕೊಲೆಯಾದವರ ಕುಟುಂಬಗಳಿಗೆ ಸಾಂತ್ವನ ಹೇಳುವುದರಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರ ತೆಗೆಯಲು ನಮ್ಮ ಹೋರಾಟ ನಿರಂತರವಾಗಿರಬೇಕು ಎಂದರು.

Advertisement

ಎಐಸಿಸಿ ನಡೆಸಿರುವ ಸಮೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವಿಗೆ ಪೂರಕ ವಾತಾವರಣ ಇದೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮನೆ ಮನೆಗೆ ಭೇಟಿ ಮಾಡಿ ಮಹಿಳೆಯರು, ಯುವಕರನ್ನು ಪಕ್ಷಕ್ಕೆ ಸೆಳೆದು ಮತ ಹಾಕಿಸಿಕೊಳ್ಳಬೇಕು. ಇಂತಹ ಅವಕಾಶ ಕಳೆದುಕೊಳ್ಳಬಾರದು.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next