ಬೆಂಗಳೂರು: ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಅದನ್ನು ಜಗತ್ತಿನ ಅನೇಕ ರಾಷ್ಟ್ರಗಳು ಅಳವಡಿಸಿಕೊಂಡಿವೆ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಸಂವಿಧಾನ ಅತ್ಯುತ್ತಮವಾದುದು. ಸಂದರ್ಭಕ್ಕೆ ಅನುಗುಣವಾಗಿ ಮಾರ್ಪಾಡು ಮಾಡುವುದು ಅವಶ್ಯಕತೆ ಇದೆ. ಆದರೆ, ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎಂಬುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
ಕನ್ನಡ ನಾಡಿಗೆ ಕೀರ್ತಿ ತಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಸಚಿವ ಎ.ಮಂಜು ಮಾತುಗಳು ಶೋಭೆ ತರುವುದಿಲ್ಲ. ಗೌಡರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಹಾಸನದಲ್ಲಿ ಕಮೀಷನ್ ದಂಧೆಯಲ್ಲಿ ದುಡ್ಡು ಹೊಡೆಯುತ್ತಿರುವುದು ಮಂಜು. ಅವರಿಗೆ ಸಹಕಾರ ನೀಡಲಿಲ್ಲ ಎಂದು ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಿಸಿದರು. ಯಾರ ಋಣದಲ್ಲಿ ಯಾರು ಇದ್ದಾರೆ ಅನ್ನೋದು ಜನರಿಗೆ ಗೊತ್ತು. ಹಾಸನಕ್ಕೆ ಸಚಿವ ಮಂಜು ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ದೇವೇಗೌಡರ ಕೊಡುಗೆ ಬಗ್ಗೆ ದೇಶದ ಜನರಿಗೆ ಹಾಸನ ಹಾಗೂ ರಾಜ್ಯದ ಜನತೆಗೆ ಗೊತ್ತಿದೆ. ಹಣ ಅಧಿಕಾರ ಇದೆ ಎಂದು ಅಹಂಕಾರದ ಮಾತು ಆಡೋದು ಮೊದಲು ಬಿಡಲಿ ಎಂದು ಹೇಳಿದರು. ದೇವೇಗೌಡರಿಗೆ ಮಾತ್ರ ಪುತ್ರ ವ್ಯಾಮೋಹ ಇದೆಯಾ? ಯಡಿಯೂರಪ್ಪ, ಸಿದ್ದರಾಮಯ್ಯ, ಈಶ್ವರಪ್ಪ, ಮಹದೇವಪ್ಪ ಅವರ ಮಕ್ಕಳು ರಾಜಕೀಯದಲ್ಲಿ ಇಲ್ಲವಾ ಎಂದು ಪ್ರಶ್ನಿಸಿದರು.