Advertisement

ನಮ್ಮದು ಈಗಲೂ ಯುವ ಪಡೆ: ಬ್ರಾವೊ

03:11 AM Mar 28, 2019 | Sriram |

ಹೊಸದಿಲ್ಲಿ: “ನಮ್ಮದು ಈಗಲೂ ಯುವ ಪಡೆ. ನಾವೇನೂ 60 ವರ್ಷದವರಲ್ಲ. 32-35ರ ವಯಸ್ಸು ನಮ್ಮದು. ಅಪಾರ ಅನುಭವ ಹೊಂದಿದ್ದೇವೆ. ನೀವು ಏನನ್ನು ಬೇಕಾದರೂ ಸೋಲಿಸಬಹುದು, ಆದರೆ ಅನುಭವವನ್ನಲ್ಲ’ ಎಂದು ಚೆನ್ನೈ ಸೂಪರ್‌ ಕಿಂಗ್‌ ತಂಡದ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಟೀಕಾಕಾರರಿಗೆ ತಿವಿದಿದ್ದಾರೆ.

Advertisement

ಚೆನ್ನೈ ತಂಡ ಬರೀ ಹಿರಿಯರಿಂದಲೇ ಕೂಡಿದೆ, ಟಿ20ಗೆ ಬೇಕಿರುವುದು ಯುವಕರೇ ಹೊರತು ವಯಸ್ಸಾದವರಲ್ಲ ಎಂಬ ಟೀಕೆಗೆ ಬ್ರಾವೊ ಈ ಪ್ರತಿಕ್ರಿಯೆ ನೀಡಿದ್ದಾರೆ.

“ಒತ್ತಡದ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಕಲೆಗಾರಿಕೆ ಹೊಂದಿರುವುದರಿಂದಲೇ ಚೆನ್ನೈತಂಡವಿಂದು ಬಹಳ ಎತ್ತರದಲ್ಲಿದೆ. ವಿಶ್ವದ ಶ್ರೇಷ್ಠ ನಾಯಕನನ್ನು ನಮ್ಮ ತಂಡ ಹೊಂದಿದೆ. ನೀವೂ ಯಾವುದೇ ಕ್ರೀಡೆಯಲ್ಲಿ ಅನುಭವವನ್ನು ಸೋಲಿಸಲಾರಿರಿ. ನಮಗೆ ನಮ್ಮ ದೌರ್ಬಲ್ಯಗಳು ಗೊತ್ತು. ನಮ್ಮದು ಫಾಸ್ಟೆಸ್ಟ್‌ ಟೀಮ್‌ ಅಲ್ಲದೇ ಇರಬಹುದು, ಆದರೆ ಸ್ಮಾರ್ಟೆಸ್ಟ್‌ ಟೀಮ್‌ ಆಗಿದೆ ಎಂದು ಧೋನಿ ಹೇಳುವುದರಲ್ಲಿ ಅರ್ಥವಿದೆ’ ಎಂದು ಕೆರಿಬಿಯನ್‌ ಆಲ್‌ರೌಂಡರ್‌ ಹೇಳಿದರು.

ಯಾವುದೇ ಮೀಟಿಂಗ್‌ ಇಲ್ಲ
“ಪಂದ್ಯಕ್ಕೂ ಮುನ್ನ ನಾವು ಯಾವುದೇ ನಿರ್ದಿಷ್ಟ ಯೋಜನೆ ಹಾಕಿಕೊಳ್ಳುವುದಿಲ್ಲ. ಟೀಮ್‌ ಮೀಟಿಂಗ್‌ ಕೂಡ ನಡೆಸುವುದಿಲ್ಲ. ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಹೊಂದಿ ಕೊಳ್ಳುವ ಕಲೆ ಅಥವಾ ಜಾಣ್ಮೆ ನಮ್ಮದಾಗಿದೆ. ಧೋನಿ ಸಹಿತ ಎಲ್ಲರೂ ಒಂದೊಂದು ಸ್ಟೈಲ್‌ ಹೊಂದಿದ್ದೇವೆ’ ಎಂದು ಬ್ರಾವೊ ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು. ರಿಷಬ್‌ ಪಂತ್‌ ಮತ್ತು ಕಾಲಿನ್‌ ಇನ್‌ಗಾÅಮ್‌ ಅವರನ್ನು ಬ್ರಾವೊ ಒಂದೇ ಓವರಿನಲ್ಲಿ ಔಟ್‌ ಮಾಡುವ ಮೂಲಕ ತಂಡಕ್ಕೆ ಮೇಲುಗೈ ಒದಗಿಸಿದ್ದರು.

“ಸ್ಟೈಟರ್‌ ಲೈನ್‌ ಮೂಲಕ ನೇರವಾಗಿ ಸ್ಟಂಪ್‌ ಮೇಲೆ ದಾಳಿ ನಡೆಸುವಂತೆ ಧೋನಿ ನನಗೆ ಸೂಚಿಸಿದ್ದರು. ಸಾಮಾನ್ಯವಾಗಿ ನಾನು ನಿಧಾನ ಗತಿಯ ಎಸೆತಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆ. ಆದರೆ ಇಲ್ಲಿ ಹೆಚ್ಚು ಶ್ರಮ ಹಾಗೂ ಶಕ್ತಿ ವಹಿಸಿ ಬೌಲಿಂಗ್‌ ನಡೆಸಿದ್ದೇನೆ’ ಎಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿರುವ ಬ್ರಾವೊ ಹೇಳಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಡೆಲ್ಲಿ ಕ್ಯಾಪಿಟಲ್ಸ್‌-6 ವಿಕೆಟಿಗೆ 147 (ಧವನ್‌ 51, ಪಂತ್‌ 25, ಶಾ 24, ಬ್ರಾವೊ 33ಕ್ಕೆ 3). ಚೆನ್ನೈ ಸೂಪರ್‌ ಕಿಂಗ್ಸ್‌-19.4 ಓವರ್‌ಗಳಲ್ಲಿ 4 ವಿಕೆಟಿಗೆ 150 (ವಾಟ್ಸನ್‌ 44, ಧೋನಿ ಔಟಾಗದೆ 32, ರೈನಾ 30, ಜಾಧವ್‌ 27, ಮಿಶ್ರಾ 35ಕ್ಕೆ 2). ಪಂದ್ಯಶ್ರೇಷ್ಠ: ಶೇನ್‌ ವಾಟ್ಸನ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಈ ಪಂದ್ಯದಲ್ಲಿ ಎರಡೂ ತಂಡಗಳು 4 ಮಂದಿ ವಿದೇಶಿ ಕ್ರಿಕೆಟಿಗರ ಕೋಟಾವನ್ನು ಬಳಸಿಕೊಳ್ಳಲಿಲ್ಲ. ಇದು ಐಪಿಎಲ್‌ನಲ್ಲಿ ಕಂಡುಬಂದ ಕೇವಲ 2ನೇ ನಿದರ್ಶನ. 2017ರ ಡೆಲ್ಲಿ-ಆರ್‌ಸಿಬಿ ಪಂದ್ಯದಲ್ಲೂ ತಲಾ ಮೂವರು ವಿದೇಶಿ ಆಟಗಾರರನ್ನು ಆಡಿಸಲಾಗಿತ್ತು.
– ಈ ಪಂದ್ಯದಲ್ಲಿ ಒಟ್ಟು 6 ವಿದೇಶಿ ಆಟಗಾರರಿಗಷ್ಟೇ ಅವಕಾಶ ಸಿಕ್ಕಿತು. ಇದು ಅತೀ ಕಡಿಮೆ ವಿದೇಶಿ ಆಟಗಾರರು ಆಡಿದ 3ನೇ ಐಪಿಎಲ್‌ ಪಂದ್ಯ. 2011ರ ಚೆನ್ನೈ-ಕೋಲ್ಕತಾ (ಚೆನ್ನೈ-4, ಕೆಕೆಆರ್‌-2) ಹಾಗೂ 2017ರ ಡೆಲ್ಲಿ-ಆರ್‌ಸಿಬಿ (ಡೆಲ್ಲಿ-3, ಆರ್‌ಸಿಬಿ-3) ಈ ಸಾಲಿನ ಉಳಿದೆರಡು ಪಂದ್ಯಗಳಾಗಿವೆ.
– ಅಮಿತ್‌ ಮಿಶ್ರಾ ಒಂದೇ ತಾಣದಲ್ಲಿ 50 ವಿಕೆಟ್‌ ಉರುಳಿಸಿದ 2ನೇ ಬೌಲರ್‌ ಎನಿಸಿದರು (ಫಿರೋಜ್‌ ಶಾ ಕೋಟ್ಲಾದಲ್ಲಿ 51 ವಿಕೆಟ್‌). ಲಸಿತ ಮಾಲಿಂಗ ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ 58 ವಿಕೆಟ್‌ ಉರುಳಿಸಿದ್ದಾರೆ.
– ಇಮ್ರಾನ್‌ ತಾಹಿರ್‌ ಟಿ20ಯಲ್ಲಿ 46 ವಿಕೆಟ್‌ಗಳನ್ನು ಎಲ್‌ಬಿ ರೂಪದಲ್ಲಿ ಉರುಳಿಸಿ ಸುನೀಲ್‌ ನಾರಾಯಣ್‌ ಜತೆ ಜಂಟಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ದಾಖಲೆ ರಶೀದ್‌ ಖಾನ್‌ ಹೆಸರಲ್ಲಿದೆ (51 ವಿಕೆಟ್‌). ಶಾಹಿದ್‌ ಅಫ್ರಿದಿಗೆ 3ನೇ ಸ್ಥಾನ (45 ವಿಕೆಟ್‌).
– ಶೇನ್‌ ವಾಟ್ಸನ್‌ ಟಿ20ಯಲ್ಲಿ 34 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಶಾಹಿದ್‌ ಅಫ್ರಿದಿಯೊಂದಿಗೆ ಜಂಟಿ 2ನೇ ಸ್ಥಾನ ಅಲಂಕರಿಸಿದರು. ಕ್ರಿಸ್‌ ಗೇಲ್‌ ಮೊದಲ ಸ್ಥಾನದಲ್ಲಿದ್ದಾರೆ (58).
– ಇಶಾಂತ್‌ ಶರ್ಮ ವೃತ್ತಿಪರ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಪೂರ್ತಿಗೊಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 426, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 178 ಹಾಗೂ ಟಿ20 ಕ್ರಿಕೆಟ್‌ನಲ್ಲಿ 96 ವಿಕೆಟ್‌ಗಳು ಸೇರಿವೆ.
– ಸುರೇಶ್‌ ರೈನಾ 23 ರನ್‌ ಮಾಡಿದ ವೇಳೆ ವೃತ್ತಿಪರ ಕ್ರಿಕೆಟ್‌ನಲ್ಲಿ 23 ಸಾವಿರ ರನ್‌ ಪೂರ್ತಿಗೊಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6,871, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 8,078 ಮತ್ತು ಟಿ20 ಕ್ರಿಕೆಟ್‌ನಲ್ಲಿ 8,058 ರನ್‌ ಒಳಗೊಂಡಿದೆ.
– ಹರ್ಭಜನ್‌ ಸಿಂಗ್‌ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ ನೀಡಿದ ಬೌಲರ್‌ ಎನಿಸಿದರು (3,705). ಈ ಸಂದರ್ಭದಲ್ಲಿ ಅವರು ಪೀಯೂಷ್‌ ಚಾವ್ಲಾ ದಾಖಲೆ ಮುರಿದರು (3,696 ರನ್‌). ಹರ್ಭಜನ್‌ ಈವರೆಗೆ ಒಟ್ಟು 526.2 ಓವರ್‌ ಎಸೆದಿದ್ದು, ಐಪಿಎಲ್‌ನಲ್ಲಿ ಐನೂರಕ್ಕೂ ಹೆಚ್ಚು ಓವರ್‌ ಎಸೆದ ಏಕೈಕ ಬೌಲರ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next