Advertisement

ನೇಪಾಲಕ್ಕೆ ನಾವೇ ಶೆರ್ಪಾ

08:55 AM May 13, 2018 | Team Udayavani |

ಕಠ್ಮಂಡು: ನೇಪಾಲಕ್ಕೆ ಯಶಸ್ಸಿನ ಶಿಖರವನ್ನೇರಲು ಭಾರತ ಶೆರ್ಪಾಗಳ ಮಾದರಿಯಲ್ಲಿ ಅನನ್ಯ ಸಹಕಾರ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ನೆರೆರಾಷ್ಟ್ರಕ್ಕೆ ಆಶ್ವಾಸನೆ ನೀಡಿದ್ದಾರೆ. ಕಠ್ಮಂಡುವಿನಲ್ಲಿ ಇಲ್ಲಿನ ನಗರಾಡಳಿತ ತಮಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

Advertisement

“”ಹಿಮಾಲಯ ಪರ್ವತಾರೋಹಿಗಳಿಗೆ ಶೆರ್ಪಾ ಜನಾಂಗ ಗುರುತರ ಸಹಕಾರ ನೀಡುತ್ತದೆ. ಅದೇ ರೀತಿಯ ಸಹಕಾರವನ್ನು ಭಾರತ, ನೇಪಾಲಕ್ಕೆ ನೀಡುತ್ತದೆ” ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ನೇಪಾಲ, ಬದಲಾವಣೆಯ ಹಾದಿಗೆ ಹೊರಳಿದ್ದನ್ನು ಶ್ಲಾಸಿದರು. ನೇಪಾಲ, ಯುದ್ಧವನ್ನು ಬಿಟ್ಟು ಬುದ್ಧನನ್ನು ಆಲಿಂಗಿಸಿದೆ.

ಬಂದೂಕನ್ನು ಬಿಟ್ಟು ಬ್ಯಾಲೆಟ್‌ ಕಡೆಗೆ ಸಾಗಿ ಬಂದಿದ್ದು ಶ್ಲಾಘನೀಯ. ಆದರೆ, ಈವರೆಗಿನ ಪಯಣ, ಗೌರೀ ಶಂಕರ ಶಿಖರದ ತಪ್ಪಲನ್ನು ತಲುಪಿದಂತಷ್ಟೆ. ನಿಜವಾದ ಆರೋಹಣ ಇಲ್ಲಿಂದ ಶುರುವಾಗಲಿದೆ. ಯಶಸ್ಸಿನ ಶಿಖರದ ತುತ್ತತುದಿಗೆ ತಲುಪಲು ನೇಪಾಲ ಕೈಗೊಳ್ಳುವ ಎಲ್ಲಾ ಪ್ರಯತ್ನಗಳಿಗೆ ಭಾರತ ಹೆಗಲು ಕೊಡಲಿದೆ ಎಂದು ಅವರು ಹೇಳಿದರು. 

ಪ್ರಧಾನಿಯವರ ಈ ಹೇಳಿಕೆಗೆ ನೆರೆದಿದ್ದ ಜನಸಾಗರ ಜೋರಾಗಿ ಕರತಾಡನ ಮಾಡಿ ಸಂತಸ ವ್ಯಕ್ತಪಡಿಸಿತು. ಇದರ ನಡುವೆಯೇ ಮೋದಿ, “”ಭಾರತ- ನೇಪಾಲ ಮೈತ್ರಿ ಅಮರವಾಗಲಿ” ಎಂದು ಉದ್ಘೋಷಿಸಿದರು. ಆನಂತರ, ಕಠ್ಮಂಡುವಿನ ಸೌಂದರ್ಯ ಬಣ್ಣಿಸಿದ ಅವರು, ಕಠ್ಮಂಡು ನಗರ ಪುರಾತನ ಮತ್ತು ಆಧುನಿಕತೆಯ ಸಮ್ಮಿಶ್ರಣವಾಗಿದ್ದು, ತನ್ನದೇ ಆದ ವೈವಿಧ್ಯತೆ ಹೊಂದಿದೆ ಎಂದರು. ಇನ್ನು, ಹಿಂದೆ ನೇಪಾಲಕ್ಕೆ ಭೇಟಿ ನೀಡಿದ್ದಾಗ ಪಶುಪತಿನಾಥ ದೇಗುಲಕ್ಕೆ ಭೇಟಿ ನೀಡಿದ್ದು, ಈ ಬಾರಿ ಪಶುಪತಿನಾಥ ದೇಗುಲದ ಜತೆಗೆ ಜನಕಪುರಿ, ಮುಕ್ತಿನಾಥ ದೇಗುಲಗಳಿಗೂ ಭೇಟಿ ನೀಡಿದ್ದು ಧನ್ಯತೆಯನ್ನು ತಂದಿದೆ ಎಂದರು. ಸನ್ಮಾನದ ವೇಳೆ, ಕಠ್ಮಂಡು ಮೇಯರ್‌ ಸುಂದರ್‌ ಶಕ್ಯ ಅವರು ನಗರದ ಸಾಂಕೇತಿಕ ಕೀಲಿ ಕೈಯನ್ನು ಮೋದಿಯವರಿಗೆ ಪ್ರದಾನ ಮಾಡಿದರು.

ಕ್ರಿಕೆಟ್‌ ಅನುಬಂಧಕ್ಕೆ ಮೆಚ್ಚುಗೆ: ಕ್ರಿಕೆಟ್‌ ಕ್ರೀಡೆಯು ಭಾರತ ಮತ್ತು ನೇಪಾಲ ನಾಗರಿಕರ ಬಾಂಧವ್ಯವನ್ನು ವೃದ್ಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ನೇಪಾಲದ ಯುವ ಕ್ರಿಕೆಟಿಗ ಸಂದೀಪ್‌ ಲಮಿಚ್ಚಾನೆ, ಪ್ರಸ್ತುತ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಆ ಮೂಲಕ, ಐಪಿಎಲ್‌ಗೆ ಕಾಲಿಟ್ಟ ಮೊದಲ ನೇಪಾಲಿಗ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ತಮ್ಮ ಮಾತುಗಳಲ್ಲಿ ಸಂದೀಪ್‌ ಹೆಸರು ಉಲ್ಲೇಖೀಸಿದ ಮೋದಿ, ಈ ಕ್ರಿಕೆಟ್‌ ಅನುಬಂಧ ನೇಪಾಲ ಹಾಗೂ ಭಾರತದ ಬಾಂಧವ್ಯವವನ್ನೂ ವೃದ್ಧಿಸುತ್ತದೆ ಎಂದು ಆಶಿಸಿದರು.

Advertisement

ಪ್ರಧಾನಿ ಪ್ರವಾಸ ಪೂರ್ವ ನಿರ್ಧರಿತ  
ಪ್ರಧಾನಿ ಮೋದಿಯವರ ನೇಪಾಲ ಪ್ರವಾಸ, ಮೊದಲೇ ನಿರ್ಧಾರವಾಗಿತ್ತು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ನೇಪಾಲ ಪ್ರವಾಸ ಕೈಗೊಂಡಿರುವ ಪ್ರಧಾನಿ, ಕರ್ನಾಟಕದ ಮತದಾರರ ಮೇಲೆ ಪ್ರಭಾವ ಬೀರಲು ನೇಪಾಲದ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಗೋಖಲೆ, ನೇಪಾಲದ ಚುನಾವಣೆಯಲ್ಲಿ ಕೆ.ಪಿ. ಶರ್ಮಾ ಒಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿಯವರ ನೇಪಾಲ ಪ್ರವಾಸ ನಿಗದಿಯಾಗಿತ್ತು ಎಂದಿದ್ದಾರೆ. 

ಐತಿಹಾಸಿಕ ಭೇಟಿ: ಮೋದಿ ಬಣ್ಣನೆ
ತಮ್ಮ ನೇಪಾಲ ಭೇಟಿ ಐತಿಹಾಸಿಕ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ತಮ್ಮ 2 ದಿನಗಳ ಪ್ರವಾಸ ಮುಗಿಸಿ ಶನಿವಾರ ಸ್ವದೇಶಕ್ಕೆ ವಾಪಸಾದ ವೇಳೆ ಟ್ವೀಟ್‌ ಮಾಡಿರುವ ಅವರು, “”ಈ ಬಾರಿ ನೇಪಾಲದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಜತೆ ನಡೆಸಿದ ಮಾತುಕತೆ ಫ‌ಲಪ್ರದವಾಗಿದ್ದು, ಚೈತನ್ಯದಾಯಕವೂ ಆಗಿತ್ತು” ಎಂದು ಹೇಳಿದ್ದಾರೆ.

ಮುಕ್ತಿನಾಥದಲ್ಲಿ ಪ್ರಾರ್ಥನೆ
ನೇಪಾಲದ ಅತ್ಯಂತ ಪ್ರಸಿದ್ಧವಾದ ಮುಕ್ತಿನಾಥ ದೇಗುಲಕ್ಕೆ ಪ್ರಧಾನಿ ಮೋದಿ, ಶನಿವಾರ ಬೆಳಗ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. 

ಈ ಮೂಲಕ, ಈ ದೇಗುಲಕ್ಕೆ ಭೇಟಿ ನೀಡಿದ ಮೊದಲ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆನಂತರ, ಮತ್ತೂಂದು ಪ್ರಸಿದ್ಧ ದೇಗುಲ, ಬಾಗ¾ತಿ ನದಿ ತಟದಲ್ಲಿರುವ ಪಶುಪತಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ, ಅವರಿಗೆ ದೇಗುಲದ ಪ್ರತಿರೂಪವೊಂದನ್ನು ನೆನಪಿನ ಕಾಣಿಕೆಯಾಗಿ ನೀಡ‌ಲಾಯಿತು. ಭೇಟಿಯಿಂದ ತಮ್ಮಲ್ಲಿ ಪಶುಪತಿನಾಥನ ಆಶೀರ್ವಾದ ಸಿಕ್ಕ ಅನುಭೂತಿ ಉಂಟಾಗಿದೆ ಎಂದು ಟ್ವಿಟರ್‌ನಲ್ಲಿ ಪ್ರಧಾನಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next