ಬಸವಕಲ್ಯಾಣ: ಭಾರತ ದೇಶ ಸುಂದರವಾಗಿ ಕಾಣಲು ಹಾಗೂ ಶಾಂತಿ ನೆಲೆಸುವ ನಿಟ್ಟಿನಲ್ಲಿ ಬಸವ ತತ್ವ ಸಾಧಕರ ತರಬೇತಿ ಕೇಂದ್ರಕ್ಕೆ ಮಕ್ಕಳನ್ನು ಸಮರ್ಪಣೆ ಮಾಡುವುದು ಪ್ರಸಕ್ತ ದಿನಗಳಲ್ಲಿ ತುಂಬಾ ಅವಶ್ಯಕತೆ ಇದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ನಗರದ ಅನುಭವ ಮಂಟಪದ ಆವರಣದಲ್ಲಿ ರವಿವಾರ ನಡೆದ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಬಸವ ತತ್ವ ಸಾಧಕರ ತರಬೇತಿ ಕೇಂದ್ರ ಲೋಕಾರ್ಪಣೆ ಮಾಡಿ, ನಂತರ ಪ್ರಮುಖ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುವುದಕ್ಕಾಗಿ ದೇಶ ತಿರುಗಾಡಿಲ್ಲ. ಬದಲಾಗಿ ಅವರು ಬರೆದಿರುವ ವಚನಗಳು ದೇಶಾದ್ಯಂತ ಹರಿದಾಡಿದ್ದವು. ಹಾಗಾಗಿ ನಾವು ವಚನಗಳನ್ನು ಇನ್ನೂ ಹೆಚ್ಚಾಗಿ ಪ್ರಚಾರ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಶರಣರನ್ನು ಸ್ಮರಿಸುವುದು ಅತ್ಯಂತ ಪವಿತ್ರವಾದ ಕೆಲಸ. ಆದ್ದರಿಂದಲೇ ಅನುಭವ ಮಂಟಪ ಸ್ಥಾಪನೆ ಮಾಡಲಾಗಿತ್ತು. ಅಲ್ಲಿಂದ ನಿರಂತರವಾಗಿ ದೇಶದಲ್ಲಿ ಈ ಕಾರ್ಯ ನಡೆಯಿತು. ಹಾಗಾಗಿ ಅದನ್ನು ಮುಂದುವರಿಸಿಕೊಂಡು ಹೋಗಲು ದೇಶಕ್ಕೆ ಸಾಧಕರ ತುಂಬಾ ಅವಶ್ಯಕತೆ ಇದೆ ಎಂದು ನುಡಿದರು. ಬಸವ ತತ್ವ ಸಾಧಕರನ್ನು ನಿರ್ಮಾಣ ಮಾಡುವುದಕ್ಕಾಗಿ ಡಾ| ಬಸವಲಿಂಗ ಪಟ್ಟದೇವರು ಸಾಧಕರ ತರಬೇತಿ ಕೇಂದ್ರ ಜೊತೆಗೆ ಪಠ್ಯಕ್ರಮ ಸೇರಿದಂತೆ ಸಕಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಹಾಗಾಗಿ ಎಲ್ಲರು ಪ್ರಪಂಚ ಆಳುವುದನ್ನು ಬಿಟ್ಟು ಸಮರ್ಪಣ ಭಾವದಿಂದ ತಮ್ಮ ಮಕ್ಕಳನ್ನು ಈ ತರಬೇತಿ ಕೇಂದ್ರಕ್ಕೆ ಸಮರ್ಪಣೆ ಮಾಡಬೇಕು.
ಏಕೆಂದರೆ ಇಲ್ಲಿ ಕಲಿತ ಮಕ್ಕಳು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡಿದಂತಾಗುತ್ತದೆ ಎಂದರು.
ವಿಶ್ವಬಸವ ಧರ್ಮ ಟ್ರಸ್ಟ್, ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದೇವರು, ಡಾ| ಶಿವಾನಂದ ಮಹಾಸ್ವಾಮಿಗಳು, ಶ್ರೀ ನಿರಂಜನ ಸ್ವಾಮಿಗಳು, ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಬಿ.ನಾರಾಯಣರಾವ್, ನೇಕಾರ ಸಮುದಾಯ ಒಕ್ಕೂಟ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿತರರು ಇದ್ದರು.