Advertisement

ದುಸ್ಸಾಹಸಕ್ಕೆ ಉತ್ತರಿಸಲು ನಾವು ಸರ್ವಸನ್ನದ್ಧ

01:30 AM Aug 14, 2019 | Team Udayavani |

ನವದೆಹಲಿ: ‘ಪಾಕಿಸ್ತಾನವೇನಾದರೂ ದುಸ್ಸಾಹಸಕ್ಕೆ ಮುಂದಾದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ನಮ್ಮ ಸೇನೆ ಸಿದ್ಧವಾಗಿದೆ’ ಎಂದು ಭೂಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಹೇಳಿದ್ದಾರೆ.

Advertisement

ಪಾಕ್‌ ಸೇನೆಯು ಲಡಾಖ್‌ ಸಮೀಪದ ಮುಂಚೂಣಿ ನೆಲೆಗೆ ಸೇನಾ ಸಾಮಗ್ರಿಗಳನ್ನು ಸಾಗಿಸು ತ್ತಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಜ. ರಾವತ್‌ ಈ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಒಸಿಯಲ್ಲಿ ಪಾಕಿಸ್ತಾನವು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದರೆ ಅದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಅಂತಹ ಪ್ರಕ್ರಿಯೆಗಳು ಸಹಜವಾಗಿ ನಡೆಯುತ್ತಿರುತ್ತವೆ. ಹಾಗೂ ಒಂದು ವೇಳೆ ಪಾಕಿಸ್ತಾನವು ದುಸ್ಸಾಹಸಕ್ಕೆ ಮುಂದಾದರೆ, ಎಂತಹ ಸನ್ನಿವೇಶವನ್ನು ಬೇಕಿದ್ದರೂ ಎದುರಿಸಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ. ಜತೆಗೆ, ಎಲ್ಒಸಿಯಾದ್ಯಂತ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ ಎಂದೂ ತಿಳಿಸಿದ್ದಾರೆ.

ಭೇಟಿಗೆ ಅವಕಾಶ ನೀಡಿ: ಜಮ್ಮು-ಕಾಶ್ಮೀರದ ಪ್ರಸ್ತುತ ಸ್ಥಿತಿಯನ್ನು ಅರಿಯುವ ಸಲುವಾಗಿ ಪ್ರತಿಪಕ್ಷಗಳ ನಾಯಕರನ್ನು ಅಲ್ಲಿಗೆ ಕರೆದೊಯ್ಯುವ ಮೂಲಕ, ಪ್ರತಿಪಕ್ಷಗಳನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಈ ವಿಚಾರದಲ್ಲಿ ಸರ್ಕಾರವು ರಾಜಕೀಯ ಮಾತುಕತೆ ನಡೆಸಬೇಕು. ಗೃಹಬಂಧನದಲ್ಲಿರುವ ನಾಯಕರನ್ನು ಬಿಡುಗಡೆ ಮಾಡಿ ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು ಎಂದೂ ಹೇಳಿದೆ.

ಮಧ್ಯಸ್ಥಿಕೆ ವಿಚಾರ ಅಂದೇ ಮುಗಿದಿದೆ: ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಈಗಾ ಗಲೇ ತಿಳಿಸಿದ್ದು, ಆ ವಿಚಾರ ಅಲ್ಲಿಗೇ ಮುಗಿದಿದೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಹರ್ಷವರ್ಧನ್‌ ಶ್ರಿಂಗ್ಲಾ ಹೇಳಿದ್ದಾರೆ. ಅಲ್ಲದೆ, ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆಯಿಲ್ಲ, ಅದಕ್ಕೆ ದ್ವಿಪಕ್ಷಿಯ ಮಾತುಕತೆ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಲುವನ್ನು ದಶಕಗಳಿಂದಲೂ ಅಮೆರಿಕ ತಾಳಿಕೊಂಡು ಬಂದಿದೆ ಎಂದೂ ಅವರು ತಿಳಿಸಿದ್ದಾರೆ. ಅ.12ರಂದು ಹೂಡಿಕೆದಾರರ ಸಮಾವೇಶ: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದಿಮೆಗಳನ್ನು ಆಕರ್ಷಿಸುವ ಉದ್ದೇಶದಿಂದ ಅಕ್ಟೋಬರ್‌ 12ರಿಂದ ಶ್ರೀನಗರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿ ಸುತ್ತಿ ರುವುದಾಗಿ ರಾಜ್ಯಾಡಳಿತ ಮಂಗಳವಾರ ಘೋಷಿಸಿದೆ. ಈ ಸಮಾವೇಶಕ್ಕೆ ಭಾರತೀಯ ಉದ್ದಿಮೆಗಳ ಒಕ್ಕೂಟ (ಸಿಐಐ)ವು ರಾಷ್ಟ್ರೀಯ ಪಾಲುದಾರನಾಗಿರಲಿದೆ. ಅಲ್ಲದೆ, ಈ ಸಮಾವೇಶದಿಂದಾಗಿ ಕಣಿವೆ ರಾಜ್ಯಕ್ಕೆ ಹೂಡಿಕೆ ಹರಿದುಬರಲಿದೆ. ಇದು ಆ ರಾಜ್ಯದ ಅಭಿ ವೃದ್ಧಿಗೆ ನೆರವಾಗಲಿದೆ ಎಂದು ರಾಜ್ಯದ ಪ್ರಧಾನ ಕಾರ್ಯದರ್ಶಿ(ಉದ್ದಿಮೆ) ನವೀನ್‌ ಚೌಧರಿ ತಿಳಿಸಿದ್ದಾರೆ.

ಏಕಾಂಗಿಯಾಗಿದ್ದನ್ನು ಒಪ್ಪಿಕೊಂಡ ಪಾಕ್‌!
ಜಮ್ಮು-ಕಾಶ್ಮೀರದ ವಿಚಾರದಲ್ಲಿ ಜಾಗತಿಕ ಸಮುದಾಯದೆದುರು ತಾನು ಏಕಾಂಗಿಯಾಗಿ ದ್ದೇನೆ ಎಂಬುದನ್ನು ಸ್ವತಃ ಪಾಕಿಸ್ತಾನವೇ ಒಪ್ಪಿ ಕೊಂಡಿದೆ. ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿದೇಶಾಂಗ ಸಚಿವ ಶಾ ಮೆಹ್ಮೂದ್‌ ಖುರೇಷಿ, ‘ಕಾಶ್ಮೀರದ ವಿಚಾರ ಸಂಬಂಧ ಮೂರ್ಖರ ಸ್ವರ್ಗದಲ್ಲಿ ಬದುಕಬೇಡಿ’ ಎಂದು ಪಾಕ್‌ ನಾಗರಿಕರಿಗೆ ಕರೆ ನೀಡಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಭಾರತ ಸರ್ಕಾರದ ನಿರ್ಧಾರದ ವಿರುದ್ಧ ನಮಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಾಗಲೀ, ಇತರೆ ಇಸ್ಲಾಮಿಕ್‌ ರಾಷ್ಟ್ರಗಳಿಂದಾಗಲೀ ಬೆಂಬಲ ಸಿಗುವುದಿಲ್ಲ. ಯುಎನ್‌ಎಸ್‌ಸಿ ಸದಸ್ಯರಿಂದ ಬೆಂಬಲ ಪಡೆಯಬೇಕೆಂದರೆ ಪಾಕಿಸ್ತಾನಿಯರು ಹೊಸ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದೂ ಖುರೇಷಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next