ಮುಂಬೈ:ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವ ಮಹಾರಾಷ್ಟ್ರ ಸರ್ಕಾರ ಅದನ್ನು ಒಂದು ವೇಳೆ ಜುಲೈ ಒಳಗೆ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡದೆ ಹೋದರೆ ನಾವು ಕೂಡಾ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ ಎಂದು ಶಿವಸೇನೆ ಎಚ್ಚರಿಕೆ ನೀಡಿದ ಬೆನ್ನಲ್ಲೇ , ತಮ್ಮ ಪಕ್ಷ(ಬಿಜೆಪಿ) ಮಧ್ಯಂತರ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿರುಗೇಟು ನೀಡಿದ್ದಾರೆ.
ಸಾಲ ಮನ್ನಾ ಮಾಡಬೇಕೆಂದು ಪಟ್ಟು ಹಿಡಿದು ಮಹಾರಾಷ್ಟ್ರ ರೈತರು ನಡೆಸಿದ್ದ ಪ್ರತಿಭಟನೆಯ ಜಟಾಪಟಿಯ ನಡುವೆ ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ವದಂತಿ ಹಬ್ಬಿರುವ ವರದಿ ಹಿನ್ನೆಲೆಯಲ್ಲಿ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ.
ರೈತರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ದೀರ್ಘಕಾಲದ ಸಾಲ ಮನ್ನಾ ಬೇಡಿಕೆಯನ್ನು ಈಡೇರಿಸುವುದಾಗಿ ಸಿಎಂ ಫಡ್ನವೀಸ್ ಅವರು ಭಾನುವಾರ ಘೋಷಿಸಿದ್ದರು.
ರೈತರ ಪ್ರತಿಭಟನೆ ವೇಳೆ ಕೆಲವು ಜನರು(ಶಿವಸೇನೆ) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುವ ಮೂಲಕ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸುವುದಾಗಿ ಹೇಳುತ್ತಿದ್ದರು. ಅದಕ್ಕೆ ನಾವೂ ಕೂಡಾ ಮಧ್ಯಂತರ ಚುನಾವಣೆಗೆ ಸಿದ್ಧ ಎಂಬುದಾಗಿ ಹೇಳಿರುವುದಾಗಿ ಫಡ್ನವೀಸ್ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬೆದರಿಕೆ ಕುರಿತು ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದಾರೆ.
ಒಂದು ವೇಳೆ ಯಾರಾದರೂ ಮಧ್ಯಂತರ ಚುನಾವಣೆಗೆ ಹೋಗಲೇಬೇಕೆಂದು ಪ್ರಚೋದಿಸಿದರೆ, ನಾವು ಅದನ್ನು ಎದುರಿಸುವ ವಿಶ್ವಾಸದಲ್ಲಿದ್ದೇವೆ, ಮಹಾರಾಷ್ಟ್ರದಲ್ಲಿ ನಾವು ಅಧಿಕಾರದ ಕುರ್ಚಿ ಹಿಡಿಯಲು ಶಕ್ತವಾಗಿದ್ದೇವೆ ಎಂದು ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸಿದೆ ಸುದ್ದಿಗಾರರ ಜೊತೆ ಮಾತನಾಡುತ್ತ ಪರೋಕ್ಷ ಸಂದೇಶ ರವಾನಿಸಿದ್ದಾರೆ.