ಬೆಂಗಳೂರು: ನಮ್ಮ ಆದ್ಯತೆ ಕನ್ನಡವೇ ಆಗಿದ್ದು, ನಾವು ಕನ್ನಡ, ಕನ್ನಡಿಗರ ಪರ ಇದ್ದೇವೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಹಿಂದಿ ಹೇರಿಕೆ ಕುರಿತು ಮಾತನಾಡಿದ ಅವರು, ಹಿಂದಿ ಭಾಷಾ ದಿನ ಕುರಿತ ಕಾರ್ಯಕ್ರಮಕ್ಕೆ ಅಮಿತ್ ಶಾ ಅವರು ತೆರಳಿದ ಸಂದರ್ಭದಲ್ಲಿ ಆ ಭಾಷೆಯ ಬಗ್ಗೆ ಮಾತನಾಡುವಾಗ ದೇಶಕ್ಕೊಂದೇ ಸಂವಿಧಾನ, ಕಾನೂನು, ಭಾಷೆ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಇದು ಹಿಂದಿ ಹೇರಿಕೆ ಅಲ್ಲ. ಇದಕ್ಕೆ ಅಪಾರ್ಥ ಕಲ್ಪನೆ ಬೇಡ. ಯಾವುದೇ ಭಾಷೆ ಹೇರಿಕೆ ಸರಿಯಲ್ಲ. ನಾವು ಕನ್ನಡ ಪರ ಇದ್ದೇವೆ. ನನ್ನ ಆದ್ಯತೆ ಕನ್ನಡವೇ ಆಗಿದ್ದು, ಸಹಿಯನ್ನು ಕನ್ನಡದಲ್ಲಿಯೇ ಹಾಕುತ್ತೇನೆ. ನಮ್ಮ ಪ್ರಧಾನಮಂತ್ರಿಗಳು ಎಲ್ಲ ಪ್ರಾದೇಶಿಕ ಭಾಷೆ, ಸಂಸ್ಕೃತಿಗಳಿಗೂ ಆದ್ಯತೆ ನೀಡಿದರೆ ಮಾತ್ರ ದೇಶದ ಸಂಸ್ಕೃತಿ ಉಳಿಯುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಒಂದೇ ಭಾಷೆ ಅಸಾಧ್ಯ : ಜೈರಾಮ್
ಭಾರತದಲ್ಲಿ ಒಂದು ಕಾನೂನು, ಒಂದು ಚುನಾವಣೆ ನಡೆಯಬಹುದು. ಅದರೆ ಒಂದು ದೇಶ, ಒಂದು ಭಾಷೆ ಅಸಾಧ್ಯ ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹೇಳಿದರು. ಅಮಿತ್ ಶಾ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ಬಹು ಸಂಸ್ಕೃತಿ ಇದೆ. ಪ್ರಾದೇಶಿಕವಾಗಿ ಒಂದೊಂದು ಭಾಷೆ ಇದೆ. ಹೀಗಾಗಿ ಒಂದು ದೇಶ-ಒಂದು ಭಾಷೆ ಅಸಾಧ್ಯ ಎಂದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಆರಂಭಿಸುವಾಗ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಗಣ್ಯರನ್ನು ಸ್ವಾಗತಿಸಿದರು. ಆಗ ಒಂದು ವಾಕ್ಯಕ್ಕೇ ನಾವು ಮೂರು ಭಾಷೆ ಬಳಸುತ್ತೇನೆ. ಹೀಗಿದ್ದಾಗ ಒಂದು ಹೇಗೆ ಸಾಧ್ಯ ಎಂದರು.