Advertisement

ನಮಗಿರುವುದು ಒಂದೇ ಭೂಮಿ ; ಪರಿಸರ ಸಂರಕ್ಷಣೆಯು ದೇಶ ಸೇವೆಯ ಪ್ರಧಾನ ಭಾಗ

11:32 AM Jun 05, 2020 | mahesh |

ಹೌದು! ಮನುಷ್ಯರನ್ನು ಸೇರಿಸಿ ಅಸಂಖ್ಯಾಕ ಜೀವರಾಶಿಗಳಿಗಿರುವ ಆಶ್ರಯ ತಾಣ ಭೂಮಿ ಮಾತ್ರ. ಆದರೆ ಭೂಮಿ ಇರುವುದು ತನಗೆ ಮಾತ್ರ ಎಂದು ಮನುಷ್ಯ ಭಾವಿಸಿದ್ದಾನೆ. ವಾಸ್ತವದಲ್ಲಿ ಭೂಮಿಯಲ್ಲಿರುವ ಸಮಸ್ತ ಜೀವರಾಶಿಗಳಲ್ಲಿ ಮನುಷ್ಯನ ಪಾಲು ಕೇವಲ ಶೇ. 0.01ರಷ್ಟು ಮಾತ್ರ. ಆದರೂ ತನ್ನ ಬುದ್ಧಿಶಕ್ತಿಯಿಂದ ಇಡೀ ಜಗತ್ತಿನ ಮೇಲೆ ಅಧಿಪತ್ಯ ಸಾಧಿಸಲು ಮನುಷ್ಯ ಹೊರಟಿದ್ದಾನೆ. ಅದರ ಪರಿಣಾಮವೇ ಪರಿಸರದ ನಾಶ.

Advertisement

ಮನುಷ್ಯನ ಅಳಿವು-ಉಳಿವು ಪ್ರಕೃತಿಯ ಅಳಿವು-ಉಳಿವಿನ ಮೇಲೆ ನಿರ್ಧರಿತವಾಗಿರುತ್ತದೆ ಎಂಬುದನ್ನು ಮನುಷ್ಯ ಮರೆತಿದ್ದಾನೆ. ಮನುಕುಲವು ಮರೆತಿರುವ ಪರಿಸರ ಸಂಬಂಧಿ ನೈತಿಕ ಜವಾಬ್ದಾರಿಗಳನ್ನು ನೆನಪಿಸಿ ಅರಿವು ಮೂಡಿಸುವ ಸಲುವಾಗಿಯೇ ಪ್ರತೀ ವರ್ಷ ನಾವು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಿರುವುದು.

ಆಧುನೀಕರಣ, ಕೈಗಾರೀಕೀಕರಣ, ನಗರೀಕರಣಗಳ ಕಾರಣದಿಂದ ಮಾನವನು ಅರಣ್ಯನಾಶದಲ್ಲಿ ತಲ್ಲೀಣನಾಗಿದ್ದು ಒಂದು ವರದಿಯ ಪ್ರಕಾರ ಪ್ರತಿನಿತ್ಯ 27,000 ಮರಗಳು ಕೇವಲ ಶೌಚಾಲಯದ ಟಿಶ್ಯು ಪೇಪರ್‌ಗಳಿಗಾಗಿ ಕಡಿಯಲಾಗುತ್ತಿದೆ. ಇವೆಲ್ಲವುಗಳ ಪರಿಣಾಮದಿಂದ ಜಾಗತಿಕ ತಾಪಮಾನವು ಏರಿಕೆಯಾಗಿದ್ದು 21ನೇ ಶತಮಾನದ ಅಂತ್ಯದಲ್ಲಿ ಭೂಮಿಯ ತಾಪವು 2.8 ಸೆಲ್ಸಿಯಸ್‌ ಆಗುವ ಸಾಧ್ಯತೆಯಿದೆ ಎಂಬ ಭಯಾನಕ ಮಾಹಿತಿಯೂ ಇದೆ.

ಅಲ್ಲದೆ ಭೂಮಿಯ ಶ್ವಾಸಕೋಶ ಎಂದೇ ಕರೆಯಲ್ಪಟ್ಟಿರುವ ಅಮೇಜಾನ್‌ ಕಾಡುಗಳಲ್ಲಿ ಕಾಣಿಸಿಕೊಂಡ ಬೆಂಕಿಯೂ ಸಹ ಇದೇ ತಾಪಮಾನ ಏರಿಕೆಯ ಪರಿಣಾಮವಾಗಿದೆ. ಅಲ್ಲದೆ ಪರಿಸರ ಸಮತೋಲನದಲ್ಲಿ ಮುಖ್ಯ ಪಾತ್ರವಹಿಸುವಂತಹ ಅನೇಕ ಪ್ರಾಣಿ-ಪಕ್ಷಿಗಳು ಇಂದು ವಿನಾಶದ ಅಂಚಿನಲ್ಲಿವೆ. ಅಭಿವೃದ್ಧಿಯ ಉತ್ತುಂಗದಲ್ಲಿರುವ ಅದೆಷ್ಟೋ ನಗರಗಳು ವಾಸಿಸಲು ಯೋಗ್ಯವಲ್ಲದ ನಗರವಾಗಿ ಮಾರ್ಪಡುತ್ತಿವೆ.

2015ರಲ್ಲಿ ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್‌ ಒಬಮಾರವರು ಗಣರಾಜ್ಯೋತ್ಸವ ದಿನದ ಅಥಿತಿಯಾಗಿ ಭಾರತಕ್ಕೆ ಬಂದಿದ್ದಾಗ ಅವರು ಕೇವಲ ಮೂರು ದಿನ ಮಾತ್ರವೇ ದಿಲ್ಲಿಯಲ್ಲಿ ಉಳಿದುಕೊಂಡಿದ್ದರು. ಆದರೆ ದಿಲ್ಲಿಯಲ್ಲಿ ಅವರು ಮೂರು ದಿನ ಕಳೆದ ಕಾರಣ ಅವರ ಜೀವನದ ಆರು ಗಂಟೆಗಳು ಕಡಿತವಾದವು ಎಂದಿದ್ದರು ಕೇಂಬ್ರಿಡ್ಜ್ ತಜ್ಞರು. ಅದಕ್ಕೆ ಅವರು ಕೊಟ್ಟಿದ್ದ ಕಾರಣ ದಿಲ್ಲಿಯು ವಿಷಪೂರಿತ ಅನಿಲಗಳ ನಗರ ಎಂದಾಗಿತ್ತು.

Advertisement

ಅಲ್ಲದೆ ಅರಂಭದಲ್ಲಿ ಚೀನದಲ್ಲಿ ಆರಂಭವಾಗಿದ್ದ ಶುದ್ಧ ಆಮ್ಲಜನಕ ಪೂರೈಕೆಯ ಉದ್ಯಮವು ಇಂದು ಭಾರತಕ್ಕೂ ಕಾಲಿಟ್ಟಿದೆ. ಇದುವರೆಗೆ ಉಚಿತವಾಗಿ ಪ್ರಕೃತಿದತ್ತವಾಗಿ ದೊರೆಯುತ್ತಿದ್ದ ಆಮ್ಲಜನಕಕ್ಕೆ ಇಂದು ಬೆಲೆಕೊಟ್ಟು ಪಡೆಯಬೇಕಾದ ಪರಿಸ್ಥಿತಿ ಬರುತ್ತಿದೆ ಎಂಬುವುದು ಶೋಚನೀಯವಾದ ವಿಚಾರ. ಒಬ್ಬ ಮನುಷ್ಯನು ದಿನವೊಂದಕ್ಕೆ 550 ಲೀಟರ್‌ ಆಮ್ಲಜನಕವನ್ನು ಸೇವಿಸುತ್ತಾನೆ. ಒಂದು ಲೀಟರ್‌ ಆಮ್ಲಜನಕದ ಇಂದಿನ ಬೆಲೆ ಸುಮಾರು 3000 ರೂ. ಅಂದರೆ ಅದರ ಅರ್ಥ ಒಬ್ಬ ಮನುಷ್ಯ ದಿನವೊಂದಕ್ಕೆ ಸುಮಾರು 16,50,000 ರೂ.ಗಳಷ್ಟು ಬೆಲೆಬಾಳುವ ಆಮ್ಲಜನಕವನ್ನು ಸೇವಿಸುತ್ತಾನೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಅಮ್ಲಜನಕದ ಮೌಲ್ಯ ವಜ್ರಕ್ಕಿಂತಲೂ ಅಧಿಕವಾದುದು.

ಹಾಗಾಗಿ ಮನುಷ್ಯನು ಪ್ರತಿಯೊಂದು ಮರಗಿಡಗಳ ಮಹತ್ವವನ್ನು ಅರಿತು ಜಾಗೃತನಾಗಬೇಕಿದೆ. ತನ್ನಿಂದ ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಪ್ರಾಥಮಿಕ ಕರ್ತವ್ಯವಾಗಿದೆ. ಸಾಮಾನ್ಯ ಜನರಾದ ನಾವು ನಮಗೆ ಸೇರಿದ ಭೂಮಿಯಲ್ಲಿ ಗಿಡವನ್ನು ನೆಟ್ಟು ಪೋಷಿಸಿ ಬೆಳೆಸಬೇಕು. ಮರಗಳನ್ನು ಕಡಿಯುವಂತಹ ಕೃತ್ಯಗಳಿಂದ ದೂರವಿರಬೇಕು. ಪ್ಲಾಸ್ಟಿಕ್‌ ಬಳಕೆಯಿಂದ ದೂರವಿರಬೇಕು. ನಮ್ಮ ಸುತ್ತಮುತ್ತಲಿನ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಧಾರ್ಮಿಕ ಸಂಸ್ಥೆಗಳು ಪರಿಸರ ರಕ್ಷಣೆಯನ್ನು ಧಾರ್ಮಿಕ ಜವಾಬ್ದಾರಿ ಎಂದು ಭೋಧಿಸಬೇಕು. ಮುಖ್ಯವಾಗಿ ಮಕ್ಕಳಲ್ಲಿ ಪರಿಸರದ ಬಗ್ಗೆ ಭಾವನಾತ್ಮಕ ನಂಟು ಬೆಳೆಯುವಂತೆ ಹೆತ್ತವರು ಅವರನ್ನು ಬೆಳೆಸಬೇಕು.

ಅಲ್ಲದೆ ಸರಕಾರಗಳು ಪರಿಸರದ ಮೇಲೆ ಹಾನಿಯುಂಟುಮಾಡುವ ಪ್ರವೃತ್ತಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು.ಪರಿಸರ ಸಂರಕ್ಷಣೆಗಾಗಿ ಸರಕಾರ ತೆಗೆದುಕೊಳ್ಳುವ ಪ್ಲಾಸ್ಟಿಕ್‌ ನಿಷೇಧದಂತಹ ಕ್ರಾಂತಿಕಾರಿ ನಿರ್ಧಾರಗಳಿಗೆ ಸಾಮಾನ್ಯ ಜನತೆ ಬೆಂಬಲ ಸೂಚಿಸಬೇಕು.
ನೆನಪಿಡಿ… ಪರಿಸರ ಸಂರಕ್ಷಣೆಯು ದೇಶಸೇವೆಯ ಪ್ರಧಾನ ಭಾಗವಾಗಿದೆ.

-ಮುಹಮ್ಮದ್‌ ರಿಯಾಝ್
ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next