Advertisement

ನಾವು ನಾಝಿ ಪ್ರೇಮಿಗಳಲ್ಲ! ; ಆರ್ಟಿಕಲ್ 370 ಭಾರತದ ಆಂತರಿಕ ವಿಷಯ

10:05 AM Nov 01, 2019 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜನಜೀವನ ಮತ್ತು ಆ ಕಣಿವೆ ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಪರಾಮರ್ಶಿಸಲು ಮಂಗಳವಾರದಂದು ಶ್ರೀನಗರಕ್ಕೆ ಭೇಟಿ ನೀಡಿದ್ದ ಐರೋಪ್ಯ ಒಕ್ಕೂಟದ ಸಂಸದರ ನಿಯೋಗವು ತಮ್ಮ ಭೇಟಿ ಫಲಪ್ರದವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement

ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತ ತಳೆದಿರುವ ನಿರ್ಧಾರ ಆ ದೇಶದ ಅಂತರಿಕ ನಿಲುವಾಗಿದೆ ಎಂದೂ ಸಹ ಈ ಸಂಸದರ ನಿಯೋಗವು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮಾತ್ರವಲ್ಲದೇ ಕಣಿವೆ ರಾಜ್ಯಕ್ಕೆ ಭೇಟಿ ನೀಡಿರುವ 23 ಜನ ಯುರೋಪಿಯನ್ ಸಂಸದರು ಭಯೋತ್ಪಾದನೆಯ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಈತನ್ಮಧ್ಯೆ ತಮ್ಮನ್ನು ನಾಝಿ ಪ್ರೇಮಿಗಳು ಎಂದು ಕರೆದಿರುವ ಹೈದ್ರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಅವರ ಹೇಳಿಕೆಗೆ ಈ ಸಂಸದರ ನಿಯೋಗ ಗರಂ ಆಗಿದೆ. ‘ನಾವು ನಾಝೀ ಪ್ರೇಮಗಳಲ್ಲ, ಒಂದು ವೇಳೆ ನಾವು ನಾಝೀ ಪ್ರೇಮಿಗಳೇ ಆಗಿದ್ದಿದ್ದಲ್ಲಿ ನಾವು ಜನರಿಂದ ಆಯ್ಕೆಯಾಗುತ್ತಿರಲಿಲ್ಲ. ಈ ರೀತಿಯಾಗಿ ನಮ್ಮನ್ನು ಕರೆದಿರುವುದಕ್ಕೆ ನಾವು ಸಿಟ್ಟುಗೊಂಡಿದ್ದೇವೆ’ ಎಂದು ನಿಯೋಗದಲ್ಲಿದ್ದ ಸಂಸದರೊಬ್ಬರು ಹೇಳಿದ್ದಾರೆ.

ಭಯೋತ್ಪಾದನೆ ಎಂಬುದು ಕೇವಲ ಭಾರತದ ಸಮಸ್ಯೆ ಮಾತ್ರ ಅಲ್ಲ ಅದು ಯುರೋಪಿನ ಸಮಸ್ಯೆಯೂ ಹೌದು ಮತ್ತು ಜಾಗತಿಕ ಸಮಸ್ಯೆಯೂ ಹೌದು. ನಾವಿಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸಲು ಬಂದಿಲ್ಲ, ಬದಲಾಗಿ ಇಲ್ಲಿನ ವಾಸ್ತವ ಚಿತ್ರಣವನ್ನು ತಿಳಿದುಕೊಳ್ಳಲು ಬಂದಿದ್ದೇವೆ ಎಂದು ನಿಯೋಗದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

Advertisement

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಲು ಭಾರತ ಮತ್ತು ಪಾಕಿಸ್ಥಾನ ನಡುವೆ ರಾಜತಾಂತ್ರಿಕ ಮಾತುಕಥೆಗಳಾಗಲಿ ಎಂದೂ ಸಹ ಈ ಸಂಸದರ ನಿಯೋಗ ಅಭಿಪ್ರಾಯಪಟ್ಟಿದೆ.
ಪ್ರಾನ್ಸ್ ದೇಶದ ಸಂಸದರಾಗಿರುವ ಹೆನ್ರಿ ಮಲೊಸ್ಸೆ ಮತ್ತು ಥೈರಿ ಮರಿಯಾನಿ, ಪೋಲಂಡ್ ಸಂಸದ ರಿಝಾರ್ಡ್ ಝೆರ್ನಿಕ್ ಮತ್ತು ಇಂಗ್ಲೆಂಡ್ ಸಂಸದ ಬಿಲ್ ನ್ಯೂಟನ್ ಅವರು ಸಂಸದರ ನಿಯೋಗದ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next