ಮುಂಬೈ : ಸಿನಿಮಾಗಳಲ್ಲಿ ‘ಐಟಂ’ ಸಾಂಗ್ ಪದದ ಬಳಕೆಗೆ ಸ್ವೀಡನ್ ಮೂಲದ ಬಾಲಿವುಡ್ ನಟಿ ಎಲಿ ಅವ್ರಾಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಐಟಂ ಸಾಂಗ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಐಟಂ ಪದದ ಅರ್ಥ ಏನು ? ಇಂತಹ ಹಾಡುಗಳಲ್ಲಿ ಕಾಣಿಸಿಕೊಳ್ಳುವ ನಮ್ಮನ್ನು ಪರೋಕ್ಷವಾಗಿ ‘ಐಟಂ ಗರ್ಲ್’ ಎಂದು ಕರೆದಂತಾಗುತ್ತದೆ. ನನ್ನ ಪ್ರಕಾರ ಇದು ತಪ್ಪು. ನಾವು ‘ಐಟಂ ಗರ್ಲ್’ ಗಳಲ್ಲ. ಇನ್ಮುಂದೆ ಐಟಂ ಬದಲಿಗೆ ‘ವಿಶೇಷ ಹಾಡು’ ಎಂದು ಕರೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬಾರದು ಅಂತಾ ನಾನು ಹೇಳುತ್ತಿಲ್ಲ. ಆದರೆ, ಇಂತಹ ಹಾಡುಗಳಿಗೆ ಐಟಂಗಳೆಂದು ಕರೆಯುವುದಕ್ಕೆ ನನ್ನ ಆಕ್ಷೇಪ ಇದೆ ಎಂದಿದ್ದಾರೆ ಅವ್ರಾಮ್.
ಬಾಲಿವುಡ್ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಐಟಂ ಸಾಂಗ್ ಗಳಿರುವುದು ಕಾಮನ್. ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನ ಸೆಳೆಯುವ ಉದ್ದೇಶದಿಂದ ಸಿನಿಮಾದಲ್ಲಿ ಐಟಂ ಸಾಂಗ್ ಸೇರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ‘ಐಟಂ’ ಸಾಂಗ್ ಗಳಿಗೆ ಪರಭಾಷೆಯ ನಟಿಯನ್ನ ಕರೆ ತಂದು ಕುಣಿಸಲಾಗುತ್ತದೆ.
ಸ್ವೀಡಿಶ್ ಗ್ರೀಕ್ ನಟಿ ಎಲಿ ಅವ್ರಾಮ್ ಹಿಂದಿ ಬಿಗ್ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿದ್ದರು. ನಂತರ ಬಾಲಿವುಡ್ನಲ್ಲಿ ಐಟಂ ಹಾಡುಗಳಿಗೆ ಸೊಂಟ ಬಳುಕಿಸುತ್ತಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಸ್ ಕಿಸ್ಕೋ ಪ್ಯಾರ್ ಕರೂ, ನಾಮ್ ಶಬಾನಾ, ಪೋಸ್ಟರ್ ಬಾಯ್ಸ್, ಮಲಂಗ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಎಲಿ ಅವ್ರಾಮ್ ಬಾಲಿವುಡ್ ನಟ ಅಮೀರ್ ಖಾನ್ ಅವರ ಕೊಯಿ ಜಾನೆ ನ‘ ಚಿತ್ರದ ‘ಹರ್ ಫನ್ ಮೌಲಾ’ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದಾರೆ.