ಮೈಸೂರು: ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ಅವರಾಗಿಯೇ ಪಕ್ಷಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ಬರುವವರಿಗೆ ಸ್ವಾಗತ ಕೋರುತ್ತಿದ್ದೇವೆ. ನಾವಾಗಿ ನಾವೇ ಯಾರನ್ನೂ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಭವಿಷ್ಯದ ದೃಷ್ಟಿಯಿಂದ ನಮ್ಮ ಪಕ್ಷದ ವರ್ಚಸ್ಸು ನೋಡಿ ಅವರೇ ನಿರ್ಧಾರ ಮಾಡುತ್ತಿದ್ದಾರೆ. ಎಷ್ಟು ಜನ ಬರುತ್ತಾರೆ ಎಂದು ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲ, ಸಮಯ, ಘಳಿಗೆ ಎಂಬುದು ಇರುತ್ತದೆ. ಆ ಘಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ ಎಂದರು.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುವ ಪ್ರಯತ್ನ ಮಾಡಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಮಾತುಗಳನ್ನು ನಾನು ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತದೆ. ಈಗ ಅದರ ಬಗ್ಗೆ ಚರ್ಚೆ ಬೇಡ ಎಂದರು.
ಗೃಹಲಕ್ಷ್ಮಿ ಯೋಜನೆ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಈ ವಿಚಾರದಲ್ಲಿ ಯಾವ ರಾಜಕೀಯವೂ ಇಲ್ಲ. ಬೆಳಗಾವಿಯಲ್ಲಿ ಮುಂದೆ ಇನ್ನೊಂದು ಕಾರ್ಯಕ್ರಮ ಮಾಡಲು ಯೋಜಿಸಿದ್ದೇವೆ. ಅಲ್ಲಿ ಎಲ್ಲರದ್ದೂ ಒಮ್ಮತದ ತೀರ್ಮಾನಗಳಿವೆ. ಬೆಳಗಾವಿಯಲ್ಲಿ ನಾವು ಎರಡು ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ಮೈಸೂರಿನಲ್ಲಿ ಅನ್ನ ಭಾಗ್ಯ ಮಾಡುವ ಪ್ಲಾನ್ ಇತ್ತು. ಅಕ್ಕಿ ವಿಚಾರದಲ್ಲಿ ಇನ್ನೊಂದಿಷ್ಟು ಅಡೆತಡೆ ಇದೆ. ಹೀಗಾಗಿ ಗೃಹಲಕ್ಷ್ಮಿಯನ್ನು ಇಲ್ಲಿಂದ ಆರಂಭಿಸುತ್ತಿದ್ದೆವೆ. ಬೆಂಗಳೂರಿನಲ್ಲೂ ಕಾರ್ಯಕ್ರಮ ಮಾಡುವ ಯೋಚನೆ ಮಾಡಿದ್ದೇವೆ. ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂದು ಮೈಸೂರಿಗೆ ಶಿಫ್ಟ್ ಮಾಡಿದ್ದೇವೆ. ಆ.30ರಂದು ಒಂದು ಬಟನ್ ಅದುಮಿದ ಕೂಡಲೇ ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗುತ್ತದೆ. ಅದರ ಮೇಸಜ್ ಅವರ ಫೋನ್ ಗಳಿಗೆ ಬರುತ್ತದೆ. ಎಲ್ಲಾ ಹಣದ ವ್ಯವಸ್ಥೆಯನ್ನು ಬ್ಯಾಂಕ್ ಗಳಿಗೆ ಮಾಡಿದ್ದೇವೆ. ನಮಗೆ ಹಣದ ಕೊರತೆ ಇಲ್ಲ. ಸರ್ವರ್ ಸಮಸ್ಯೆ ಆದರೆ ಒಂದಿಷ್ಟು ಜನರಿಗೆ ಹಣ ಬರುವುದು ತಡವಾಗಬಹುದು ಅಷ್ಟೇ ಎಂದರು.
ಇದನ್ನೂ ಓದಿ:Karnataka Politics; ನಾನು ಲೋಕಸಭೆಗೆ ಹೋಗಲ್ಲ, ನನ್ನ ಮಗನೂ ರಾಜಕೀಯಕ್ಕೆ ಬರಲ್ಲ: ಸೋಮಶೇಖರ್
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಹೇಳುತ್ತಿದ್ದರು. ಈಗ ಅವರದೇ ಮಧ್ಯಪ್ರದೇಶದ ಸರ್ಕಾರ ನಮ್ಮನ್ನು ನೋಡಿ ಗ್ಯಾರಂಟಿ ಸ್ಕೀಮ್ ಜಾರಿ ಮಾಡಿದೆ. ಇದಕ್ಕೆ ಪಿಎಂ ಏನು ಹೇಳುತ್ತಾರೆ? ದೇಶದ ಎಲ್ಲಾ ಕಡೆಯೂ ನಮ್ಮ ಗ್ಯಾರಂಟಿ ಸ್ಕೀಮ್‌ಗಳು ಸದ್ದು ಮಾಡುತ್ತಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.