Advertisement

ಲಾಠಿ ಚಾರ್ಜ್‌-ಗೋಲಿಬಾರ್‌ಗೆ ಜಗ್ಗಲ್ಲ

06:03 PM Aug 27, 2022 | Team Udayavani |

ಗಜೇಂದ್ರಗಡ: ಹೋರಾಟ ಹತ್ತಿಕ್ಕಲು ಮುಂದಾದರೆ ರೈತರು ಜಗ್ಗುವುದಿಲ್ಲ. ಲಾಠಿ ಚಾರ್ಜ್‌, ಗೋಲಿಬಾರ್‌ ಮಾಡುವುದಾದರೆ ಮಾಡಿ. ರೈತರ ಸಮಸ್ಯೆ ಬಗೆಹರಿಯುವವರೆಗೂ ಹಿಂದೆ ಸರಿಯುವ ಮಾತೇ ಇಲ್ಲ. ರೈತರ ಈ ಹೋರಾಟ ರಾಜ್ಯದಲ್ಲಿ ಇನ್ನೊಂದು ಇತಿಹಾಸ ಸೃಷ್ಟಿ ಮಾಡಲಿದೆ ಎಂದು ಮಾಜಿ ಶಾಸಕ ಜಿ.ಎಸ್‌. ಪಾಟೀಲ ಸರ್ಕಾರದ ವಿರುದ್ಧ ಹರಿಹಾಯ್ದರು.

Advertisement

ಪಟ್ಟಣದಲ್ಲಿ ಉಣಚಗೇರಿ ಹದ್ದಿನ ರೈತರು ನಿರಂತರ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಕರೆ ನೀಡಿದ್ದ ಗಜೇಂದ್ರಗಡ ಬಂದ್‌ನಲ್ಲಿ ಪಾಲ್ಗೊಂಡು, ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ರೈತರು ಹೋರಾಟ ನಡೆಸಿದರೆ ಇತಿಹಾಸವೇ ನಡೆದು ಹೋದ ಘಟನೆಗಳಿವೆ. ಕಳೆದ 5 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ಮಾಡುತ್ತಿದ್ದರೂ ಸಹ ಸೌಜನ್ಯಕ್ಕೂ ಕ್ಷೇತ್ರದ ಶಾಸಕರಾಗಲಿ, ಸಚಿವರಾಗಲಿ ಬಂದು ರೈತರ ಸಮಸ್ಯೆ ಆಲಿಸಿಲ್ಲ.

ಹೀಗಿದ್ದಾಗ ರೈತರ ಹೋರಾಟ ಹತ್ತಿಕ್ಕಲು ಪೊಲೀಸರನ್ನು ಬಳಕೆ ಮಾಡಿಕೊಂಡರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದರು. ರೈತರ ಹೋರಾಟವನ್ನು ಹಗುರವಾಗಿ ತೆಗೆದು ಕೊಳ್ಳಬೇಡಿ. ಮೇಲಧಿಕಾರಿಗಳು ಬಂದು ಸಮಸ್ಯೆ ಇತ್ಯರ್ಥಪಡಿಸಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ. ಈಗಾಗಲೇ ಹೆಸ್ಕಾಂ ಎಂಡಿ ಅವರಿಗೆ ಕರೆ ಮಾಡಿ, ಉಣಚಗೇರಿ ರೈತರ ನ್ಯಾಯಸಮ್ಮತ ಹೋರಾಟಕ್ಕೆ ಸ್ಪಂದಿಸಿ ಎಂದು ಸತತ 15 ನಿಮಿಷಗಳ ಕಾಲ ಮನವಿ ಮಾಡಿಕೊಂಡಿದ್ದೇನೆ. ಆದರೆ, ರೈತರ ನೋವಿಗೆ ಸ್ಪಂದಿಸದೇ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡ ದೊಡ್ಡ, ರಾಜಕಾರಣಿಗಳು ಉದ್ಯಮಿಗಳು, ನಿತ್ಯ ನೂರಾರು ಯುನಿಟ್‌ ವಿದ್ಯುತ್‌ ಕದಿಯುತ್ತಾರೆ. ಅಲ್ಲದೇ, ಕೋಟ್ಯಂತರ ರೂ. ಬಿಲ್‌ ಬಾಕಿ ಇಟ್ಟಿದ್ದಾರೆ. ಅಂತಹವರನ್ನು ಸುಮ್ಮನೆ ಬಿಟ್ಟು, ರೈತರಿಗೆ ಕಿರುಕುಳ ನೀಡುವುದು ಇದ್ಯಾವ ನ್ಯಾಯ ಎಂದು ಹರಿಹಾಯ್ದರು.

ಹಾವೇರಿಯಂತೆ ಗೋಲಿಬಾರ್‌ಗೆ ಹೆದರಲ್ಲ
ಕಳೆದ 5 ದಿನಗಳಿಂದ ರೈತರು ತಾಳ್ಮೆಯಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರ ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸರನ್ನು ಉಪಯೋಗಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಈ ಹಿಂದೆ ಹಾವೇರಿಯಲ್ಲಿ ರೈತರು ನಡೆಸಿದ್ದ ಹೋರಾಟದ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಲ್ಲದೇ, ಗೋಲಿಬಾರ್‌ ಕೂಡ ಮಾಡಿದ್ದರು. ನೀವು ಲಾಠಿ ಚಾರ್ಜ್‌ ಮಾಡಿದರೂ, ಗೋಲಿಬಾರ್‌ ಮಾಡಿದರೂ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನೂ ರೈತನ ಮಗನೇ
ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ಕೆಲವು ಅಪ್ರಬುದ್ಧರು ರಾಜಕೀಯ ಲೇಪನ ಬಳಿಯುತ್ತಿದ್ದಾರೆ. ರೈತರ ಹೋರಾಟದ ದಿಕ್ಕು ತಪ್ಪಿಸಲು ಇಂತಹ ವಾತಾವರಣದ ಸೃಷ್ಟಿಸುತ್ತಿದ್ದಾರೆ. ನಾನು ಕಾಂಗ್ರೆಸ್‌ ಪಕ್ಷವಾಗಿ ಬೆಂಬಲ ನೀಡಲು ಬಂದಿಲ್ಲ. ಬದಲಾಗಿ ನಾನೂ ಒಬ್ಬ ರೈತನ ಮಗನೇ. ಹೀಗಾಗಿ ರೈತ ಸಮುದಾಯದ ಮೇಲಿನ ಕಾಳಜಿಯಿಂದಲೇ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇನೆ. ಅವರ ಬೇಡಿಕೆ ಈಡೇರುವವರೆಗೂ ಅವರ ಬೆನ್ನಿಗೆ ನಿಂತು ನಾನೂ ಸಹ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಜಿ.ಎಸ್‌. ಪಾಟೀಲ ವಿರೋಧಿಗಳಿಗೆ ಛಾಟಿ ಬೀಸಿದರು. ಇದಕ್ಕೂ ಮುನ್ನ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವಿವಿಧ ವೃತ್ತದ ಮೂಲಕ ಸಂಚರಿಸಿ ಶ್ರೀ ಕಾಲಕಾಲೇಶ್ವರ ವೃತ್ತಕ್ಕೆ ತಲುಪಿತು. ಅಲ್ಲಿ ರೈತರು ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next