Advertisement
ಕಣ್ ಮುಚ್ಚಿ ಒಮ್ಮೆ ಯೋಚಿಸಿ, ನೀವು ಹೇಗಿರಬೇಕಿತ್ತು? ಹೇಗಿರಬಾರದಿತ್ತು? ನಿಮ್ಮಲ್ಲಿ ಏನು ಬದಲಾವಣೆ ಇದ್ದರೆ ಚೆಂದ ಅನ್ನಿಸುತ್ತಿತ್ತು? ಪಟ್ಟಿ ಮಾಡಿ ಎಂದರೆ ನಿಮ್ಮ ಪಟ್ಟಿಯಲ್ಲಿ ಕಡಿಮೆಯೆಂದರೂ ಐದಾರು ವಿಷಯಗಳಂತೂ ಇದ್ದೇ ಇರುತ್ತವೆ. ಅಲ್ಲವೇ? ಸೌಂದರ್ಯದ ಪರಿಭಾಷೆಗೆ ಮಾನದಂಡಗಳು ಯಾವುವು? ಎನ್ನುವ ಪ್ರಶ್ನೆಗೆ ನಿರ್ದಿಷ್ಟ ಉತ್ತರವಂತೂ ಇಲ್ಲವೇ ಇಲ್ಲ. ಆದರೆ ನಮ್ಮ ಮಾನದಂಡಗಳು ಮಾತ್ರ ಕಾಲಕಾಲಕ್ಕೆ ಬದಲಾಗುತ್ತಲೇ ಹೋಗುತ್ತಿವೆ. ಅಷ್ಟೇ ಅಲ್ಲ, ಅವು ನಮ್ಮ ಮಾನಸಿಕ ಆರೋಗ್ಯವನ್ನೂ ಕಸಿದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಮಾನ ಮನಸ್ಕರು, ಒಡಹುಟ್ಟಿದವರು, ಕುಟುಂಬ, ಗೆಳೆಯರು, ಸಮಾಜ, ಸಾಮಾಜಿಕ ಜಾಲತಾಣಗಳು ಹೀಗೆ ಪ್ರಭಾವ ಬೀರುವ ಮಾಧ್ಯಮಗಳು ಅನೇಕ. ಆದರೆ ಭಯ ಹುಟ್ಟಿಸುತ್ತಿರುವುದು ಅದನ್ನೇ ಹಚ್ಚಿಕೊಂಡು ಆರೋಗ್ಯವನ್ನೂ, ದುಡ್ಡನ್ನೂ ಕಳೆದುಕೊಳ್ಳುವ ಜನರ ಬಗ್ಗೆ.
Related Articles
Advertisement
ತಿಳಿದೂ ತಿಳಿದೂ ತಪ್ಪು ಮಾಡ್ತೇವೆ!
ಯೋಚಿಸಿ ನೋಡಿ, ಸಣ್ಣದೊಂದು ಮೊಡವೆ ಶುರುವಾದ ಕೂಡಲೇ ಪಿಂಪಲ್ ಕಡಿಮೆಯಾಗಲು ಕ್ರೀಮ್ ಹಚ್ಚುವ ನಮಗೂ, ಅದರಿಂದ ಬೇಗ ಕಡಿಮೆಯಾಗಲಾರದು ಎಂದು ತಿಳಿದಿರುತ್ತದೆ. ಅದೆಷ್ಟೋ ವರ್ಷಗಳಿಂದ ಫೇರ್‌ನೆಸ್ ಕ್ರೀಮ್ ಹಚ್ಚಿದರೆ ಬಣ್ಣ ಬದಲಾಗುವುದಿಲ್ಲವೆಂದು ತಿಳಿದೂ ನಾವು ಅದನ್ನು ಹಚ್ಚುವುದನ್ನು ನಿಲ್ಲಿಸಿಯೇ ಇಲ್ಲ! ಇನ್ಯಾವುದೋ ಶ್ಯಾಂಪೂ ಹಚ್ಚುವುದರಿಂದ ಕೂದಲು ಉದ್ದವಾಗುವುದಿಲ್ಲ ಎಂದು ಗೊತ್ತಿಲ್ಲವೇ? ಕೇಳಬೇಡಿ, ಆದರೂ ನಾವು ಅದನ್ನೇ ಹಚ್ಚುತ್ತೇವೆ. ಇದರಿಂದ ಬೆಳೆದದ್ದು ತಲೆಕೂದಲಲ್ಲ, ಬದಲಿಗೆ ಅದೇ ರೀತಿಯ ಉತ್ಪನ್ನ ತಯಾರಿಸುವ ಮಾರುಕಟ್ಟೆ ಅಷ್ಟೇ. ಒಂದು ಸಣ್ಣ ಉದಾಹರಣೆ: ಚಿಕ್ಕಮಗಳೂರು-ಬೇಲೂರಿನ ನಡುವೆ ಒಂದು ಭಾಗದಲ್ಲಿ ತಲೆಗೆ ಹಚ್ಚುವ ಎಣ್ಣೆ ಮಾರಾಟ ಮಾಡುತ್ತಾರೆ. ಅವರ ಜಾಹೀರಾತಿನ ಮುಖ್ಯ ಅಂಶ, ಅದನ್ನು ಮಾರಾಟ ಮಾಡುವವರ ಉದ್ದದ ಕೂದಲು. ಬೇಡವೆಂದವರೂ ಅವರ ಕೂದಲನ್ನು ನೋಡಿ ತೈಲ ಕೊಳ್ಳುತ್ತಾರೆ. ಕೂದಲು ಬಂತಾ? ಉತ್ತರ ನಿಮಗೇ ಬಿಟ್ಟಿದ್ದು.
ನಿಜಕ್ಕೂ ನೀವು ಯಾರ ಹಾಗೆ ಕಾಣಬೇಕು? ಯಾರ ಹಾಗೆ ಇರಬೇಕು? ವೈಜ್ಞಾನಿಕವಾಗಿ ಉತ್ತರವಿಷ್ಟೇ. ನಿಮ್ಮ ಜೀನ್ಸ್ ಅಂದರೆ ವಂಶವಾಹಿ ಅದನ್ನು ನಿರ್ಧರಿಸುತ್ತೆ. ನಮಗದರಿಂದ ತೃಪ್ತಿಯಿಲ್ಲ. ಅಲ್ಲೆಲ್ಲೋ ಇರುವ ಹೀರೋ ಹಾಗೆ ಸಿಕ್ಸ್ ಪ್ಯಾಕ್ಸ್, ನಟಿಮಣಿಯ ಹಾಗೆ ಶೇಪ್, ಮೂಗು, ಕಣ್ಣುಗಳು ಎಲ್ಲವೂ ಬೇಕು. ಇದಕ್ಕೆ ತಾಳ ಮೇಳೈಸುವಂತೆ ಮಾತನಾಡುವ ಜನಗಳು. ಇನ್ನೂ ಸಾಕು ಎನ್ನಿಸಲಿಲ್ಲವೇ?
ಗಟ್ಟಿಯಾಗಿ ಹೇಳಿ, ನಾನಿರೋದೇ ಹೀಗೆ!
ಹೌದು, ನೀವು ಹೇಗಿದ್ದೀರಿ ಎನ್ನುವುದನ್ನು ಮೊದಲು ಒಪ್ಪಿಕೊಳ್ಳಿ. ನಿಮ್ಮ ಬಣ್ಣ ಯಾವುದೇ ಇರಬಹುದು, ಗಾತ್ರ ಏನೇ ಇರಬಹುದು, ಎತ್ತರ, ಕುಳ್ಳಿ, ಡುಮ್ಮ, ಹಂಚಿಕಡ್ಡಿ, ಉದ್ದ ದೋಟಿ, ಕರಿಯಪ್ಪ, ಹೀಗೆ ಇನ್ನು ಏನೇ ಆಗಿರಲಿ, ಸ್ವೀಕರಿಸಿ. ಇರುವುದನ್ನು ಒಪ್ಪಿಕೊಳ್ಳಲೇನು ಸಮಸ್ಯೆ? ಒಮ್ಮೆ ನೀವು ನಿಮ್ಮನ್ನು ಒಪ್ಪಿಕೊಂಡಿರೆಂದರೆ ಬಾಕಿಯವರನ್ನು ಒಪ್ಪಿಸಲು, ಸುಮ್ಮನಿರಿಸಲು ಸುಲಭ.
ವಿದ್ಯಾಬಾಲನ್ ಸಂದರ್ಶನದಲ್ಲಿ ಒಂದು ಮಾತು ಹೇಳಿದ್ದರು: “ಅದೇನೋ ಗೊತ್ತಿಲ್ಲ, ನಮ್ಮವರಿಗೆ ನಾವು ಸಿಕ್ಕರೆ ಆಡುವ ಮೊದಲ ಮಾತು ಎಷ್ಟು ದಪ್ಪ ಆದೆ ಅಥವಾ ಸಣ್ಣ ಆದೆ ಎಂದು. ಆದರೆ ಹೇಗಿದ್ದಿ, ಎಷ್ಟು ನೆಮ್ಮದಿಯಾಗಿದ್ದಿ ಎಂದು ಯಾರೂ ಪ್ರಶ್ನಿಸುವುದಿಲ್ಲ’ ಎಂದು. ಇದು ಸತ್ಯ ಕೂಡ. ಸಣ್ಣ ಖುಷಿಗಾಗಿ ಹಂಚಿಕೊಳ್ಳುವ ಫೋಟೋ ನೋಡಿದ ಕೂಡಲೇ ಜನರ ಕಾಮೆಂಟ್ ಶುರು. ಅದು ಬರೀ ಬಾಡಿ ಶೇಮಿಂಗ್ ಆದ, ಆದರೆ ಅದನ್ನು ಒಪ್ಪಿಕೊಳ್ಳದ ನಾನಾ ವಿಧದ ಪ್ರಶ್ನೆಗಳು. “ಈಗ ಡಯಟ್ ಮಾಡ್ತಾ ಇಲ್ವಾ? ಯಾಕ್ರೀ ಕೂದಲು ಇಷ್ಟು ಸಣ್ಣ ಆಗಿದೆ? ನನ್ನ ಮಗ ಏನು ತಿಂದ್ರೂ ದಪ್ಪ ಆಗಲ್ಲ ರೀ, ನಿಮ್ಮ ಮಗ ಯಾಕೆ ಅಷ್ಟು ದಪ್ಪ? ಅವನಿಗೆ ಈ ಪೌಡರ್ ಕೊಡಿ, ಸಣ್ಣ ಆಗ್ತಾನೆ…’ ದಯವಿಟ್ಟು ಇಂಥ ಅಧಿಕ ಪ್ರಸಂಗದ, ನಿಮ್ಮ ವೈಯಕ್ತಿಕ ಎನ್ನಿಸಬಹುದಾದ, ನಿಮ್ಮ ಸೌಂದರ್ಯ ಅಥವಾ ಅಪಿಯರೆನ್ಸ್ ಬಗ್ಗೆ ಆಡುವ ಮಾತುಗಳಿಗೆ, ಮಾಡುವ ಕಾಮೆಂಟ್‌ಗಳಿಗೆ ಒಂದರೆಕ್ಷಣ ಸಹ ಗಮನ ಕೊಡಬೇಡಿ, ಬೆಲೆ ನೀಡುವ ಅಗತ್ಯವೂ ಇಲ್ಲ. ಸರಳವಾಗಿ ಹೇಳುವುದಾದರೆ ಸುಲಭವಾಗಿ ಇಂಥದ್ದನ್ನು ನಿರ್ಲಕ್ಷಿಸಿಬಿಡಿ. ಮನಸಿಂದ ಸಹ!
ನಿಜಕ್ಕೂ ಚೆಂದವಾಗಲೇಬೇಕು ಎನ್ನುವ ಆಸೆ ಇದ್ದರೆ ಸಣ್ಣದೊಂದು ಸಲಹೆ. ನೀವು ಚೆಂದ ಮಾಡಿಕೊಳ್ಳಬೇಕಾದದ್ದು ನಿಮ್ಮ ವ್ಯಕ್ತಿತ್ವವನ್ನೇ ಹೊರತು ದೇಹವನ್ನೆಲ್ಲ. ಒಪ್ಪಿಸಬೇಕಾದದ್ದು ನಿಮ್ಮನ್ನೇ ಹೊರತು ಪರರನ್ನಲ್ಲ. ಯಾವುದಕ್ಕೂ ದುಡ್ಡು, ಸಮಯ, ನೆಮ್ಮದಿ ಕಳೆದುಕೊಳ್ಳುವ ಮೊದಲು ಒಮ್ಮೆ ಕನ್ನಡಿ ಮುಂದೆ ನಿಂತು ನಿಮ್ಮನ್ನು ನೀವು ನೋಡಿಕೊಂಡು ಸಂಭ್ರಮಿಸಲು ಕಲಿಯಿರಿ. ಎಷ್ಟೋ ಜನರು ಅದೇನೇನೋ ಸಮಸ್ಯೆಗಳಿಂದ ಬಳಲುವಾಗ ಎಲ್ಲವೂ ಸರಿಯಿದ್ದ ನಾವು ಇನ್ನೇನನ್ನೋ ಬೆನ್ನುಹತ್ತಿ ಯಾಕೆ ಹೋಗಬೇಕು? ಫಿಟ್ ಆಗಿರೋದು ಎಂದರೆ ಸಣ್ಣ ಇರುವುದಷ್ಟೇ ಅಲ್ಲ, ಸದೃಢರಾಗಿರುವುದು. ಆರೋಗ್ಯವಂತ ಮನಸ್ಸು, ದೇಹ ನಿಮ್ಮದಾದರೆ ಅದಕ್ಕಿಂತ ಇನ್ನೇನು ಬೇಕು? ನಗುವನ್ನು ಆಯುಧ ಮಾಡಿಕೊಂಡು ನೆಮ್ಮದಿಯಿಂದ ಹೇಗಿದ್ದೀರೋ ಹಾಗೆಯೇ ಬದುಕನ್ನು ಸಂಭ್ರಮಿಸಿ!
ರೂಪವಲ್ಲ, ಗುಣ ಮುಖ್ಯ…:
ಮನೆಯಲ್ಲಿಯೇ ಆಗುವ ವಿದ್ಯಮಾನಗಳ ಬಗ್ಗೆಯೂ ಖಚಿತವಾಗಿರಿ. “ಹೀಗಿದ್ರೆ ಮದುವೆ ಆಗಲ್ಲ, ನೀನು ಸಣ್ಣ ಆಗು, ಹುಡುಗನಿಗೆ ಬೊಕ್ಕ ತಲೆ, ಅದ್ಕೆ ಅವ ಬೇಡ. ಹುಡುಗಿ ಡುಮ್ಮಿ, ಅವಳನ್ನು ಒಪ್ಪಬೇಡ…’ ಇಂಥ ಮಾತುಗಳನ್ನು ಕೇಳಿದಾಗ ಒಮ್ಮೆ ಯೋಚಿಸಿ: ಮದುವೆಯಾದಾಗ ಅಥವಾ ಆಗುವಾಗ ಇರುವ ಹಾಗೆ ನಾವೇನೂ ಕೊನೆಯವರೆಗೆ ಇರುವುದಿಲ್ಲ ಅಂದಮೇಲೆ, ಬೇಕಾಗಿರುವುದು ರೂಪದ ಲಕ್ಷಣವಲ್ಲ. ಒಳ್ಳೆಯ ಗುಣಲಕ್ಷಣವಷ್ಟೇ. ಅದನ್ನು ಮೊದಲು ನೀವು ಮನವರಿಕೆ ಮಾಡಿಕೊಂಡು ಬೇರೆಯವರಿಗೂ ಹೇಳಿ. ಪ್ರೀತಿಯ ಗಟ್ಟಿತನವೆಂತಹದ್ದು ಎಂದರೆ ಸ್ಮಶಾನವಾಸಿಯಾದ ಶಿವನನ್ನು ಪರ್ವತರಾಜನ ಕುಮಾರಿ ಅಂದಚೆಂದದ ಹೊರತಾಗಿಯೂ ವರಿಸಿದ ಹಾಗೆ. ಕಪ್ಪಗಿರುವ ಕೃಷ್ಣ ಚೆಂದ, ಕಾಳಿ ಮಾತೆಯೂ ಕಪ್ಪೇ. ಇರುವ ರೂಪವನ್ನು ಒಪ್ಪ ಮಾಡಿಕೊಂಡರೆ ಅದಕ್ಕಿಂತ ಇನ್ನೇನು ಬೇಕು?
ನಾನು ನನ್ನಿಷ್ಟ, ನಿಮಗೇನ್ರಿ ಕಷ್ಟ?:
ಕೆಲವರು ಬಡಪೆಟ್ಟಿಗೆ ಸುಮ್ಮನೆ ಆಗುವುದೂ ಇಲ್ಲ. ಒಂದಿಲ್ಲೊಂದು ಉಪದೇಶ ಕೊಡುತ್ತಲೇ ಇರುತ್ತಾರೆ. ಅಂಥವರಿಗೆ ನೀವು ಗಟ್ಟಿಯಾಗಿ ಮಾತನಾಡಿ ಉತ್ತರಿಸಬೇಕಾಗುತ್ತದೆ. ಸಂಬಂಧ ಹಾಳಾಗುತ್ತದೆ ಅಂತಲೋ ಅಥವಾ ಇನ್ನೇನೋ ಮುಲಾಜಿಗೆ ಬಿದ್ದು ನೀವು ನೋವು ಪಡುವುದಕ್ಕಿಂತ ಇದ್ದದ್ದು ಇದ್ದಹಾಗೆ ಗಟ್ಟಿಯಾಗಿ ಹೇಳಿ: “ಹೌದು, ನಾ ಇರೋದು ಹೀಗೆ, ನಿಮಗೇನು ಸಮಸ್ಯೆ?’ ಒಂದೆರಡು ಸಲ ಹೀಗೆ ಹೇಳಿದರೆ ಸಾಕು, ಮತ್ಯಾರೂ ನಿಮ್ಮ ತಂಟೆಗೆ ಬರಲಾರರು.