ಮುಂಬೈ : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬುಧವಾರದಿಂದ (ಏಪ್ರಿಲ್ 14) ಜಾರಿಗೆ ಬರುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಲಾಗುತ್ತಿದ್ದು, ನಾಳೆಯಿಂದ ರಾಜ್ಯಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ.
ಇಂದು ಸಂಜೆ ಮಾಧ್ಯಮಗೋ಼ಷ್ಠಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು, ಕೋವಿಡ್‍ಗೆ ನಿಯಂತ್ರಣಕ್ಕಾಗಿ ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸೆಕ್ಷನ್ 144 ಜಾರಿ ಮಾಡಲಾಗುತ್ತಿದೆ. ಆದರೆ, ಇದನ್ನು ಲಾಕ್‍ಡೌನ್ ಎಂದು ಹೇಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ನಿರಂತರವಾಗಿ ನಮ್ಮ ಆರೋಗ್ಯ ಮೂಲ ಸೌಕರ್ಯವನ್ನು ನವೀಕರಣಗೊಳಿಸುತ್ತಿದ್ದೇವೆ. ರಾಜ್ಯದಲ್ಲಿ ಆಮ್ಲಜನಕದ (ವೆಂಟಿಲೆಟರ್) ಕೊರತೆ ಇದೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹಾಗೂ ಡೆಮ್‌ಡಿಸಿವಿರ್ ಬೇಡಿಕೆಯೂ ಹೆಚ್ಚಾಗಿದೆ. ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಆಮ್ಲಜನಕ ಪೂರೈಕೆಯಲ್ಲಿ ನೆರವು ನೀಡುವಂತೆ ವಿನಂತಿಸಲು ಪ್ರಧಾನಿಯೊಂದಿಗೆ ಮಾತನಾಡುತ್ತೇನೆ. ಆಮ್ಲಜನಕದ ಕೊರತೆ ಜತೆಗೆ ಅಗತ್ಯ ಪ್ರದೇಶಗಳಿಗೆ ಸಾಗಾಣಿಕೆ ಕೂಡ ತಲೆನೋವಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ವಾಯು ಸೇನೆ ನೆರವನ್ನು ಕೇಳಿದ್ದೇನೆ ಎಂದರು.
ಮಹಾರಾಷ್ಟ್ರದಲ್ಲಿ ಇಂದು 60,212 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ ವರ್ಷದ ನವೆಂಬರ್-ಡಿಸೆಂಬರ್ ವರೆಗೂ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿತ್ತು. ಮುಂಬೈ, ಪುಣೆ, ವಿದರ್ಭಾ ಪ್ರದೇಶಗಳಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ. ಲಸಿಕೆಯನ್ನು ಹೆಚ್ಚೆಚ್ಚು ಕೊಡುವುದೇ, ಕೋವಿಡ್ ನಿಯಂತ್ರಿಸಲು ಪ್ರಭಾವಿ ಮಾರ್ಗವಾಗಿದೆ. ಸಂಘಟಿತವಾಗಿ ರೋಗದ ವಿರುದ್ಧ ಎಲ್ಲರೂ ಹೋರಾಡಬೇಕು ಎಂದು ಠಾಕ್ರೆ ಹೇಳಿದ್ದಾರೆ.