Advertisement

ನಮಗೂ ಒಳ್ಳೇ ಟೈಮ್‌ ಬರುತ್ತೆ!

06:00 AM Oct 30, 2018 | |

ಈ ಶಾಲೆಯಲ್ಲಿ ಚಿಲಿಪಿಲಿಗುಟ್ಟುವುದು ಜಗದ ಅರಿವಿಲ್ಲದೆ ಬದುಕುವ ಮಕ್ಕಳು. ತಮ್ಮದೇ ಆದ ಹಾವಭಾವದಿಂದ ಏನನ್ನೋ ಪಿಸುಗುಡುತ್ತಿರುತ್ತಾರೆ. ಇವರಿಗೆ ಅಪ್ಪ- ಅಮ್ಮ ಇಲ್ಲ. ಬೆಲ್‌ ಬಾರಿಸಿದ ಕೂಡಲೇ ಮನೆಗೆ ಓಡಿಯೂ ಹೋಗುವುದಿಲ್ಲ. ಈ ಶಾಲೆಯೇ ಅವರಿಗೆ ಮನೆ, ಸರ್ವಸ್ವ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವೈಶಿಷ್ಟವಿದು…

Advertisement

 ಶಾಲೆ ಅಂದ ಕೂಡಲೆ, ಒಂದು ಸುಂದರ ಚಿತ್ರಣ ಕಣ್ಮುಂದೆ ಸರಿದಾಡುತ್ತೆ. ಮಕ್ಕಳು, ಅವರ ಆಟೋಟ, ನಲಿದಾಟದ ಚಿಲಿಪಲಿ ತುಂಬಿರುವ ಅಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿರುತ್ತದೆ. ರಸ್ತೆಯಲ್ಲಿ ಹೋಗುತ್ತಿದ್ದರೆ, ಶಾಲೆಯ ಕಾಂಪೌಂಡಿನೊಳಗೆ ಇಣುಕಿ ನೋಡುವ ಮನಸ್ಸಾಗುತ್ತದೆ. ಬೆಲ್‌ ಬಾರಿಸಿತು ಎಂದಾಕ್ಷಣ, ಅಲ್ಲೊಂದು ಜಾತ್ರೆಯ ದೃಶ್ಯಾವಳಿ ಕಾಣಿಸುತ್ತೆ. ಮಕ್ಕಳನ್ನು ಕರೆದೊಯ್ಯಲು ಅಪ್ಪ- ಅಮ್ಮ, ಗೇಟಿನ ಬಳಿ ಕಾಯುತ್ತಿರುತ್ತಾರೆ. “ಡ್ರು ಡ್ರು, ಡುಗ್‌ ಡುಗ್‌… ಕೀಂಕ್‌ ಕೀಂಕ್‌’ ಎನ್ನುವ ಸದ್ದು.

  ಆದರೆ, ಇಲ್ಲೊಂದು ಶಾಲೆ ಇದೆ. ಇಲ್ಲಿ ಚಿಲಿಪಿಲಿಗುಟ್ಟುವುದು ಜಗದ ಅರಿವಿಲ್ಲದೆ ಬದುಕುವ ಮಕ್ಕಳು. ತಮ್ಮದೇ ಆದ ಹಾವಭಾವದಿಂದ ಏನನ್ನೋ ಪಿಸುಗುಡುತ್ತಿರುತ್ತಾರೆ. ಇವರಿಗೆ ಅಪ್ಪ- ಅಮ್ಮ ಇಲ್ಲ. ಬೆಲ್‌ ಬಾರಿಸಿದ ಕೂಡಲೇ ಮನೆಗೆ ಓಡಿಯೂ ಹೋಗುವುದಿಲ್ಲ. ಈ ಶಾಲೆಯೇ ಅವರಿಗೆ ಮನೆ, ಸರ್ವಸ್ವ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವೈಶಿಷ್ಟವಿದು.

  1991ರಲ್ಲಿ ಲಯನ್ಸ್‌ ಚಾರಿಟೇಬಲ್‌ ಟ್ರಸ್ಟ್‌, ಈ ಶಾಲೆಯನ್ನು ಆರಂಭಿಸಿತು. ಬಾಗಲಕೋಟೆ, ಸಿಂಧನೂರ್‌, ಕೊಪ್ಪಳ, ಯಲಬುರ್ಗ, ಬಳ್ಳಾರಿ, ರಾಯಚೂರು ಭಾಗಗಳ ಬುದ್ಧಿಮಾಂದ್ಯ ಮಕ್ಕಳು, ಇಲ್ಲಿ ಶಿಕ್ಷಣದ ಮೂಲಕ ದೇವರನ್ನು ಕಾಣುತ್ತಿದ್ದಾರೆ. ಹಸಿದ ಮಕ್ಕಳು ಊಟ ಕಂಡಿದ್ದಾರೆ. ಆಶ್ರಯವಿಲ್ಲದೇ, ಬೀದಿಯಲ್ಲಿದ್ದವರು ಹಾಸ್ಟೆಲ್‌ನ ಬೆಚ್ಚನೆ ವಾತಾವರಣದಲ್ಲಿ ಸುರಕ್ಷಿತರಾಗಿದ್ದಾರೆ.

  ಮತ್ತೆ ಕೆಲವು ಪೋಷಕರೇ ಈ ಶಾಲೆಗೆ ತಮ್ಮ ಮಾನಸಿಕ ಅಸ್ವಸ್ಥ ಮಕ್ಕಳನ್ನು ಸೇರಿಸುವುದೂ ಉಂಟು. ಆ ಮಕ್ಕಳ ವರ್ತನೆ, ನಡವಳಿಕೆ, ಜೀವನಶೈಲಿ, ಅವರ ಅಂತರಾಳವನ್ನು ಅರಿಯದ ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಬಿಡುತ್ತಾರೆ. ಪೋಷಕರಿಗೆ ಭಾರವಾದ ಮಕ್ಕಳು, ಇಲ್ಲಿನ ಶಿಕ್ಷಕರ ಕಾಳಜಿಯಲ್ಲಿ ಲವಲವಿಕೆಯಿಂದ ಬೆಳೆಯುತ್ತಾರೆ.

Advertisement

  ಇಲ್ಲಿಗೆ ಸೇರುವ ಮಕ್ಕಳು ಸುಮ್ಮನೆ ಟೈಂಪಾಸ್‌ ಮಾಡಿಕೊಂಡು ಇರುವುದೂ ಇಲ್ಲ. ಬೌದ್ಧಿಕ ನ್ಯೂನತೆಗಳನ್ನು ಮೀರುವ ಪ್ರಯತ್ನ ಮಾಡುತ್ತಾರೆ. ಏನಾದರೂ ಹೊಸತೊಂದನ್ನು ಕಲಿಯುತ್ತಾ ಇರುತ್ತಾರೆ. ಬೌದ್ಧಿಕ ಮಟ್ಟದಲ್ಲಿ ಸುಧಾರಣೆ ಕಂಡ ವಿದ್ಯಾರ್ಥಿಗಳಿಗೆ ಸರ್ಕಾರ, ಹತ್ತನೇ ತರಗತಿಯ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದು, ಇದರಲ್ಲಿ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಯಶಸ್ಸು ಕಂಡಿದ್ದಾರೆ ಎನ್ನುವುದು ಒಂದು ಹೆಮ್ಮೆ. ಅವರೆಲ್ಲರೂ ಉದ್ಯೋಗ ಕಂಡುಕೊಂಡಿರುವುದು ಇನ್ನೊಂದು ಸಿಹಿಸಂಗತಿ.

  ಈ ವಿದ್ಯಾರ್ಥಿಗಳು ಪಾಠಕ್ಕೆ, ಶಿಸ್ತಿನ ಕಲಿಕೆಗಷ್ಟೇ ಸೀಮಿತವಾಗಿಲ್ಲ. ರನ್ನಿಂಗ್‌, ವಾಕಿಂಗ್‌ ಮುಂತಾದ ಕ್ರೀಡೆಗಲ್ಲೂ ಸೈ ಎನಿಸಿಕೊಂಡು, ಸಾಕಷ್ಟು ಪ್ರಶಸ್ತಿಗಳಿಗೆ ಚುಂಬಿಸಿದವರು. ಇಲ್ಲಿರುವ 7 ಮಂದಿ ಟೀಚರ್‌ಗಳಿಗೆ ಈ ಮಕ್ಕಳಿಗೆ ಪಾಠ ಹೇಳಿಕೊಡುವುದೇ ಒಂದು ಖುಷಿಯ ಸಂಗತಿ. ಯಾರಧ್ದೋ ಅಸಹಾಯಕ ಮಕ್ಕಳಿಗೆ ಜೀವನ ಕಟ್ಟಿಕೊಡುವ ಆತ್ಮತೃಪ್ತಿ ಅವರದ್ದು.

   ಎಲ್ಲರಂತೆ ನಾವೂ ಸ್ವತಂತ್ರ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಈ ಮಕ್ಕಳಲ್ಲಿದೆ. ದುರಂತವೆಂದರೆ, ಇಲ್ಲಿ ಇವರಿಗೆ ಆಟದ ಮೈದಾನವಿಲ್ಲ. ಕೊಠಡಿ ವ್ಯವಸ್ಥೆಯೂ ಸರಿಯಾಗಿಲ್ಲ. ಶೌಚಾಲಯವೂ ಇಲ್ಲ. ಹೀಗಿದ್ದೂ ಈ ಮಕ್ಕಳು ಇಲ್ಲಿ ಶಿಕ್ಷಣದ ಬೆಳಕನ್ನು ಕಾಣುತ್ತಿದ್ದಾರೆಂದರೆ, ನಿಜಕ್ಕೂ ಹೆಮ್ಮೆಯ ಸಂಗತಿ.

ಇಲ್ಲಿ ಪಾಠ ಮಾಡಲು ನಾವು ಪುಣ್ಯ ಮಾಡಿದ್ದೆವು ಅಂತನ್ನಿಸುತ್ತೆ. ಪ್ರತಿ ವಿಚಾರಕ್ಕೂ ಇಲ್ಲಿ ತಾಳ್ಮೆಯೇ ಪ್ರಧಾನವಾಗಿರುತ್ತೆ. ಈ ಬುದ್ಧಿಮಾಂದ್ಯ ಮಕ್ಕಳೆಲ್ಲ ಬದುಕು ಕಟ್ಟಿಕೊಂಡ ದಿನ ನಮ್ಮೆಲ್ಲರ ಶಿಕ್ಷಕ ಹುದ್ದೆ ಸಾರ್ಥಕತೆ ಪಡೆಯುತ್ತದೆ.
ಪ್ರಭು ಹಿರೇಮಠ, ಶಿಕ್ಷಕ

ಈ ಶಾಲೆಯ 6 ಮ್ಯಾಜಿಕ್‌ಗಳು
ಏನೂ ಅರಿಯದ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವುದೂ ಒಂದು ಸವಾಲು. ಇಲ್ಲಿ ನಡೆಯುವ 6 ಹಂತಗಳ ಬೋಧನೆ ಮಕ್ಕಳಲ್ಲಿ ನಾನಾ ಸುಧಾರಣೆಗೆ ಕಾರಣವಾಗಿದೆ.

1. ಪ್ರಿಪ್ರೈಮರಿ ಕ್ಲಾಸ್‌: ಮಕ್ಕಳಿಗೆ ಹಲ್ಲು ಉಜ್ಜುವುದು, ಮುಖ ತೊಳೆಯುವುದು, ಸ್ನಾನ ಮಾಡುವುದು, ಬಟ್ಟೆ ಉಡುವುದು ಇತ್ಯಾದಿಯನ್ನು ಕಲಿಸುತ್ತಾರೆ. 

2. ಪ್ರೈಮರಿ ಕ್ಲಾಸ್‌: ಈ ತರಗತಿಯಲ್ಲಿ ಸ್ವರಗಳು, ಆಟೋಟ, ಡ್ಯಾನ್ಸ್‌, ಅಂಕಿ- ಸಂಖ್ಯೆ, ಸಾಮಾಜಿಕ ಕಳಕಳಿಯನ್ನು ಹೇಳಿಕೊಡುತ್ತಾರೆ.

3. ಪ್ರಿವೇಕಷನರಿ ಕ್ಲಾಸ್‌: ನಿತ್ಯ ಪ್ರಾರ್ಥನೆ, ಯೋಗಾಸನ, ಬರವಣಿಗೆಯ ಕೌಶಲಗಳು, ಕ್ರೀಡೆ ತರಬೇತಿಯನ್ನು ನೀಡುತ್ತಾರೆ.

4. ಸೆಕೆಂಡರಿ ಕ್ಲಾಸ್‌: ಪ್ರಾಣಿಗಳು, ತರಕಾರಿಗಳು, ವೃತ್ತಗಳು, ಹಣ್ಣುಗಳನ್ನು ಗುರುತಿಸುವುದು ಮತ್ತು ಹೆಸರು ಸೂಚಿಸುವುದನ್ನು ಬೋಧಿಸುತ್ತಾರೆ.

5. ಅಂಬಾಕ್ಲಾಸ್‌: ಅಕ್ಷರಗಳನ್ನು ಗುರುತಿಸುಕೆ, ಬಾಲ್‌ ಮಲ್ಟಿಫಿಕೇಷನ್‌, ಅಲ್ಫಾಬೆಟ್ಸ್‌ ಪರಿಚಯ, ಸ್ಲಿಪ್‌ ಮ್ಯಾಚಿಂಗ್‌, ಚಿತ್ರಗಳನ್ನು ಗುರುತಿಸುವಿಕೆ, ಅಕ್ಷರಗಳನ್ನು ಬರೆಸುವುದು… ಇಲ್ಲಿನ ಮುಖ್ಯ ವಿಷಯಗಳು.

6. ಡಾಟಾ ಎಂಟ್ರಿ ಕ್ಲಾಸ್‌: ಈ ತರಗತಿಯಲ್ಲಿ ಶಿಕ್ಷಕರು ಲ್ಯಾಪ್‌ಟಾಪ್‌ ಬಳಸಿ, ಕಂಪ್ಯೂಟರಿನ ಮಹತ್ವ, ಅಂತರ್ಜಾಲ, ಫೈಲ್‌ ಕ್ರಿಯೇಟ್‌, ಪೇಂಟ್‌ನಲ್ಲಿ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಾರೆ.

– ಎನ್‌.ವಿಜಯ ಸಾಣಪುರ

Advertisement

Udayavani is now on Telegram. Click here to join our channel and stay updated with the latest news.

Next